ಜೋಜೋ 
ಸ್ನೇಹದ ಕಡಲಲ್ಲಿ...

ಮೋಡಿ ಮಾಡಿದ ಜೋಜೋ !

ಇವನು ನನ್ನ ಹೃದಯಕ್ಕೆ ಹತ್ತಿರವಾದವನು..ಬಲು ಪ್ರೀತಿ ಕೊಟ್ಟವನು.ಪ್ರೀತಿಯನ್ನು ಭರಪೂರ ಪಡೆದುಕೊಂಡವನು ಸಹ...

ಇವನು  ನನ್ನ ಹೃದಯಕ್ಕೆ ಹತ್ತಿರವಾದವನು..ಬಲು ಪ್ರೀತಿ ಕೊಟ್ಟವನು.ಪ್ರೀತಿಯನ್ನು ಭರಪೂರ  ಪಡೆದುಕೊಂಡವನು ಸಹ !! ಇವನೇ ನನ್ನ ಜೋಜೋ! ಕಾಲುಗಳು ನಾಲ್ಕು, ಕಿವಿಗಳೆರಡು, ಮುದ್ದು ಮುದ್ದಾದ ಕೆಂಪು ಬಾಯಿ, ಎಲ್ಲಕ್ಕೂ ಚಂದ ಇವನ ಬಾಲ! ಬೆಕ್ಕಾಗಿ ಇವನು ಹುಟ್ಟಿದ್ದು ಇವನಮ್ಮನಾಗಿದ್ದ ಒಬ್ಬ ಬೆಕ್ಕಮ್ಮ ಇವನನ್ನು ಹೆತ್ತಾಗ. ಆದರೂ ಅಮ್ಮ-ಅಕ್ಕ- ಅಣ್ಣ,ತಂಗಿ ಜೊತೆಯಲ್ಲಿ  ಇದ್ದಿದ್ದರೆ ಇವನು ಅವರೆಲ್ಲರನ್ನು ಬಿಟ್ಟು ಎಲ್ಲೋ ಅನಾಥನಾಗಿ  ಸುತ್ತುತ್ತಿದ್ದದ್ದು ಯಾಕೆಂದು ತಿಳಿಯದೆ ನಾನಿವನನ್ನು ಮನೆಬಳಿಯಿಂದ ಎತ್ತಿಕೊಂಡಾಗ ಇವನಿಗಿನ್ನೂ ಮೂರೂವರೆ ತಿಂಗಳಂತೆ!. ( ಆ ದಿನ  ಸಂಜೆಗೆ ಮರಿ ಯಾಕೋ ಸಪ್ಪಗಿದೆ ಅನಿಸಿ ಕೊ೦ಡೊಯ್ದು ತೋರಿಸಿದಾಗ ಪಶು ಡಾಕ್ಟರು ಹೇಳಿದ್ದು)

ಅವೊತ್ತು ನಸುಕಿನ ತಿರುಗಾಟ ಮುಗಿಸಿಕೊಂಡು ಬರುವಾಗ  ನನ್ನ ಮನೆಬದಿಯಲ್ಲಿ ಕಿರುಚಾಡಿಕೊಂಡು ಅಲೆಯುತ್ತಿದ್ದ ಇವನು, ಮೂಲೆಯಲ್ಲಿ  ಗಡಗಡನೆ  ನಡುಗುತ್ತಿದ್ದದ್ದು ಕಂಡಾಗ 'ಅಯ್ಯೋ ಚಳಿಯೇನೋ 'ಅನಿಸಿ ಎತ್ತಿಕೊಂಡರೆ ಹೃದಯಕ್ಕೆ ಹತ್ತಿಕೊಂಡುಬಿಡಬೇಕೇ ಇವನು? ಮುದ್ದು ಮುದ್ದಾಗಿ ಮಿಯಾಂವುಗೈದು ನನ್ನ ಮೋಡಿಮಾಡಿಬಿಟ್ಟಿತಲ್ಲ. ಅಂದು ಇವನ 'ನಮ್ಮ ಮನೆಯ ಗೃಹಪ್ರವೇಶ 'ಆಗಿಬಿಟ್ಟಿತು! ಸರಿ, ಮುಂದೆ ನಮ್ಮ ಮನವನ್ನು- ಮನೆಯನ್ನು ತನ್ನ ಖಾಸಾ ನಿವಾಸವಾಗಿಸಿಕೊಂಡ ಇವನು ಸಾಮ್ರಾಜ್ಯವನ್ನಾಳುವ ಚಕ್ರವರ್ತಿಯಷ್ಟೇ ಸಮಥ೯ವಾಗಿ ತನ್ನ ಆಡಳಿತ ನಡೆಸಿದವನು. ಮನೆಯಲ್ಲಿ  ಎಲ್ಲೆಂದರಲ್ಲಿ,  ಯಾರದೂ ಕೋಣೆಗೆ ಯಾವಾಗೆಂದರಾವಾಗ ನುಗ್ಗುವ ಹಕ್ಕು ಇವನಿಗೇ ...ನುಗ್ಗುವುದಷ್ಟೇ ಅಲ್ಲ ಮಲಗಿದವರ ರಗ್ಗಿನಲ್ಲಿ ನುಸುಳಿ ತನ್ನನ್ನು ಆರಾಮವಾಗಿ ಪವಡಿಸಿಕೊಂಡು ಗುರ್. ಗುರ್ರ...ಗುರುಗುರು..ಎಂದು ಶುರುಹಚ್ಚಿ  ತಾನು ಗಾಢನಿದ್ದೆಗಿಳಿದು ಮಲಗಿದವರನ್ನು ಎಬ್ಬಿಸುವ ಹಕ್ಕನ್ನು ತನಗೆ ಕೊಟ್ಟು ಕೊಂಡಿದ್ದ ಮಹಾನುಭಾವ! ಇನ್ನೂ ಕತ್ತಲೆ ಹರಿದು ಬೆಳಕಾಗಿಲ್ಲ ಎಂಬ ಚುಮುಚುಮು ನಸುಕಿನಲ್ಲಿ ಇವನಿಗೆ ನನ್ನ ಮೇಲೆ ಪ್ರೀತಿ ಉಕ್ಕಿ ಬರುವುದು,  ಅದು ಯಾಕೆಂದರೆ ನಾನೊಬ್ಬಳೇ ಆಹೊತ್ತಿನಲ್ಲಿ ಎದ್ದು ಅವನಿಗೆ ಅವನ ಪ್ರಿಯವಾದ ಡಬ್ಬಿ ಊಟ 'ವಿಸ್ಕಾಸ್ ' ಅಥವಾ  'ಜರಹೈ'  ಕೊಡುವಾಕೆ! ಉಂಡು ಮುಗಿಸಿ ನಿರಂತರ ಮಿಂಯಾವುಗಳೊಂದಿಗೆ ನನ್ನ ಕಾಲು, ಕೈ ನೆಕ್ಕಿ ತನ್ನನ್ನು ಹೊರಗೆ ಬಿಡು ಎಂದು ಪೂಸಿ ಹೊಡೆದು ಬಾಗಿಲು ತೆರೆದ ತಕ್ಷಣ ಬಾಣದಂತೆ ಓಟ ಕೀಳುವ ಜೋಜೋ ಮರಳಿ ಮನೆ ಸೇರಬೇಕೆಂದರೆ ಅದು ಹೊಟ್ಟೆ ಕೆರೆದಾಗಲೇ!

   ಇನ್ನು ಅವನ ಮುದ್ದಿನಾಟಗಳ ಬಗ್ಗೆ ಇರುವ ಸಿಹಿನೆನಪುಗಳಿಗೆ ಲೆಕ್ಕವೇ ಇಲ್ಲ... ಕಾಪೆ೯ಟ್ಟು, ಸೋಫಾ, ಸೂಟ್ ಕೇಸು,ಇತ್ಯಾದಿಗಳನ್ನೆಲ್ಲ ತನ್ನ ಉಗುರುಗಳಿಂದ ಪರಪರ ಕೆರೆದು ಯಾರಾದರೂ ಗದರಿದಾಗ ತಪ್ಪಿತಸ್ಥನಂತೆ ಮುಖಮಾಡಿ ನಮ್ಮ ಮಡಿಲಿಗೇ ಬಂದು ಕೂರುವ ಪರಿ, ರಿಬ್ಬನ್ ಒಂದನ್ನು ಹಿಡಿದು ಆಡಿಸಿದರೆ ಎರಡೆರಡು ಅಡಿ ನೆಗೆದು ಅದನ್ನು  ಹಿಡಿದೋಡುವ ಚಂದ...ಮನೆಯಿಡೀ ಪಾದರಸದಂತೆ ಓಡಾಡುವ ಚೆಲುವ..ಪರದೆಗಳನ್ನು ಸರಸರನೆ ಏರಿ ನೇತಾಡುವ ತುಂಟ..ನಿದ್ದೆಯ ನಾನಾ ಭಂಗಿಗಳು...ಒಂದೊಂದೂ ಚಂದವೇ!  ನಾನು ಅಥವಾ ನನ್ನ ಮಗ ಕರೆದು ಮಾತನಾಡಿಸಿದಾಗ ಮಲಗಿದಲ್ಲೇ ಮಿದುವಾಗಿ ಒ೦ದೆರಡು 'ಮಿಯಾ೦ವು'ಗಳನ್ನು ನಮ್ಮತ್ತ ತೂರಿ ಮತ್ತೆ ಸುತ್ತಿಕೊ೦ಡು ಗಾಢ ನಿದ್ರೆಯಲ್ಲಿಳಿವ  ಕು೦ಭಕರ್ಣನಿವ..

ನನಗೆ ಜೋಜೋ ಬರೀ ಸಾಕು ಬೆಕ್ಕಾದವನಲ್ಲ, ಆಪ್ತ ಸ್ನೇಹಿತನಂತಿದ್ದ..ಮನಸ್ಸಿನ ಸಹಚರನಂತೆ,ನೋವು,ನಿರಾಸೆಯ ಗಳಿಗೆಗಳ ಶಾಮಕದಂತೆ...ಖುಶಿಯ ಕ್ಷಣಗಳನ್ನು ಹೆಚ್ಚಿಸುವ ಜೇನಹನಿಯಾಗಿ, ಬೇಸರವೆಂಬ ಪದದ ಸುಳಿವೇ ಇಲ್ಲದಂತಾಗಿಸಿದ ಜೋಜೋ.. ಊರಿಗೆಲ್ಲಾದರೂ ಹೋದರೆ ಮರಳಿ ಬ೦ದ ಕ್ಷಣದ ಅವನ ಸ೦ಭ್ರಮ ವರ್ಣಿಸಲಸಾಧ್ಯ..ಕಾಲಿಗೆ ಸುತ್ತಿ...ಸುತ್ತೀ.. ಅನವರತ ಮಿಯಾ೦ವುಗಳೊ೦ದಿಗೆ ತನ್ನ ಬೇಸರವನ್ನೂ, ಪ್ರೀತಿಯನ್ನೂ ತೋರಿ ಮಡಿಲಿಗೆತ್ತಿಕೊ೦ಡರೆ ಎರಡು ನಿಮಿಷ ನಿದ್ದೆ ಮಾಡಿ ಮತ್ತೆ ಓಟ ಕೀಳುವ ಆ ಪರಿ.. ಬಾಲ್ಕನಿಯಲ್ಲಿ ಬ೦ದಿಣುಕುವ ಪಾರಿವಾಳಗಳ ಮೇಲೆ ತನ್ನ ಶೌರ್ಯ ತೋರದೆ ಬಿಟ್ಟವನಲ್ಲ ಇವನು..ಈ ಜೋಜೊನ ಕೈಯಿ೦ದ (ಕಾಲಿನಿ೦ದ..) ಪಾರಿವಾಳಗಳನ್ನು ಎಷ್ಟೋ ಬಾರಿ ಪಾರು ಮಾಡಿದ ಸಮಯಗಳು೦ಟು.ನನ್ನ ಬೇಟೆಯನ್ನು ತಪ್ಪಿಸಿದೆಯಲ್ಲ ನೀನೆ೦ಥ ನಿರ್ದಯಿ  ಎ೦ಬ ನೋಟವನ್ನು ನನ್ನತ್ತ ಬೀರಿ ಬಾಲ ತಿರುಗಿಸಿಕೊ೦ಡು ಆಚೆ ನಡೆಯುವ ಗತ್ತಿನ  ಜೋಜೋ..
 ಇಲ್ಲ.... ಮರೆಯುವುದಾಗದು ಈ ಮೂಕಜೀವ ನಮಗಿತ್ತ ಸಹಜೀವನ ಸುಖವನ್ನು. ಮನುಷ್ಯರಿಗೆ ಸ್ನೇಹ ಪ್ರೀತಿ ವಿಶ್ವಾಸಗಳನ್ನು ಮನುಶ್ಯರಿಗಿ೦ತಲೂ ಮಿಗಿಲಾಗಿ ನೀಡಬಲ್ಲ ತಮ್ಮ ಸಾಮರ್ಥ್ಯವನ್ನು ಪ್ರಾಣಿಗಳು ಈಗಾಗಲೇ ಸಾಬೀತುಪಡಿಸಿವೆ, ಅದರ ಪ್ರತ್ಯಕ್ಷ ಪ್ರಮಾಣ ನನಗಿಲ್ಲಿ ದೊರೆತ ಖುಷಿ...
ಮರೆಯಲುಂಟೇ ಇವನ ಸಹವಾಸದಲ್ಲಿ ಕಳೆದ ರಸನಿಮಿಷಗಳ? ?

- ಜಯಶ್ರೀ ದೇಶಪಾಂಡೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT