ಸ್ನೇಹಿತ ಎಂದರೆ ಹೇಗಿರಬೇಕು. ಹೌದು ,ನನ್ನ ಪ್ರಕಾರ ಬಾಲ್ಯದ ನೆನಪುಗಳು ಕೊನೆ ಉಸಿರು ಇರುವವರೆಗೂ ನೆನಪಿನಲ್ಲಿ ಹಚ್ಚ ಹಸಿರಾಗಿ ಹೃದಯದಲ್ಲಿ ಉಳಿಯಬೇಕು.ಅಂತಹ ...ಒಂದು ಬಾಂಧವ್ಯ ನನ್ನ ಮತ್ತು ನನ್ನ ಸ್ನೇಹಿತನ ಮಧ್ಯ ಇಂದಿಗೂ ಸಹ್ಯ ಸಿಹಿ ಅನುಬಂಧವಾಗಿ ಹಾಗೆ ಉಳಿದುಕೊಂಡಿದೆ. ನಾವಿಬ್ಬರೂ ಇಂದಿಗೂ ಅದೇ ಆತ್ಮೀಯ ಸ್ನೇಹ ಸಂಬಂಧವನ್ನು ಕಾಪಾದಿಕೊಂಡಿದ್ದೇವೆ. ಆತ ಶಾಂತಿ ಎನ್ನುತ್ತಾನೆ...ನಾನು ಕ್ರಾಂತಿ ಎನ್ನುತ್ತೇನೆ. ಆದರೆ,ಇಬ್ಬರ ಉದ್ದೇಶಗಳೂ ಒಂದೇ ಆಗಿರುವುದು ನನ್ನ ಇಡೀ ಹಳ್ಳಿಗೆ ಗೊತ್ತು.
ಹಾಗಾದರೆ ನನ್ನ ಸ್ನೇಹಿತ ಯಾರು..? ನಿಮ್ಮ ಕುತೂಹಲ ತಕ್ಷಣವೇ ತಣಿಸುತ್ತೇನೆ. ಹೌದು ..ಆ ನನ್ನ ಬಾಲ್ಯ ಸ್ನೇಹಿತನ ಹೆಸರು. ಮೌನೇಶ ಬಿದ್ದಾಡೆಪ್ಪ ಕುರುವತ್ತಿ . ನಾನು ಮತ್ತು ಮೌನೇಶ ಇಬ್ಬರೂ ಬಾಲ್ಯ ಸ್ನೇಹಿತರು. ಒಂದನೇ ತರಗತಿಗೂ ಮುಂಚಿನಿಂದಲೇ ನಾವಿಬ್ಬರೂ ಚಡ್ಡಿ ದೋಸ್ತುಗಳು. ನಾವಿಬ್ಬರೂ ಹುಟ್ಟಿದ್ದು, ಬೆಳೆದದ್ದು ..ಓದಿದ್ದು ..ಆಡಿದ್ದು .ಎಲ್ಲವೂ ಇಂದು ಸುರುಳಿಯಾಗಿ ಬಿಚ್ಚಿಕೊಳ್ಳುತ್ತಿದೆ.
ಮೂಲತಹ ಧಾರವಾಡ ಜಿಲ್ಲೆಯ (ಈಗಿನ ಹಾವೇರಿ ಜಿಲ್ಲೆಯಲ್ಲಿರುವ) ರಾಣೇಬೆನ್ನೂರು ತಾಲೂಕಿನ ಚೌಡಯ್ಯದಾನಪುರ ನಮ್ಮೂರು. ನಾವಿಬ್ಬರೂ ಆಟಾಡಿಕೊಂಡು ಬೆಳೆದದ್ದು ..ಪ್ರಾಥಮಿಕ ಶಾಲಾ ಶಿಕ್ಷಣ ಒಂದನೇ ತರಗತಿಯಿಂದ ಏಳನೇ ತರಗತಿವರೆಗೆ ಓದಿದ್ದು ಇಲ್ಲಿಯೇ.ನಮ್ಮಿಬ್ಬರ ಮದ್ಯ ಓದಿನಲ್ಲಿ..ಆಟದಲ್ಲಿ..ಸ್ಪರ್ಧೆ ಇರುತ್ತಿತ್ತು. ನಾನು ಶಿಕ್ಷಕನ ಪುತ್ರ.ಆತ ಬಡತನದ ಮಧ್ಯ ಓದಿದ ಪ್ರತಿಭಾವಂತ.
ನನಗೆ ತಿನ್ನುವ ಅತಿಯಾದ ಹವ್ಯಾಸ. ನನ್ನ ತಂದೆಯೇ ಶಿಕ್ಷಕರು.ನನ್ನನ್ನು ಹುಡುಕಿದ್ದಾರೆ..ನಾನು ಕಂಡಿಲ್ಲ.ಎಲ್ಲಿ ರಾಜು ಕಾಣುತ್ತಿಲ್ಲಾ..ಎಂದು ಕೇಳಿದ್ದಾರೆ. ಆದರೆ, ಕೂಡಲೇ ನನ್ನನ್ನು ಕೈ ತೋರಿಸಿ ಹೇಳಿದ್ದು ಅದೇ ಮೌನೇಶ.ನಾನು ನನ್ನ ತಂದೆಯು ಆದ ಶಿಕ್ಷಕ ಕುಳಿತುಕೊಳ್ಳುವ ಕುರ್ಚಿಯ ಕೆಳಗೆ ಕುಳಿತು ಜೇಬಿನಿಂದ ತೆಗೆದು ತೆಗೆದು ಬುತ್ತಿ ತಿನ್ನುತ್ತಿದ್ದೆ.ಈಗಲೂ ನನಗೆ ನೆನಪಿದೆ. ನೆನಪಾದ ತಕ್ಷಣವೇ ನಗು ಉಕ್ಕಿಬರುತ್ತಿದೆ.
ಅಲ್ಲದೆ, ಇನ್ನೊಂದು ಕಹಿ ಸಿಹಿ ನೆನಪಿನ ಬುತ್ತಿ ನಿಮ್ಮ ಮುಂದೆ ಹೇಳಿಕೊಳ್ಳುತ್ತೇನೆ.ನನಗೆ ತಿನ್ನುವ ಚಟ.ಅಷ್ಟೇ ಅಲ್ಲ..ದುಡುಕಿನ ಸ್ವಭಾವ ಕೂಡ. ಮೌನೇಶ ನಾನು ಆಡುತ್ತಿದ್ದ ಜಾಗಕ್ಕೆ ಬಂದ.ಆತ ಏನೋ ತಿನ್ನುತ್ತಿದ್ದ. ನನಗೆ ಒಂದು ಮಾತು ಹೇಳಿದ ನಾನು ನಿನಗೆ ಏನೋ ಕೊಡುತ್ತೇನೆ.ನೋಡಬಾರದು..ಯಾರಿಗೂ ಹೇಳಬಾರದು..ತೋರಿಸಬಾರದು...ನಾನು ಹಿಂದೆ ಮುಂದೆ ನೋಡದೆ ಕೈಚಾಚಿದೆ.ಮುಚ್ಚಿ ಕೊಟ್ಟದ್ದನ್ನು ಗಬಕ್ಕನೆ ಬಾಯಲ್ಲಿ ಹಾಕಿಕೊಂಡು ಜಗಿದೆ ನೋಡಿ..ಬಾಯೆಲ್ಲಾ ಕಹಿ. ನನ್ನ ತಂದೆಯವರೆಗೆ ದೂರು ಒಯ್ದೆ.ಆಗ ನಾನು ಬೈಸಿಕೊಂಡೆ. ಆದರೆ ಈ ವಿಷಯ ತಿಳಿದ ಇಡೀ ಶಾಲೆಯಲ್ಲಿ ನಗುವಿನ ಅಲೆ ಎದ್ದಿತ್ತು.
ಆತ ನನ್ನ ಕೈಗೆ ಮುಚ್ಚಿ ಕೊಟ್ಟದ್ದು ಏನು..? ಶೇಂಗಾ ಬೀಜ... ಎಂದು ತಿಳಿದುಕೊಂಡದ್ದು ಮತ್ತು ಮುಷ್ಠಿ ಬಿಚ್ಚಿ ನೋಡದೆ ಬಾಯಲ್ಲಿ ಹಾಕಿಕೊಂಡು ಜಗಿದದ್ದು ಬೇವಿನ ಬೀಜ. ನಾವಿಬ್ಬರೂ ಈಗಲೂ ಎದುರುಬದುರಾದಾಗ ..ಬೇವಿನ ಸಿಹಿಯ ನೆನೆದು ನಗುತ್ತೇವೆ. ಬೇವಿನ ಕಹಿ ಸ್ನೇಹದ ಸಿಹಿ ನಮ್ಮಿಬ್ಬರನ್ನು ಮತ್ತಷ್ಟು ಹತ್ತಿರವಾಗಿಸಿದ್ದು ಮಾತ್ರ ಸತ್ಯ.
ನನ್ನ ಮನೆಗೆ ಮೌನದ ಸಿಹಿ ಮಾತಿನ ಶಾಂತಿಧೂತ ಬಂದಾಗ ನೆನಪಿಸಿಕೊಂಡದ್ದು ಏನು ಗೊತ್ತೇ... ? ನಾವು ಚಿಕ್ಕವರಿದ್ದಾಗ ಲಗೋರಿ ಆಡಿದ್ದು. ಖೊಖೊ ಆಡಿದ್ದು.ಸಾಭಿನಯ ಗೀತೆ.,ಡಮ್ಬೇಲ್ಸ , ಲೇಜಿಮ್..ಕಬಡ್ಡಿ..ಈಗ ನಮ್ಮ ಮಕ್ಕಳ ಭಾಗ್ಯಕ್ಕಿಲ್ಲ. ನೆನಪು ಮಾಸದು..ಸದಾ ಇರುತ್ತದೆ. ಸ್ನೇಹದ ಕಡಲಲ್ಲಿ ನೆನಪುಗಳ ಜೊತೆಯಲ್ಲಿ ಸಾಗಿದ್ದೇವೆ.
-ಜೆ.ಎಮ್.ರಾಜಶೇಖರ
ಮನೆ ಸಂಖ್ಯೆ ೩೬ "ಅಮ್ಮ" ಮೌಂಟ್ ವ್ಯೂ ಸ್ಕೂಲ್ ಹತ್ತಿರ ,
ಹುನಸಿಕಟ್ಟಿ ರಸ್ತೆ ,
ರಾಣೇಬೆನ್ನೂರು ೫೮೧೧೧೫ ಜಿಲ್ಲಾ ಹಾವೇರಿ