ಗ್ಯಾಡ್ಜೆಟ್ಸ್

'ಕೇಂದ್ರ ಸ್ಥಾನದಲ್ಲಿ ಸ್ಟಾರ್ಟ್ ಮೆನು': ಬಹು ನಿರೀಕ್ಷಿತ ವಿಂಡೋಸ್ 11 ಆಪರೇಟಿಂಗ್ ಸಿಸ್ಟಮ್ ಬಿಡುಗಡೆ

Srinivasamurthy VN

ನವದೆಹಲಿ: ಟೆಕ್ ದೈತ್ಯ ಮೈಕ್ರೋಸಾಫ್ಟ್ ಮುಂದಿನ ಪೀಳಿಗೆಯ ಆಪರೇಟಿಂಗ್ ಸಿಸ್ಟಮ್ ವಿಂಡೋಸ್ 11 ಅನ್ನು ಬಿಡುಗಡೆ ಮಾಡಿದೆ.

ವಿಂಡೋಸ್ 10 ಬಿಡುಗಡೆಯಾದ ಬರೊಬ್ಬರಿ 6 ವರ್ಷಗಳ ಬಳಿಕ ವಿಂಡೋಸ್ 11 ಬಿಡುಗಡೆಯಾಗಿದೆ. ವಿಂಡೋಸ್ 11 ಹೊಸ ಬಳಕೆದಾರ ಇಂಟರ್ಫೇಸ್, ಹೊಸ ವಿಂಡೋಸ್ ಸ್ಟೋರ್ ಮತ್ತು ಕಾರ್ಯಕ್ಷಮತೆಯ ಸುಧಾರಣೆಗಳ ಮೇಲೆ ಕೇಂದ್ರೀಕರಿಸುತ್ತದೆ. ನೂತನ ಆಪರೇಟಿಂಗ್ ಸಿಸ್ಟಮ್ ನಲ್ಲಿ ಕೆಲವೊಂದು ಮಹತ್ತರ  ಬದಲಾವಣೆ ಮಾಡಲಾಗಿದ್ದು, ಸ್ಟಾರ್ಟ್ ಬಟನ್ ಮತ್ತು ಟಾಸ್ಕ್ ಬಾರ್ ಎಡಬದಿಯ ಬದಲಿಗೆ ಡಿಸ್ ಪ್ಲೇಯ ಮಧ್ಯ ಭಾಗದಲ್ಲಿ ಸೇರಿಸಲಾಗಿದೆ.

ಅಂತೆಯೇ ವಿಂಡೋಸ್ 10ನಲ್ಲಿದ್ದ ಲೈವ್ ಟೈಲ್ ಗಳನ್ನು ವಿಂಡೋಸ್ 11ನಲ್ಲಿ ತೆಗೆದುಹಾಕಲಾಗಿದೆ. ಅವುಗಳನ್ನು ಐಕಾನ್ ಗಳ ಗ್ರಿಡ್ ಆಗಿ ಬದಲಾಯಿಸಲಾಗಿದೆ. ಮತ್ತು  ಅವುಗಳನ್ನು ಮರುಜೋಡಿಸಬಹುದಾಗಿದೆ. ಅಲ್ಲದೆ ಅದನ್ನು ಹೊಸ ಸ್ಟಾರ್ಟ್ ಗೆ ಪಿನ್ ಮಾಡಬಹುದು ಎಂದು ಮೈಕ್ರೋಸಾಫ್ಟ್ ಹೇಳಿದೆ.

ಅಂತೆಯೇ ವಿಂಡೋಸ್ 11 ನಲ್ಲಿ ಕ್ಯಾಲೆಂಡರ್, ಹವಾಮಾನ, ಕ್ರೀಡಾ ಲೀಡರ್ ಬೋರ್ಡ್ ನಂತಹ ವಿಷಯಗಳನ್ನು ಒಳಗೊಂಡಿರುವ ವಿಜೆಟ್ ಗಳನ್ನು ವೃತ್ತಾಕಾರದಲ್ಲಿ ಅಳವಡಿಸಲಾಗಿದೆ. ಇದಲ್ಲದೆ ಸ್ಪ್ಲಿಟ್ ನೋಟಿಫಿಕೇಶನ್ ಮತ್ತು ಕ್ವಿಕ್ ರಿಪ್ಲೇ ಇರುವ ಯುಐ ನೊಂದಿಗೆ ಸುಧಾರಿತ ಸಿಸ್ಟಂ ಟ್ರೇ ಸಹ ಇದೆ. ಅಲ್ಲದೆ,  ನೂತನ ಆಪರೇಟಿಂಗ್ ಸಿಸ್ಟಮ್ ವಿಂಡೋಸ್ 11 ನ ನೂತನ ಅಪ್ ಡೇಟ್ ಗಾತ್ರದಲ್ಲಿ ಶೇ.40 ರಷ್ಟು ಚಿಕ್ಕದಾಗಿದೆ. ಅಲ್ಲದೆ ವೇಗವಾಗಿ ಅಪ್ ಡೇಟ್ ಆಗುತ್ತದೆ.

ಹೊಸ ಪೀಳಿಗೆಯ ಆರಂಭ
ಇನ್ನು ನೂತನ ಆಪರೇಟಿಂಗ್ ಸಿಸ್ಟಮ್ ಅನ್ನು ವಿಂಡೋಸ್ ಇತಿಹಾಸದಲ್ಲಿ ಪ್ರಮುಖ ಮೈಲಿಗಲ್ಲು ಎಂದು ಹೇಳಿರುವ ಮೈಕ್ರೋಸಾಫ್ಟ್ ಮುಖ್ಯಸ್ಥ ಸತ್ಯ ನಾಡೆಲ್ಲಾ ಅವರು, ಇದು ಹೊಸ ಪೀಳಿಗೆಯ ಆರಂಭ ಎಂದು ಬಣ್ಣಿಸಿದ್ದಾರೆ. 

ಅಂತೆಯೇ ಮೈಕ್ರೋಸಾಫ್ಟ್ ನ ಮುಖ್ಯ ಉತ್ಪನ್ನಾಧಿಕಾರಿ ಪನೋಸ್ ಪನಾಯ್, ಹೊಸ ಡೆಸ್ಕ್ ಟಾಪ್ ಆಪರೇಟಿಂಗ್ ಸಿಸ್ಟಂ ಅನ್ನು 'ನೀವು ಇಷ್ಟಪಡುವ ವಿಷಯಗಳಿಗೆ ನಿಮ್ಮನ್ನು ಹತ್ತಿರ ತರುವ ವಿಂಡೋಸ್' ಎಂದು ಬಣ್ಣಿಸಿದ್ದಾರೆ. ಅಲ್ಲದೆ ವಿಂಡೋಸ್ 11 ಅಮೆಜಾನ್ ನ ಅಪ್ಲಿಕೇಶನ್ ಸ್ಟೋರ್ ಮೂಲಕ ಆಂಡ್ರಾಯ್ಡ್  ಅಪ್ಲಿಕೇಶನ್ ಗಳನ್ನು ಬೆಂಬಲಿಸುತ್ತದೆ. ಇದರರ್ಥ ವಿಂಡೋಸ್ ನಲ್ಲಿ ಲಭ್ಯವಿಲ್ಲದ ಲಕ್ಷಾಂತರ ಜನಪ್ರಿಯ ಅಪ್ಲಿಕೇಶನ್ ಗಳು ಅತ್ಯಂತ ಜನಪ್ರಿಯ ಡೆಸ್ಕ್ ಟಾಪ್ ಆಪರೇಟಿಂಗ್ ಸಿಸ್ಟಂನಲ್ಲಿ ಡೌನ್ ಲೋಡ್ ಮಾಡಲು ಲಭ್ಯವಿರುತ್ತವೆ ಎಂದು ಹೇಳಿದ್ದಾರೆ.

SCROLL FOR NEXT