ಹೊಟ್ಟೆನೋವಿಗಿಲ್ಲಿದೆ ಮನೆಮದ್ದು!
ಹೊಟ್ಟೆನೋವು ಸಾಮಾನ್ಯವಾಗಿ ಎಲ್ಲರೂ ಎದುರಿಸುವ ಸಾಮಾನ್ಯ ಸಮಸ್ಯೆ. ಈ ಹೊಟ್ಟೆ ನೋವು ಯಾವಾಗ ಹೇಗೆ ಬರುತ್ತದೆ ಎಂಬುದನ್ನು ಊಹಿಸಲು ಬಹಳ ಕಷ್ಟ. ಹೊಟ್ಟೆನೋವು ಬಂದರೆ ಯಾವ ಕೆಲಸ ಮಾಡುವುದಕ್ಕೂ ಸಾಧ್ಯವಾಗುವುದಿಲ್ಲ. ಈ ಸಮಯದಲ್ಲಿ ಯಾವಾಗ ಹೋಗುತ್ತದೋ ಎಂಬುದೊಂದೇ ಮೊದಲು ನಮ್ಮ ಮನಸ್ಸಿಗೆ ಬರುವುದು.
ಇಂತಹ ಹೊಟ್ಟೆನೋವು ಸಾಮಾನ್ಯವಾಗಿ ಊಟ ಮಾಡಿದಾಗ ಆ ಆಹಾರ ದೇಹಕ್ಕೆ ಸರಿಹೊಂದದಿದ್ದಾಗ, ಗ್ಯಾಸ್ಟ್ರಿಕ್ ಬಂದಾಗ ಹಾಗೂ ಅಜೀರ್ಣವಾದಾಗಲೆಲ್ಲಾ ಬರುವುದು ಸಾಮಾನ್ಯವೇ. ಈ ರೀತಿಯಾದ ಸಣ್ಣಪುಟ್ಟ ನೋವಿಗೆಲ್ಲಾ ಆಸ್ಪತ್ರೆಗೆ ಹೋಗಿ ದುಬಾರಿ ಔಷಧಿಗಳಿಗೆ ಹಣಕೊಟ್ಟು ಬಾಯಿ, ದೇಹ ಹಾಳು ಮಾಡಿಕೊಳ್ಳುವುದಕ್ಕಿಂತ ನಮ್ಮ ಮನೆಯಲ್ಲೇ ಬಳಸುವ ಸಾಮಾನ್ಯ ವಸ್ತುಗಳನ್ನು ಬಳಸಿ ನಮ್ಮ ರೋಗಗಳಿಗೆ ನಾವೇ ಚಿಕಿತ್ಸೆ ಪಡೆದುಕೊಳ್ಳಬಹುದು ಮತ್ತು ಆರೋಗ್ಯವಾಗಿವನ್ನು ಕಾಪಾಡಿಕೊಳ್ಳಬಹುದು.
ಹೊಟ್ಟೆ ನೋವಿಗೆ ಮನೆಯಲ್ಲೇ ಮಾಡಿಕೊಳ್ಳಬಹುದಾದ ಮನೆಮದ್ದು ಇಲ್ಲಿದೆ...
- ನಿಂಬೆರಸಕ್ಕೆ ಸ್ವಲ್ಪ ಪುದೀನಾ ರಸ, ಶುಂಠಿ ರಸ ಹಾಗೂ ಸ್ವಲ್ಪ ಮೆಣಸುಪುಡಿ ಹಾಕಿ ಕುಡಿಯುವುದರಿಂದ ಹೊಟ್ಟೆನೋವು ಶಮನಗೊಳ್ಳುತ್ತದೆ.
- ಕೆಲವು ಬಾರಿ ಹೊಟ್ಟೆ ಹಿಡಿದುಕೊಂಡಿದೆ ಎಂದು ಹೇಳುತ್ತಿರುತ್ತಾರೆ. ಈ ವೇಳೆ ಶುಂಠಿಯಿಂದ ರಸ ಹಿಂಡಿ ನಂತರ ರಸ ತೆಗೆದ ಶುಂಠಿಯ ತಿರುಳಿನಿಂದ ಹೊಟ್ಟೆಯ ಮೇಲ್ಭಾಗದಲ್ಲಿ ಮಸಾಜ್ ಮಾಡುವುದರಿಂದ ಹೊಟ್ಟೆ ಸಡಿಲಗೊಳ್ಳುತ್ತದೆ.
- ಹೊಟ್ಟೆ ನೋವು ಬಂದಾಗ ದ್ರವ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವದರಿಂದ ನೋವು ಶಮನಗೊಳ್ಳುತ್ತದೆ.
- ಹೊಟ್ಟೆನೋವು ಬಂದ ಸಂದರ್ಭದಲ್ಲಿ ಚಾಕೋಲೇಟ್ ಹಾಗೂ ಡೈರಿ ಪದಾರ್ಥಗಳನ್ನು ತಿನ್ನಬಾರದು. ಇಂತಹ ಪದಾರ್ಥಗಳನ್ನು ತಿಂದಾಗ ಅಜೀರ್ಣ ಸಮಸ್ಯೆ ಎದುರಾಗಿ ನೋವು ಮತ್ತಷ್ಟು ಉಲ್ಭಣಗೊಳ್ಳುತ್ತದೆ. ಇಂತಹ ಸಮಯದಲ್ಲಿ ಸಾಧ್ಯವಾದಷ್ಟು ಮನೆಯಲ್ಲಿನ ಆರೋಗ್ಯಕರ ಆಹಾರ ಪದಾರ್ಥಗಳನ್ನೇ ಸೇವಿಸಬೇಕು.
- ಪ್ರತೀ ದಿನ ಹೊಟ್ಟೆನೋವಿನಿಂದ ಬಳಲುತ್ತಿರುವವರು ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ನೀರು ಕುಡಿದು ನಂತರ ವಾಕಿಂಗ್ ಗೆ ಹೋಗುವುದರಿಂದ ದೇಹದಲ್ಲಿ ಜೀರ್ಣ ಕ್ರಿಯೆ ಶಕ್ತಿ ಹೆಚ್ಚಾಗುತ್ತದೆ. ಇದರಿಂದ ಹೊಟ್ಟೆನೋವು ದಿನಕಳೆದಂತೆ ಶಮನಗೊಳ್ಳುತ್ತದೆ.
- ಒಂದು ಚಮಚ ಸೋಂಪು, ನಿಂಬೆ ರಸ ಹಾಗೂ ಸ್ವಲ್ಪ ಉಪ್ಪು ಮತ್ತು ಕರಿಮೆಣಸಿನಪುಡಿಯನ್ನು ಬೆಚ್ಚಗಿನ ನೀರಿಗೆ ಹಾಕಿ ಕುಡಿಯುವುದರಿಂದ ಹೊಟ್ಟೆನೋವು ಶೀಘ್ರದಲ್ಲಿಯೇ ಶಮನಗೊಳ್ಳುತ್ತದೆ.
- 7-8 ಚಮಚ ನೀರಿಗೆ ಉಪ್ಪು ಮಿಶ್ರಿತ ಬೆಳ್ಳುಳ್ಳಿ ರಸವನ್ನು ಮಿಶ್ರಣ ಮಾಡಿ ದಿನಕ್ಕೆರಡು ಬಾರಿ ಸೇವಿಸುವುದರಿಂದ ನೋವು ಶಮನಗೊಳ್ಳುತ್ತದೆ.
- ಕೊತ್ತಂಬರಿ (ದನಿಯಾ)ಬೀಜ ಮತ್ತು ಒಣಶುಂಠಿಯನ್ನು ಚೆನ್ನಾಗಿ ಜಜ್ಜಿಕೊಂಡು ಕುದಿಯುವ ನೀರಿಗೆ ಹಾಕಿ ಒಂದೆರಡು ನಿಮಿಷ ಒಲೆಯ ಮೇಲಿಟ್ಟು ನಂತರ ಇದಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಶೋಧಿಸಬೇಕು. ಈ ಕಷಾಯವನ್ನು ಕುಡಿದರೆ ಹೊಟ್ಟೆನೋವು ಮಾಯವಾಗುತ್ತದೆ.
- ತುಳಸಿ ರಸ, ಬೆಳ್ಳುಳ್ಳಿ ರಸ ಹಾಗೂ ಜೇನುತಪ್ಪವನ್ನು ಸಮಭಾಗ ತೆಗೆದುಕೊಂಡು ಚೆನ್ನಾಗಿ ಮಿಶ್ರಣ ಮಾಡಿ ಸೇವಿಸಿದರೆ ಹೊಟ್ಟೆಯಲ್ಲಿನ ಉರಿ ಕಡಿಮೆಯಾಗುತ್ತದೆ.
- ಒಂದು ಲೋಟಕ್ಕೆ ಸ್ವಲ್ಪ ನಿಂಬೆ ರಸ, ಉಪ್ಪು ಹಾಗೂ ಅಡುಗೆ ಸೋಡ, ನೀರು ಹಾಕಿ ಕುಡಿಯುವುದರಿಂದ ಅಜೀರ್ಣಕ್ಕೆ ಬಂದ ಹೊಟ್ಟೆನೋವು ಹೋಗುತ್ತದೆ.
- ಸೇಬು, ಕ್ಯಾರೆಟ್ ಬೀಟ್ ರೂಟ್ ಜ್ಯೂಸ್ ಹಾಗೂ ನಾರು ಪದಾರ್ಥವಿರುವ ಆಹಾರ ಸೇವಿಸಿದರೆ ಹೊಟ್ಟೆ ಸಂಬಂಧ ಖಾಯಿಲೆಗಳು ಮಾಯವಾಗುತ್ತವೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos