ಬೆಂಗಳೂರು: ರಾಜಧಾನಿಯ ಜನರು ಜೀವನ ಶೈಲಿಯಿಂದ ಬರುವಂತಹ ಕಾಯಿಲೆಗಳಿಂದ ಹೆಚ್ಚು ಹೆಚ್ಚು ಬಳಲುತ್ತಿದ್ದಾರೆ!
ನಗರದಲ್ಲಿ ದೀರ್ಘಕಾಲೀನ ರೋಗಗಳಿಂದ ಬಳಲುತ್ತಿರುವವರು ಶೇ.6.2ರಷ್ಟು, ಸಾಂಕ್ರಾಮಿಕ ರೋಗದಿಂದ ಶೇ.1.7ರಷ್ಟು, ಶೇ.14.8 ಸಾಮಾನ್ಯ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ, ಶೇ.77.3 ಜನರು ಜೀವನ ಶೈಲಿಯಿಂದ ಬರುವಂತಹ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.
ಇದು ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆ (ಐಸೆಕ್)ಯ ಪ್ರಾಧ್ಯಾಪಕರು ನಡೆಸಿದ ಪ್ರಾಯೋಗಿಕ ಅಧ್ಯಯನದಲ್ಲಿ ಕಂಡುಬಂದ ಅಂಶ. ಸಮೀಕ್ಷೆಗೆ ಒಳಪಟ್ಟವರ ಪೈಕಿ ಜೀವನ ಶೈಲಿಯಿಂದ ಬರುವ ಸಮಸ್ಯೆಗಳಲ್ಲಿ ಪ್ರಮುಖವಾಗಿ ಅಧಿಕ ರಕ್ತದೊತ್ತಡ (ಹೈಪರ್ ಟೆನ್ಷನ್)ಕ್ಕೆ ಶೇ.42 ಮಂದಿ ಸಿಲುಕಿದ್ದರೆ, ಶೇ.13ರಷ್ಟು ಜನ ಮಧುಮೇಹದಿಂದ ಬಳಲುತ್ತಿದ್ದಾರೆ. ತಲೆನೋವು ಇತ್ಯಾದಿ ಸಣ್ಣಪುಟ್ಟ ಸಾಮಾನ್ಯ ಸಮಸ್ಯೆಗಳನ್ನು ಶೇ.15ರಷ್ಟು ಮಂದಿ ಅನುಭವಿಸುತ್ತಿದ್ದು, ಇದಕ್ಕೆ ಒತ್ತಡ, ಉದ್ವೇಗ ಮತ್ತು ಹೆಚ್ಚಿನ ವಾಯುಮಾಲಿನ್ಯ ಕಾರಣವಾಗಿದೆ.
ಈ ರೀತಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರ ಪೈಕಿ ಶೇ.94ರಷ್ಟು ಜನ ಖಾಸಗಿ ಆಸ್ಪತ್ರೆ ಮತ್ತು ಖಾಸಗಿ ಕ್ಲಿನಿಕ್‍ಗಳನ್ನೇ ಅವಲಂಬಿಸಿದರೆ, ಸರ್ಕಾರಿ ಆರೋಗ್ಯ ಸೇವೆಯನ್ನು ಬಳಸಿಕೊಳ್ಳುವವರು ಶೇ.5ರಷ್ಟು ಮಾತ್ರ ಎಂದು ಸಮೀಕ್ಷೆ ಹೇಳಿದೆ.
ಕಚೇರಿ ಪ್ರಯಾಣ ಅವಧಿ ಹೆಚ್ಚಳ: ಬೆಂಗಳೂರಲ್ಲಿ ಕಾರ್ಯಕ್ಷೇತ್ರಕ್ಕೆ ಪ್ರತಿ ದಿನ ತೆರಳುವ ಅವಧಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. 1991ರಲ್ಲಿ ನಡೆದ ಇದೇ ರೀತಿಯ ಪ್ರಾಯೋಗಿಕ ಸರ್ವೆಯಲ್ಲಿ ಬೆಂಗಳೂರಿಗರು ಪ್ರತಿ ದಿನ ಮನೆಯಿಂದ ಕಚೇರಿಗೆ ತಲುಪಲು ತೆಗೆದುಕೊಳ್ಳುವ ಸರಾಸರಿ ಅವಧಿ 25-30 ನಿಮಿಷವಿತ್ತು. ಆದರೆ, 2001ರಲ್ಲಿ ಈ ಅವಧಿ 40 ನಿಮಿಷಕ್ಕೆ ಏರಿಕೆಯಾಗಿತ್ತು. ಇದೀಗ ಈ ಸರಾಸರಿ ಅವಧಿ 42 ನಿಮಿಷಕ್ಕೆ ವಿಸ್ತಾರಗೊಂಡಿದೆ.
ಇನ್ನು ಕಚೇರಿಗೆ ಹೋಗಲು ಹೆಚ್ಚಿನ ಮಂದಿ ದ್ವಿಚಕ್ರ ವಾಹನ ಬಳಸುತ್ತಾರೆ ಎನ್ನುತ್ತಿದೆ ಸರ್ವೆ. ಶೇ.40 ಮಂದಿ ಚಕ್ರ ವಾಹನ ಬಳಸಿದರೆ ಶೇ.23 ಮಂದಿ ನಗರ ಸಾರಿಗೆ ವಾಹನ ಬಳಸುತ್ತಿದ್ದಾರೆ. ಶೇ.16ರಷ್ಟು ಜನ ನಡೆದು ಹೋಗುತ್ತಿದ್ದಾರೆ. ಶೇ.1ರಷ್ಟು ಮಂದಿ ಮಾತ್ರ ಮೆಟ್ರೋ ರೈಲು ಬಳಸಿದರೆ, ಶೇ.8 ಮಂದಿ ಕಾರಿನಲ್ಲಿಯೂ, ಶೇ.7ರಷ್ಟು ಕಾರ್ ಪೂಲಿಂಗ್ ವಿಧಾನದಲ್ಲಿ ಕಚೇರಿಗೆ ತೆರಳುತ್ತಾರೆ.
ನಗರದಲ್ಲಿ ಪ್ರತಿ ವ್ಯಕ್ತಿಯ ದಿನದ ನೀರಿನ ಬಳಕೆ ಪ್ರಮಾಣ ರಾಷ್ಟ್ರೀಯ ಮಾನದಂಡಕ್ಕಿಂತ ಕಡಿಮೆ ಇದೆ ಎಂಬುದು ಅಧ್ಯಯನದಿಂದ ಗೊತ್ತಾಗಿದೆ. ಸಮೀಕ್ಷೆ ನಡೆದ ವಾರ್ಡ್ ನಲ್ಲಿ ಪ್ರತಿ ವ್ಯಕ್ತಿಯ ದಿನದ ನೀರಿನ ಬಳೆಕೆ 83 ಲೀಟರ್ ಇದೆ. ಕೊಳೆಗೇರಿಗಳಲ್ಲಿ ಬಳಕೆ ಪ್ರಮಾಣ (59 ಲೀಟರ್) ಇನ್ನೂ ಕಡಿಮೆ. ಆದರೆ, ನಗರೀಕರಣದ ರಾಷ್ಟ್ರೀಯ ಆಯೋಗದ ಮಾನದಂಡದ ಪ್ರಕಾರ ಪ್ರತಿ ವ್ಯಕ್ತಿಯ ದಿನದ ನೀರಿನ ಬಳಕೆ ಪ್ರಮಾಣ 135 ಲೀಟರ್ ಇರಬೇಕು.
ಕೊಳೆಗೇರಿಗಳ ನಿವಾಸಿಗಳು ನೀರಿಗಾಗಿ ಪ್ರತಿ ತಿಂಗಳು ರು.191 ಖರ್ಚು ಮಾಡುತ್ತಿದ್ದಾರೆ. ಉಳಿದವರು ಮಾಡುವ ವೆಚ್ಚ ರು.102. ಕೊಳೆಗೇರಿಗಳ ಬಹುತೇಕ ನಿವಾಸಿಗಳು ಟ್ಯಾಂಕರ್ ನೀರನ್ನು ಅವಲಂಬಿಸಿದ್ದಾರೆ. ಇದರಿಂದ ನೀರಿನ ವೆಚ್ಚ ಹೆಚ್ಚಿದೆ ಎಂದು ವರದಿ ತಿಳಿಸಿದೆ. ಈ ಸರ್ವೆ ಕುರಿತು ಮಾಹಿತಿ ನೀಡಿರುವ ಐಸೆಕ್ ನಗರ ವ್ಯವಹಾರಗಳ ಸಂಶೋಧನೆ ಕೇಂದ್ರದ ಮುಖ್ಯಸ್ಥರಾದ ಕಲಾ ಎಸ್.ಶ್ರೀಧರ್, ನಮ್ಮ ಕೇಂದ್ರವು ನಾಗರಬಾವಿ ವಾರ್ಡ್ ನ 20 ಕೊಳಗೇರಿ ಸೇರಿದಂತೆ ಸುಮಾರು 9 ತಿಂಗಳ ಕಾಲ ಸಮೀಕ್ಷೆ ನಡೆಸಲಾಯಿತು ಎಂದರು. ಜೀವನ ಶೈಲಿಯಿಂದಾಗಿ ಬರುವ ಆರೋಗ್ಯ ಸಮಸ್ಯೆ ಗಳ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಜನ, ಇಂತಹ ಬೆಳವಣಿಗೆಗಳ ನಡುವೆಯೂ ಶೇ.91ರಷ್ಟು ಮಂದಿ ಬೆಂಗಳೂರಿನಲ್ಲೇ ನೆಲೆಸಲು ಬಯಸಿದ್ದಾರೆ. ಪರಿಸರ ಮಲಿನವಾಗುತ್ತಿರುವುದಕ್ಕೆ ಅನೇಕರು ಅಸಹನೆ ವ್ಯಕ್ತಪಡಿಸಿದ್ದಾರೆ ಎಂದು ಕಲಾ ಶ್ರೀಧರ್ ವಿವರಿಸಿದರು.