ಆರೋಗ್ಯ-ಜೀವನಶೈಲಿ

ಧನುರ್ವಾಯು ಮುಕ್ತ ರಾಷ್ಟ್ರವಾಗುವತ್ತ ಭಾರತ ಹೆಜ್ಜೆ

Vishwanath S

ನವದೆಹಲಿ: ಭಾರತವು ಸಾರ್ವಜನಿಕ ಆರೋಗ್ಯದಲ್ಲಿ ಮತ್ತೊಂದು ಮಹತ್ವದ ಮೈಲುಗಲ್ಲು ಸಾಧಿಸಿದೆ. ಪೋಲಿಯೋ ಬಳಿಕ ಈಗ ಭಾರತವು ಧನುರ್ವಾಯು ಮುಕ್ತ ರಾಷ್ಟ್ರವಾಗುವತ್ತ ಹೆಜ್ಜೆಯಿಟ್ಟಿದೆ.

ಒಂದು ಕಾಲದಲ್ಲಿ ವರ್ಷಕ್ಕೆ 2 ಲಕ್ಷ ಮಂದಿಯನ್ನು ಬಲಿತೆಗೆದುಕೊಳ್ಳುತ್ತಿದ್ದ ಧನುರ್ವಾಯು(ತಾಯಿ ಮತ್ತು ನವಜಾತ ಶಿಶುವಿಗೆ ಸಂಬಂಧಿಸಿದ) ಸೋಂಕನ್ನು ಸಂಪೂರ್ಣ ನಿರ್ಮೂಲನೆ ಮಾಡುವಲ್ಲಿ ಭಾರತ ಯಶಸ್ವಿಯಾಗಿದೆ. ಇನ್ನು 2 ತಿಂಗಳಲ್ಲೇ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‍ಒ)ಯು ಭಾರತವನ್ನು 'ಧನುರ್ವಾಯು ಮುಕ್ತ ರಾಷ್ಟ್ರ' ಎಂದು ಘೋಷಿಸಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಘೋಷಣೆಯಷ್ಟೇ ಬಾಕಿ:
ಡಬ್ಲ್ಯುಎಚ್‍ಒ ಮತ್ತು ಯುನಿಸ್ಕೋನ ಜಂಟಿ ತಂಡ ಇತ್ತೀಚೆಗಷ್ಟೇ ಜಮ್ಮು ಮತ್ತು ಕಾಶ್ಮೀರ, ನಾಗಾಲ್ಯಾಂಡ್ ಮತ್ತು ಮೇಘಾಲಯ, ದಾದ್ರಾ ಮತ್ತು ನಗರ್ಹವೇಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ಪ್ರದೇಶಗಳು ಧನುರ್ವಾಯು ರೋಗದ ಹಾಟ್‍ಸ್ಪಾಟ್‍ಗಳಾಗಿದ್ದು, ಇಲ್ಲಿ ಒಂದು ಕಾಲದಲ್ಲಿ ಭಾರಿ ಪ್ರಮಾಣದ ಸೋಂಕು ಕಂಡುಬಂದಿತ್ತು. ಪರಿಶೀಲನೆ ನಡೆಸಿದ ತಂಡವು ಧನುರ್ವಾಯು ನಿರ್ಮೂಲನೆಯಾಗಿರುವುದನ್ನು ದೃಢಪಡಿಸಿದ್ದು, ಇನ್ನು ಅಧಿಕೃತ ಘೋಷಣೆಯಷ್ಟೇ ಬಾಕಿ ಉಳಿದಿದೆ ಎಂದು ಖಾಸಗಿ ಪತ್ರಿಕೆಯೊಂದು ವರದಿ ಮಾಡಿದೆ.

ಧನುರ್ವಾಯು ನಿರ್ಮೂಲನೆಗೆ ಬಾಕಿಯಿರುವ 23 ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದೆ. ಕಳೆದ ವರ್ಷದ ಮಾರ್ಚ್‍ನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಭಾರತವನ್ನು `ಪೋಲಿಯೋ ಮುಕ್ತ ರಾಷ್ಟ್ರ' ಎಂದು ಘೋಷಿಸಿತ್ತು.

ಒಂದು ಕಾಲದಲ್ಲಿ ದೇಶದ ಒಟ್ಟು ನವಜಾತ ಶಿಶುಗಳ ಮರಣದ ಪೈಕಿ ಶೇ.15ರಷ್ಟು ಧನುರ್ವಾಯುವಿನಿಂದ ಸಂಭವಿಸುತ್ತಿತ್ತು. ಆದರೆ, ಈಗ ಗರ್ಭೀಣಿಯರಿಗೆ ಸೂಕ್ತ ಸಮಯದಲ್ಲಿ ಪ್ರತಿರಕ್ಷಕ ಲಸಿಕೆ ನೀಡಲಾಗುತ್ತದೆ. ಆಸ್ಪತ್ರೆಗಳಲ್ಲದೆ ಬೇರೆ ಕಡೆ ಹೆರಿಗೆಯಾದರೂ ಸೋಂಕು ಹರಡದಂತೆ ತಡೆಯುವ ಕಿಟ್‍ಗಳನ್ನು ಬಳಸಲಾಗುತ್ತದೆ. ಇವೆಲ್ಲವೂ ಧನುರ್ವಾಯು ತಡೆಗೆ ಕಾರಣವಾಯಿತು.
- ಡಾ. ವಿನೋದ್ ಪೌಲ್, ಏಮ್ಸ್ ಪ್ರೋಫೆಸರ್

SCROLL FOR NEXT