ಆರೋಗ್ಯ-ಜೀವನಶೈಲಿ

ಬಾಳೆಹಣ್ಣಿನಲ್ಲಿ ಹೆಚ್ಐವಿ ವೈರಾಣುಗಳ ವಿರುದ್ಧ ಹೋರಾಡುವ ಅಂಶ ಪತ್ತೆ!

Srinivas Rao BV

ಹೆಚ್ಐವಿ, ಜ್ವರ ಉಂಟಾಗಲು ಕಾರಣವಾಗುವ ವೈರಾಣುಗಳನ್ನು ನಿಗ್ರಹಿಸಲು ಬಾಳೆಹಣ್ಣಿನಲ್ಲಿರುವ ಲೆಕ್ಟಿನ್ ಅಂಶ ಸಹಕಾರಿಯಾಗಲಿದೆ.
ಬಾಳೆಹಣ್ಣಿನಲ್ಲಿರುವ ಲೆಕ್ಟಿನ್ ಎಂಬ ಅಂಶದ ಮೂಲಕ ವೈರಾಣು ನಿರೋಧಕ ಔಷಧವನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಬಾಳೆಹಣ್ಣಿನಲ್ಲಿ ವಿಜಾನಿಗಳು ಸಂಶೋಧಿಸಿರುವ ಪ್ರೋಟೀನ್ ಅಂಶದ ವಸ್ತು ಹೆಚ್.ಐ.ವಿ ವೈರಾಣುಗಳನ್ನೂ ನಿಗ್ರಹಿಸುವ ಸಾಮರ್ಥ್ಯಹೊಂದಿದ್ದು ಏಡ್ಸ್ ನಿರೋಧಕವಾಗಿಯೂ ಕಾರ್ಯನಿರ್ವಹಿಸಲಿದೆಯಂತೆ!
ಬಾಳೆಹಣ್ಣಿನಿಂದ ತಯಾರಿಸಲಾಗಿರುವ ಬ್ಯಾನ್ಲೆಕ್ ಎಂಬ ಔಷಧದಿಂದ ಅಡ್ಡಪರಿಣಾಮಗಳು ಉಂಟಾಗುವುದಿಲ್ಲ. ಏಡ್ಸ್ ಗೆ ಕಾರಣವಾಗುವ ವೈರಾಣುಗಳ ವಿರುದ್ಧ ಹೋರಾಡುವುದು ಮಾತ್ರವಲ್ಲದೇ ಹೆಪಿಟೈಟಿಸ್ ಸಿ, ಶೀತಜ್ವರಕ್ಕೆ ಕಾರಣವಾಗುವ ವೈರಾಣು ನಿರೋಧಕವಾಗಿಯೂ ಈ ಔಷಧ ಕಾರ್ಯನಿರ್ವಹಿಸಲಿದೆ ಎಂದು ಮಿಚಿಗನ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಹೇಳಿದ್ದಾರೆ.  
ಪ್ರಾಯೋಗಿಕವಾಗಿ ಈ ಔಷಧವನ್ನು ಇಲಿಗಳ ಮೇಲೆ ಪ್ರಯೋಗಿಸಲಾಗಿದ್ದು, ಜ್ವರದ  ಸೋಂಕು ತಗುಲುವುದರಿಂದ ಇಲಿಯನ್ನು ರಕ್ಷಿಸಿದೆ, ಮಾನವರಿಗೂ ಇದು ಅನ್ವಯವಾದರೆ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪನೆಯಾಗಲಿದೆ ಎಂದು ವಿಜಾನಿಗಳು ಹೇಳಿದ್ದಾರೆ.
ಬಾಳೆ ಹಣ್ಣಿನಲ್ಲಿರುವ ಲೆಕ್ಟಿನ್ ಅಂಶ ದೇಹದಲ್ಲಿರುವ ಶುಗರ್ ಮಾಲಿಕ್ಯೂಲ್(ಸಕ್ಕರೆ ಅಂಶದ ಅಣುಗಳು) ಗಳೊಂದಿಗೆ ಸೇರಿ ವೈರಾಣುಗಳ ವಿರುದ್ಧ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಎಬೋಲಾ, ಹೆಚ್.ಐ.ವಿ ಸೇರಿದಂತೆ ಮಾರಕ ವೈರಾಣುಗಳು ಶುಗರ್ ಮಾಲಿಕ್ಯೂಲ್ ನೊಂದಿಗೆ ಸೇರಿಕೊಂಡಿರುತ್ತವೆ. ಈ ಹಿನ್ನೆಲೆಯಲ್ಲಿ ಬಾಳೆ ಹಣ್ಣಿನಲ್ಲಿರುವ ಲೆಕ್ಟಿನ್ ಮಾರಕ ವೈರಾಣುಗಳಿಗೆ ನಿರೋಧ ಶಕ್ತಿಯಾಗಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

SCROLL FOR NEXT