ಆರೋಗ್ಯ-ಜೀವನಶೈಲಿ

ಪ್ರತಿದಿನ 2 ಗಂಟೆ ಪ್ಯಾಂಟ್ ಜೇಬಿನಲ್ಲಿ ಮೊಬೈಲ್ ಇಟ್ಟುಕೊಂಡರೇ ಕ್ಷೀಣವಾಗುತ್ತೆ ವೀರ್ಯಾಣು

Shilpa D

ನೀವು ದಿನದಲ್ಲಿ ಕನಿಷ್ಟ ಎರಡು ಗಂಟೆ ಸಮಯ ಪ್ಯಾಂಟ್ ಜೇಬಿನಲ್ಲಿ ಮೊಬೈಲ್ ಇಡುತ್ತೀರಾ. ಹಾಗಾದರೇ ಈ ವರದಿಯನ್ನೊಮ್ಮೆ ಓದಿ.

ಮೊಬೈಲ್ ಗಳನ್ನು ಪ್ಯಾಂಟ್ ಜೇಬಿನಲ್ಲಿರಿಸುವುದರಿಂದ ವೀರ್ಯಾಣುಗಳ ಸಂಖ್ಯೆ ಕ್ಷೀಣಿಸುತ್ತದೆ ಎಂದು ಅಧ್ಯಯನದ ವರದಿಯೊಂದು ತಿಳಿಸಿದೆ. ಚಾರ್ಜಿಂಗ್ ಆಗುತ್ತಿರುವ ಫೋನ್‌ನಲ್ಲಿ ಮಾತನಾಡುವುದು ಮತ್ತು ಹಾಸಿಗೆ ಹತ್ತಿರವೇ ಇಟ್ಟುಕೊಳ್ಳುವುದು ಮತ್ತು ಪ್ಯಾಂಟ್ ಜೇಬಿನಲ್ಲಿ ಹ್ಯಾಂಡ್‌ಸೆಟ್ ಇಟ್ಟುಕೊಳ್ಳುವುದರಿಂದ  ಪುರುಷರ ವೀರ್ಯಾಣು ಸಂಖ್ಯೆಯನ್ನು ಕ್ಷೀಣಿಸುವಂತೆ ಮಾಡುತ್ತದೆ ಎಂದು ಅಧ್ಯಯನ ವರದಿ ತಿಳಿಸಿದೆ.
 
ಫೋನಿನಿಂದ ಹೊರಹೊಮ್ಮುವ ಎಲೆಕ್ಟ್ರೋಮ್ಯಾಗ್ನಟಿಕ್ ಮತ್ತು ಉಷ್ಣ ಶಕ್ತಿಯು, ವೀರ್ಯಾಣುಗಳ ಉತ್ಪಾದನೆ ಮೇಲೆ ಪರಿಣಾಮ ಬೀರುತ್ತದೆಂದು ಸಂಶೋಧಕರು ತಿಳಿಸಿದ್ದಾರೆ.

ಒಂದು ಗಂಟೆಗಿಂತ ಕಡಿಮೆ ಫೋನ್ ಬಳಸುವವರಿಗೆ ಹೋಲಿಸಿದರೆ ದಿನಕ್ಕೆ 2 ಗಂಟೆಗಳಿಗಿಂತ ಹೆಚ್ಚು ಫೋನ್ ಬಳಸುವವರಿಗೆ ವೀರ್ಯಾಣು ಗುಣಮಟ್ಟ ಕ್ಷೀಣಿಸುವ ಸಾಧ್ಯತೆಯಿದೆ ಎಂದು ರಿಪ್ರೊಡಕ್ಟಿವ್ ಬಯೋಮೆಡಿಸಿನ್‌ನಲ್ಲಿ ಪ್ರಕಟವಾದ ಹೊಸ ಅಧ್ಯಯನ ತಿಳಿಸಿದೆ. ಇನ್ನು ಮೊಬೈಲ್ ಅನ್ನು ಚಾರ್ಜ್ ಹಾಕಿಕೊಂಡು ಮಾತನಾಡುವುದರಿಂದ ಈ ಸಮಸ್ಯೆಗಳು ಎರಡು ಪಟ್ಟು ಹೆಚ್ಚಾಗುತ್ತದೆ ಎಂದು ವರದಿ ಹೇಳಿದೆ.

ಸುಮಾರು 109 ಜನರ ಮೇಲೆ ನಡೆಸಿದ ಅಧ್ಯಯನದಿಂದ ಈ ಮಾಹಿತಿ ಬಹಿರಂಗವಾಗಿದೆ. ಆದ್ದರಿಂದ ಪುರುಷರು ಪ್ಯಾಂಟ್ ಜೇಬಿನಲ್ಲಿ ಮೊಬೈಲ್ ಇಟ್ಟುಕೊಳ್ಳುವುದನ್ನು ಸಾಧ್ಯವಾದಷ್ಟು ತಪ್ಪಿಸಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.
 

SCROLL FOR NEXT