ಆರೋಗ್ಯ-ಜೀವನಶೈಲಿ

ತರುಣರಂತೆ ಕಾಣಬೇಕೆ? ದಾಳಿಂಬೆ ಸೇವಿಸಿ

Sumana Upadhyaya
35-40 ವರ್ಷದಲ್ಲಿಯೇ ನಿಮ್ಮ ಚರ್ಮ ಸುಕ್ಕು ಬೀಳಲು ಆರಂಭವಾಗಿದೆಯೇ? ನೀವು ವಯಸ್ಸಾದವರಂತೆ ಕಾಣುತ್ತಿದ್ದೀರಾ? ಹಾಗಾದರೆ ದಾಳಿಂಬೆಯನ್ನು ನಿಯಮಿತವಾಗಿ ಸೇವಿಸಿ. 
ಬೇಗನೆ ವಯಸ್ಸಾದಂತೆ ಕಾಣುವುದನ್ನು ತಪ್ಪಿಸಲು, ತಾರುಣ್ಯರಂತೆ ಕಾಣಲು ದಾಳಿಂಬೆಯನ್ನು ನಿಯಮಿತವಾಗಿ ತಿನ್ನುತ್ತಿದ್ದರೆ ಒಳ್ಳೆಯದು ಎಂದು ಸ್ವಿಡ್ಜರ್ಲೆಂಡಿನ ಸಂಶೋಧಕರು ಹೇಳಿದ್ದಾರೆ.
ದಾಳಿಂಬೆಯನ್ನು ಹಿಂದಿನ ಕಾಲದವರು ದೇವರ ಆಹಾರ ಎಂದು ಕರೆಯುತ್ತಿದ್ದರು. ಅದರಲ್ಲಿರುವ ನಿಖರ ರಾಸಾಯನಿಕ ಮನುಷ್ಯನನ್ನು ತಾರುಣ್ಯಭರಿತವಾಗಿ ಕಾಣುವಂತೆ ಮಾಡುತ್ತದಂತೆ.
ಮನುಷ್ಯನ ದೇಹದಲ್ಲಿರುವ ಯುರೋಲಿಥಿನ್ ಎ ಎಂಬ ಏಕ ಅಣು ಸ್ವಯಂಭಕ್ಷಣ ಪ್ರಕ್ರಿಯೆಯನ್ನು ಹೊಂದಿದ್ದು, ಹಾನಿಗೀಡಾದ ಕೋಶಗಳನ್ನು ಹೋಗಲಾಡಿಸಿ ಹೊಸ ಕೋಶಗಳು ಉತ್ಪತ್ತಿಯಾಗಲು ಸಹಕರಿಸುತ್ತವೆ. ಆದರೆ ಮನುಷ್ಯರ ಕರುಳಿನಲ್ಲಿ ಸರಿಯಾದ ರೀತಿಯ ಬ್ಯಾಕ್ಟೀರಿಯಾ ಇದ್ದರೆ ಮಾತ್ರ ದಾಳಿಂಬೆಯಲ್ಲಿರುವ ರಾಸಾಯನಿಕದಿಂದ ಪ್ರಯೋಜನವಾಗುತ್ತದೆ. ಸೂಕ್ಷ್ಮಜೀವಿಗಳು ಹಣ್ಣಿನಲ್ಲಿರುವ ಕಚ್ಚಾ ಪದಾರ್ಥಗಳನ್ನು ಯುರೋಲಿಥಿನ್ ಎಯಾಗಿ ಬದಲಾಯಿಸುತ್ತದೆ.
ದಾಳಿಂಬೆ ಮನುಷ್ಯನ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರಿದರೆ ಜೀವಿತಾವಧಿ ಕೂಡ ಜಾಸ್ತಿಯಾಗುತ್ತದಂತೆ. ವಿಜ್ಞಾನಿಗಳು ಅಮಜೆಂಟಿಸ್ ಎಂಬ ಕಂಪೆನಿಯನ್ನು ಆರಂಭಿಸಿದ್ದು, ಯರೋಪಿಯನ್ ರಾಷ್ಟ್ರಗಳ ಅನೇಕ ಆಸ್ಪತ್ರೆಗಳಲ್ಲಿ ಇದನ್ನು ಬಳಸಲಾಗುತ್ತಿದೆಯಂತೆ.
ಸ್ವಿರ್ಜರ್ಲೆಂಡಿನ ಎಕೋಲೆ ಪಾಲಿಟೆಕ್ನಿಕ್ ಫೆಡರಲ್ ಡಿ ಲಾಸನ್ನೆಯ ಪ್ರಾಧ್ಯಾಪಕ ಜೋಹನ್ ಔವೆರ್ಸ್ಕ್, ಇಳಿವಯಸ್ಸಿನಲ್ಲಿ ಬಲವರ್ಧನೆಗೆ ಇದು ಪ್ರಯೋಜನಕಾರಿಯಾಗಿದೆ ಎಂದಿದ್ದಾರೆ.
ಈ ಅಧ್ಯಯನ ನೇಚರ್ ಮೆಡಿಸಿನ್ ಎಂಬ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಆಹಾರವನ್ನು ಶಕ್ತಿಯಾಗಿ ಪರಿವರ್ತಿಸುವ ಮೈಟೋಕಾಂಡ್ರಿಯಾದ ಬಗ್ಗೆಯೂ ಅಧ್ಯಯನ ನಡೆಸಿದ್ದಾರೆ.
ದಾಳಿಂಬೆ ಹೃದ್ರೋಗ ಸಮಸ್ಯೆಗಳಿಗೆ, ಉರಿಯೂತ ಮತ್ತು ಸಂಧಿವಾತ, ನೆನಪು ಶಕ್ತಿ, ಕ್ಯಾನ್ಸರ್ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಕೂಡ ಹೊಂದಿದೆ.
SCROLL FOR NEXT