ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಇತ್ತೀಚೆಗೆ ಬಿಡುಗಡೆ ಮಾಡಿದ 2023 ರ ಭಾರತ ಕ್ಷಯರೋಗ ವರದಿಯಲ್ಲಿ ಎಚ್‌ಐವಿ (ಹ್ಯೂಮನ್ ಇಮ್ಯುನೊ ಡಿಫಿಷಿಯನ್ಸಿ ವೈರಸ್) ಪಾಸಿಟಿವ್ ಇರುವ ವ್ಯಕ್ತಿಗಳಲ್ಲೇ ಹೆಚ್ಚಾಗಿ ಟಿಬಿ ಕಂಡು ಬಂದಿದೆ ಎಂದು ಹೇಳಿದೆ.
2022-2023ರಲ್ಲಿ ರಾಜ್ಯದಲ್ಲಿ ಒಟ್ಟು 1,77,983 ಟಿಬಿ ಪ್ರಕರಣಗಳು ವರದಿಯಾಗಿವೆ. ಈ ಪೈಕಿ HIV ಪಾಸಿಟಿವ್ ಇರುವ 77,153 TB ರೋಗಿಗಳಿದ್ದಾರೆ. ಟಿಬಿ ಕಾಯಿಲೆಗೆ ಕಾರಣವಾಗುವ ಇತರ ಅಂಶಗಳು ಎಂದರೆ ತಂಬಾಕು ಮತ್ತು ಮದ್ಯ. ಟಿಬಿಯಿರುವ ಒಟ್ಟು 69,702 ವ್ಯಕ್ತಿಗಳು ತಂಬಾಕು ಅಥವಾ ಧೂಮಪಾನ ಮಾಡುತ್ತಿದ್ದಾರೆ ಮತ್ತು 68,902 ಜನರು ಮದ್ಯದ ಚಟವನ್ನು ಹೊಂದಿದ್ದಾರೆ. ಅಪೌಷ್ಟಿಕತೆ ಮತ್ತು ಮಧುಮೇಹದಂತಹ ಇತರ ಅಪಾಯಕಾರಿ ಅಂಶಗಳೂ ಸಹ ಟಿಬಿ ಹೊಂದಿರುವ ವ್ಯಕ್ತಿಯ ಮೇಲೆ ಗಂಭೀರ ಪರಿಣಾಮ ಬೀರುತ್ತವೆ.
69,836 ಹೊಸ ಪ್ರಕರಣಗಳು ವರದಿಯಾಗಿದ್ದು, ಪ್ರಸ್ತುತ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯು ಹೈಲೈಟ್ ಮಾಡಿದೆ. ಮಹಿಳೆಯರಿಗೆ(29,053) ಹೋಲಿಸಿದರೆ ಪುರುಷರಲ್ಲಿ(50,058) ಬ್ಯಾಕ್ಟೀರಿಯಾದ ಸೋಂಕಿನ ಪ್ರಮಾಣ ಹೆಚ್ಚಾಗಿ ಕಂಡುಬಂದಿದೆ ಮತ್ತು 30 ಪ್ರಕರಣಗಳು ಟ್ರಾನ್ಸ್ಜೆಂಡರ್ಗಳಲ್ಲಿ ಕಂಡುಬಂದಿದೆ. ಹೈ-ರಿಸ್ಕ್ ಗ್ರೂಪ್ (HRG) ಸ್ಕ್ರೀನಿಂಗ್ ಗುರಿಯನ್ನು ಸಾಧಿಸುವ ದೇಶದ ಕೆಲವೇ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ. ರಾಜ್ಯದಲ್ಲಿ ಒಟ್ಟು 7,03,636 ಜನರಿಗೆ ಟಿಬಿ ತಪಾಸಣೆ ನಡೆಸಲಾಗಿದೆ.
ವರದಿಯ ಪ್ರಕಾರ, ರಾಷ್ಟ್ರೀಯ ಟಿಬಿ ಎಲಿಮಿನೇಷನ್ ಪ್ರೋಗ್ರಾಂ(ಎನ್‌ಟಿಇಡಿ) ಅಡಿಯಲ್ಲಿ, ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡಲು ಹಲವಾರು ಉಪಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಮದ್ಯಪಾನ ಮತ್ತು ತಂಬಾಕು ಸೇವನೆಯಿಂದ ಬಳಲುತ್ತಿರುವ ಜನರಿಗೆ ಸಲಹೆ, ವ್ಯಸನಮುಕ್ತ ಕೇಂದ್ರಗಳು ಮತ್ತು ಸಾಮಾಜಿಕ ಬೆಂಬಲ ಸೇರಿದಂತೆ ಹಲವಾರು ಜಾಗೃತಿ ಅಭಿಯಾನಗಳನ್ನು ನಡೆಸಲಾಗುತ್ತಿದೆ.
ಟಿಬಿಗೆ ಬಡತನವೂ ಮತ್ತೊಂದು ಕಾರಣವಾಗಿದ್ದು, ಕಡಿಮೆ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಹೊಂದಿರುವ ಕುಟುಂಬಗಳ ಮೇಲೆ ಈ ರೋಗವು ಹೆಚ್ಚು ಪರಿಣಾಮ ಬೀರುತ್ತಿದೆ. ಇದು ಆರ್ಥಿಕ ಹೊರೆಯನ್ನು ಉಂಟುಮಾಡುತ್ತದೆ ಎಂದು ವರದಿ ಹೇಳಿದೆ.