ನವದೆಹಲಿ: ಚಳಿಗಾಲದಲ್ಲಿ ನಾವು ಸೇವಿಸುವ ಆಹಾರದ ಬಗ್ಗೆ ಕಾಳಜಿ ವಹಿಸಿದರೆ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಒಣ ಹಣ್ಣುಗಳು, ಬೀಜಗಳು, ತುಳಸಿ, ಶುಂಠಿ, ಸೊಪ್ಪು ತರಕಾರಿಗಳು ನಮ್ಮ ದಿನನಿತ್ಯದ ಆಹಾರದಲ್ಲಿ ಇದ್ದರೆ ಉತ್ತಮ. ಚಳಿಗಾಲದಲ್ಲಿ ಮಾಂಸ ಮತ್ತು ಹಾಲಿನ ಉತ್ಪನ್ನಗಳ ಸೇವನೆಯನ್ನು ಆದಷ್ಟು ಕಡಿಮೆ ಮಾಡಿದರೆ ಉತ್ತಮ ಎನ್ನುತ್ತಾರೆ ಆರೋಗ್ಯ ತಜ್ಞರು.
98 ಫಿಟ್ ನ ಸ್ಥಾಪಕ ಭವಿಷ್ಯ ವಾದ್ವಾನ್ ಮತ್ತು ಪೌಷ್ಟಿಕ ತಜ್ಞ ನೇಹಾ ರಂಗ್ಲಾನಿ ಅವರು ಚಳಿಗಾಲದಲ್ಲಿ ಸೇವಿಸದೆ ಇರುವ ಆಹಾರಗಳ ಪಟ್ಟಿಯನ್ನು ಮಾಡಿದ್ದಾರೆ.
ಡೈರಿ ಉತ್ಪನ್ನಗಳು: ಹಾಲನ್ನು ಸಂಪೂರ್ಣ ಆಹಾರವೆಂದು ಹೇಳಲಾದರೂ ಕೂಡ ಚಳಿಗಾಲದಲ್ಲಿ ಹಾಲಿನ ಉತ್ಪನ್ನಗಳನ್ನು ಸೇವಿಸುವುದನ್ನು ಕಡಿಮೆ ಮಾಡುವುದು ಒಳಿತು.
ನಮ್ಮ ದೇಹದಲ್ಲಿ ಕಫದ ಉತ್ಪತ್ತಿಯನ್ನು ಹೆಚ್ಚಿಸುವುದಲ್ಲದೆ ಈಗಾಗಲೇ ಇರುವ ಕಫವನ್ನು ಗಟ್ಟಿ ಮಾಡುತ್ತದೆ. ಇದರಿಂದ ಗಂಟಲಿನಲ್ಲಿ ತೀವ್ರ ಕೆರೆತ, ನೋವು ಉಂಟಾಗುತ್ತದೆ.
ಬಿಸಿ ಅಥವಾ ತಂಪು ಪಾನೀಯಗಳು: ಚಳಿಗಾಲದಲ್ಲಿ ಪ್ರತಿಯೊಬ್ಬರೂ ಬಿಸಿಬಿಸಿ ಕಾಫಿ, ಟೀ ಅಥವಾ ಬಿಸಿ ಚಾಕಲೇಟ್ ಕುಡಿಯಲು ಬಯಸುತ್ತಾರೆ. ಆದರೆ ಅದರಲ್ಲಿರುವ ಕೊಬ್ಬು ಮತ್ತು ಕೆಫೀನ್ ನ್ನು ಗಮನದಲ್ಲಿಟ್ಟುಕೊಳ್ಳಬೇಕು. ಈ ಪಾನೀಯಗಳು ನಮ್ಮ ದೇಹವನ್ನು ಒಣಗಿಸುತ್ತವೆ. ಅಲ್ಲದೆ ದೇಹದಲ್ಲಿ ಕಫ ಉತ್ಪತ್ತಿ ಮಾಡುತ್ತದೆ. ಹೀಗಾಗಿ ಕೆಫೀನ್ ನ್ನು ಬಿಟ್ಟು ನೀರು ಅಥವಾ ಗಿಡಮೂಲಿಕೆಗಳ ಪಾನೀಯವನ್ನು ಕುಡಿದರೆ ಒಳ್ಳೆಯದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಮಾಂಸಗಳು: ಮೊಟ್ಟೆ ಮತ್ತು ಮಾಂಸಗಳಲ್ಲಿ ಅಧಿಕ ಪ್ರಮಾಣದಲ್ಲಿ ಪ್ರೊಟೀನ್ ಗಳಿವೆ.ಹೆಚ್ಚು ಪ್ರೊಟೀನ್ ಗಳ ಸೇವನೆಯಿಂದ ಗಂಟಲಿನಲ್ಲಿ ಕಫ ಉತ್ಪತ್ತಿಯಾಗುತ್ತವೆ. ಸಂಸ್ಕರಿತ ಮಾಂಸಗಳು ಮತ್ತು ಅಧಿಕ ಕೊಬ್ಬಿನ ಮಾಂಸಗಳು ನಮ್ಮ ದೇಹಕ್ಕೆ ಸಮಸ್ಯೆಗಳನ್ನು ತಂದೊಡ್ಡುತ್ತವೆ. ಮೀನು ಮತ್ತು ಕೋಳಿ ಮಾಂಸಗಳು ಇದಕ್ಕೆ ಹೋಲಿಸಿದರೆ ಸುರಕ್ಷಿತ. ಹೀಗಾಗಿ ಸಂಸ್ಕರಿತ ಮಾಂಸಗಳಿಗಿಂತ ಸಾವಯವ ಮಾಂಸ ಉತ್ತಮ.
ಎಣ್ಣೆ ಪದಾರ್ಥಗಳು: ಎಣ್ಣೆಯಲ್ಲಿ ಕರಿದ ಪದಾರ್ಥಗಳಲ್ಲಿ ದೇಹದ ಉತ್ತಮ ಬೆಳವಣಿಗೆಗೆ ಬೇಕಾದ ಅಂಶಗಳಿರುವುದಿಲ್ಲ. ಅಲ್ಲದೆ ಇದರಿಂದ ಹೊಟ್ಟೆ ಕೆಡುವ ಸಾಧ್ಯತೆಗಳು ಕೂಡ ಹೆಚ್ಚಿರುತ್ತವೆ.
ಋತುಮಾನಗಳಲ್ಲದ ಹಣ್ಣುಗಳು: ನಿರ್ದಿಷ್ಟ ಋತುಮಾನದಲ್ಲಿ ಬೆಳೆಯದ ಹಣ್ಣು ಆ ಋತುವಿನಲ್ಲಿ ಸಿಕ್ಕಿದರೆ ಅವುಗಳನ್ನು ಸೇವಿಸಲು ಹೋಗಬೇಡಿ, ಯಾಕೆಂದರೆ ಅವು ತಾಜಾತನವನ್ನು ಹೊಂದಿರುವುದಿಲ್ಲ. ಅಂತವುಗಳನ್ನು ಸೇವಿಸಿದರೆ ಆರೋಗ್ಯ ಕೆಡಬಹುದು. ಚಳಿಗಾಲದಲ್ಲಿ ಹೆಚ್ಚೆಚ್ಚು ಸಿಟ್ರಸ್ ಹಣ್ಣುಗಳನ್ನು ಸೇವಿಸಿದರೆ ದೇಹದ ಜೀರ್ಣಕ್ರಿಯೆ ಹೆಚ್ಚಾಗುತ್ತದೆ.
ಸಕ್ಕರೆ: ಚಳಿಯ ಹವಾಮಾನ ಮತ್ತು ಚಾಕಲೇಟು ಒಂದಕ್ಕೊಂದು ಪೂರಕ, ಆದರೆ ಸಕ್ಕರೆ ಪ್ರಮಾಣ ದೇಹದಲ್ಲಿ ಅಧಿಕವಾದರೆ ಶಕ್ತಿಯನ್ನು ಕುಗ್ಗಿಸುತ್ತದೆ ಎನ್ನುತ್ತಾರೆ ವೈದ್ಯರು. ಸಕ್ಕರೆಯನ್ನು ಅಧಿಕವಾಗಿ ಸೇವಿಸುವವರ ದೇಹ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವಲ್ಲಿ ಶಕ್ತಿಗುಂದಿರುತ್ತವೆ.
ಆಲ್ಕೋಹಾಲ್: ಚಳಿಗಾಲದಲ್ಲಿ ವಾತಾವರಣ ತಂಪಾಗಿರುವುದರಿಂದ ಸಾಮಾನ್ಯವಾಗಿ ನೀರು ಕುಡಿಯುವ ಪ್ರಮಾಣ ಕಡಿಮೆಯಿರುತ್ತದೆ. ನೀರು ಕುಡಿಯುವುದು ಕಡಿಮೆಯಾದಾಗ ದೇಹ ಒಣಗುವ ಸಾಧ್ಯತೆ ಹೆಚ್ಚು. ಇಂತಹ ಸಂದರ್ಭದಲ್ಲಿ ಆಲ್ಕೋಹಾಲ್ ಸೇವನೆ ದೇಹವನ್ನು ಬಿಸಿ ಮಾಡುತ್ತದೆ ಆದರೆ ಆಲ್ಕೋಹಾಲ್ ದೇಹವನ್ನು ಒಣಗಿಸುತ್ತದೆ ಕೂಡ.
ಅಲ್ಲದೆ ಆಲ್ಕೋಹಾಲ್ ಸೇವನೆಯಿಂದ ದೇಹದ ಉಷ್ಣತೆ ಕೂಡ ಹೆಚ್ಚಾಗುತ್ತದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos