ಆರೋಗ್ಯ

ಶಿಶುಗಳ ಆಹಾರದಲ್ಲಿ ಶೇಕಡಾ 80ರಷ್ಟು ಅಪಾಯಕಾರಿ ರಾಸಾಯನಿಕ ಅಂಶಗಳಿವೆ: ಅಧ್ಯಯನ

Sumana Upadhyaya
ಲಂಡನ್: ಮಾರುಕಟ್ಟೆಯಲ್ಲಿ ಸಿಗುವ ಶಿಶುಗಳಿಗೆ ನೀಡುವ ಆಹಾರಗಳಲ್ಲಿ ಅಪಾಯಕಾರಿ ರಾಸಾಯನಿಕಗಳಿವೆ ಎಂದು ಹೊಸ ಅಧ್ಯಯನವೊಂದು ಪತ್ತೆ ಹಚ್ಚಿದೆ.
ಇಂಡಿಪೆಂಟೆಂಟ್ ಎಂಬ ಪತ್ರಿಕೆಯಲ್ಲಿ ಅಧ್ಯಯನದ ವರದಿ ಪ್ರಕಟಗೊಂಡಿದೆ. ಕ್ಲೀನ್ ಲೇಬಲ್ ಪ್ರಾಜೆಕ್ಟ್ ಎಂಬ ಲಾಭರಹಿತ ಸಂಘಟನೆ ಈ ಅಧ್ಯಯನ ನಡೆಸಿದೆ. ಸೀಸ, ಕ್ಯಾಡ್ಮಿಯಮ್ ಮತ್ತು ಅಕ್ರಿಲಾಮೈಡ್ ನಂತಹ ರಾಸಾಯನಿಕಗಳು ಶಿಶುಗಳ ಆಹಾರದಲ್ಲಿ ಪತ್ತೆಯಾಗಿವೆ.
5 ತಿಂಗಳಿನಿಂದ ಖರೀದಿಸಲಾದ ಶಿಶುಗಳಿಗೆ ನೀಡುವ ಸುಮಾರು 530 ತಿಂಡಿಗಳು, ಧಾನ್ಯಗಳು ಮತ್ತು ಪಾನೀಯಗಳನ್ನು ಸಂಶೋಧನೆಗೊಳಪಡಿಸಲಾಯಿತು. ಅಧ್ಯಯನದ ನಂತರ ಶೇಕಡಾ 65ರಷ್ಟು ಶಿಶುಗಳ ಆಹಾರಗಳಲ್ಲಿ ಆರ್ಸೆನಿಕ್, ಶೇಕಡಾ 58ರಷ್ಟು ಕ್ಯಾಡ್ಮಿಯಮ್, ಶೇಕಡಾ 36ರಷ್ಟು ಸೀಸ ಮತ್ತು ಶೇಕಡಾ 10ರಷ್ಟು ಅಕ್ರಿಲಾಮೈಡ್ ರಾಸಾಯನಿಕಗಳನ್ನು ಒಳಗೊಂಡಿವೆ ಎಂದು ಪತ್ತೆಹಚ್ಚಲಾಯಿತು.
ಶಿಶುಗಳ ಆಹಾರದಲ್ಲಿ ಶೇಕಡಾ 80ರಷ್ಟು ಆರ್ಸೆನಿಕ್, ಟಾಕ್ಸಿನ್ ಗಳಂತಹ ವಿಷಕಾರಕ ರಾಸಾಯನಿಕಗಳನ್ನು ಹೊಂದಿರುತ್ತದೆ. ಇದು ಮುಂದೆ ಮಕ್ಕಳಲ್ಲಿ ಹೃದಯ ರೋಗ, ಮಧುಮೇಹ ಮತ್ತು ಕ್ಯಾನ್ಸರ್ ನಂತಹ ಭೀಕರ ಕಾಯಿಲೆಗಳನ್ನು ತಂದೊಡ್ಡಬಲ್ಲದು ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ಹೇಳುತ್ತದೆ ಎಂದು ಸಂಶೋಧಕರು ಉಲ್ಲೇಖಿಸಿದ್ದಾರೆ. ಪ್ರತಿ ಶಿಶುಗಳ ಆಹಾರದಲ್ಲಿ ರಾಸಾಯನಿಕಗಳ ಪ್ರಮಾಣ ವಿಭಿನ್ನವಾಗಿದೆ. ಕೆಲವು ಉತ್ಪನ್ನಗಳು ಪ್ರತಿ ಬಿಲಿಯನ್ ಗೆ 600 ಭಾಗ ಆರ್ಸೆನಿಕ್ ಗಳನ್ನು ಹೊಂದಿರುತ್ತವೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.
SCROLL FOR NEXT