ಒಂದೇ ಸಮನೆ ಹೆಚ್ಚು ಮದ್ಯಸೇವನೆ 'ಯುವಕರ' ಹೃದಯಕ್ಕೆ ಅಪಾಯಕಾರಿ!
ವಾಷಿಂಗ್ ಟನ್: ಒಂದೇ ಸಮನೆ ಹೆಚ್ಚು ಮದ್ಯಸೇವನೆ ಮಾಡುವ ಖಯಾಲಿ ಹೊಂದಿರುವ ಯುವಕರಿಗೆ ಇಲ್ಲೊಂದು ಎಚ್ಚರಿಕೆಯ ಸಂದೇಶ ಇದೆ. ಅದೇನೆಂದರೆ ಈ ರೀತಿ ಮದ್ಯ ಸೇವನೆ ಮಾಡುವುದರಿಂದ ಹೃದಯಕ್ಕೆ ಹಾನಿಯಾಗುತ್ತದೆ.
ಹಿಂದಿನ ಪೀಳಿಗೆಗೆ ಹೋಲಿಸಿದರೆ ಇಂದಿನ ಯುವ ಪೀಳಿಗೆಗೆ ಗಟಗಟ ಮದ್ಯ ಸೇವನೆ ಮಾಡಿ ತಡೆದುಕೊಳ್ಳುವ ಶಕ್ತಿ ಕಡಿಮೆ ಇದೆ ಎಂದು ಅಧ್ಯಯನ ವರದಿಯ ಮುಖ್ಯ ಬರಹಗಾರರಾದ ಮರಿಯಾನ್ ಪಿಯಾನೋ ಹೇಳಿದ್ದಾರೆ. ಪದೇ ಪದೇ ಒಂದೇ ಗುಟಿಕಿಗೆ ಹೆಚ್ಚು ಮದ್ಯ ಸೇವನೆ ಮಾಡುವುದರಿಂದ ಯುವ ಪೀಳಿಗೆಯ ಜನರು ಹೃದಯಾಘಾತಕ್ಕೆ ಒಳಗಾಗುವ ಅಪಾಯ ಹೆಚ್ಚಿರುತ್ತದೆ ಎಂದು ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ಪ್ರಕಟಿಸಿರುವ ಸಂಶೋಧನಾ ವರದಿ ಹೇಳಿದೆ.
ಈ ಹಿಂದಿನ ಅಧ್ಯಯನ ವರದಿಗಳ ಪ್ರಕಾರ ಒಂದೇ ಬಾರಿಗೆ 5 ಗುಟುಕನ್ನು ಸೇವಿಸುವ ಮಧ್ಯ ವಯಸ್ಕ ಹಾಗೂ ವಯಸ್ಸಾದವರಲ್ಲಿ ಹೃದಯರಕ್ತನಾಳದ ಸಮಸ್ಯೆ ಕಾಣಿಸುತ್ತದೆ ಎಂದು ಹೇಳಲಾಗಿತ್ತು. ಈಗ ಯುವಕರಿಗೂ ಇದು ಅನ್ವಯವಾಗಲಿದೆ, ಆದರೆ ಇದರಿಂದಾಗಿ 18-45 ವಯಸ್ಸಿನವರ ರಕ್ತದೊತ್ತಡ, ಚಯಾಪಚಯ ಅಂಶಗಳ ಮೇಲೆ ಯಾವ ರೀತಿ ಪರಿಣಾಮ ಉಂಟಾಗಲಿದೆ ಎಂಬುದು ಇನ್ನೂ ಸ್ಪಷ್ಟವಾಗಿ ತಿಳಿದಿಲ್ಲ.
ಸಾಮಾನ್ಯವಾಗಿ ಮದ್ಯ ಸೇವನೆ ಮಾಡುವವರು, ವಾರ್ಷಿಕವಾಗಿ 1-12 ಬಾರಿ ಒಂದೇ ಗುಟುಕಿಗೆ ಹೆಚ್ಚು ಮದ್ಯಸೇವನೆ ಮಾಡುವವರು ಹಾಗೂ ಪದೇ ಪದೇ ಒಂದೇ ಗುಟುಕಿಗೆ ಹೆಚ್ಚು ಮದ್ಯಸೇವನೆ ಮಾಡುವವರ (ವಾರ್ಷಿಕವಾಗಿ 12 ಕ್ಕಿಂತ ಹೆಚ್ಚು)ನ್ನು ಸಂಶೋಧನೆಗೊಳಪಡಿಸಿ ಮೂರು ವರ್ಗದ ಜನರ ರಕ್ತದೊತ್ತಡ, ಕೊಬ್ಬಿನಾಂಶ, ಬ್ಲಡ್ ಶುಗರ್ ಮಟ್ಟವನ್ನು ಪರೀಕ್ಷೆ ಮಾಡಲಾಗಿತ್ತು.
ಈ ಪೈಕಿ ಅತಿ ಹೆಚ್ಚು ಬಾರಿ ಒಂದೇ ಸಮನೆ ಹೆಚ್ಚು ಮದ್ಯಸೇವನೆ ಮಾಡುವವರ ವರ್ಗದ ಜನರಲ್ಲಿ ಉಳಿದ ಎರಡು ವರ್ಗಗಳ ಜನರಿಗಿಂತ ಹೆಚ್ಚು ರಕ್ತದೊತ್ತಡ ಇರುವುದು, ಹಾಗೂ ಕೊಬ್ಬು ಇರುವುದು ಕಂಡುಬಂದಿದೆ. ಆದ್ದರಿಂದ ಒಂದೇ ಗುಟುಕಿಗೆ ಹೆಚ್ಚು ಮದ್ಯಸೇವನೆ ಮಾಡುವ ಯುವಕ/ ಯುವತಿಯರಿಗೆ ಹೃದಯ ಸಮಸ್ಯೆ ಉಳಿದವರಿಗಿಂತ ಹೆಚ್ಚು ಕಾಡಲಿದೆ ಎಂಬುದನ್ನು ಸಂಶೋಧಕರು ಈ ಅಧ್ಯಯನದಿಂದ ಕಂಡುಕೊಂಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos