3 ದಿನಗಳಿಂದ ಜ್ವರ ಕಡಿಮೆಯಾಗದೆ ಬಿಟ್ಟು ಬಿಟ್ಟು ಬರುತ್ತಿದೆಯಾ. ಪ್ಯಾರಸಿಟಮಾಲ್ ಮಾತ್ರೆ ನುಗಿದರೂ ಮತ್ತೆ ಜ್ವರ ಬರುತ್ತಿದೆಯಾ.? ಸಾಮಾನ್ಯ ಜ್ವರ 2 ರಿಂದ 3 ದಿನದಲ್ಲಿ ಕಡಿಮೆಯಾಗುತ್ತದೆ. ಆದರೆ 3 ದಿನಕ್ಕಿಂತ ಹೆಚ್ಚು ಕಾಲ ಜ್ವರ ಇದ್ದರೆ ಅದನ್ನು ನಿರ್ಲಕ್ಷಿಸಬಾರದು. ಇದು ಡೆಂಗ್ಯೂ, ಟೈಫಾಯಿಡ್, ಮಲೇರಿಯಾ ಅಥವಾ ಇನ್ಯಾವುದೇ ಇನ್ಫೆಕ್ಷನ್ ನ ಲಕ್ಷಣವಾಗಿರಬಹುದು.! ಹಾಗಾಗಿ, ಯಾವ ಲಕ್ಷಣಗಳು ಕಾಣಿಸಿಕೊಂಡರೆ ತಡ ಮಾಡದೆ ಆಸ್ಪತ್ರೆಗೆ ಹೋಗಬೇಕು ಎನ್ನುವುದರ ಕುರಿತ ಮಾಹಿತಿ ಇಲ್ಲಿದೆ:
ತಕ್ಷಣ ವೈದ್ಯರನ್ನು ನೋಡಬೇಕಾದ ಲಕ್ಷಣಗಳು
ಜ್ವರದ ಜೊತೆಗೆ ಈ ಕೆಳಗಿನ ಲಕ್ಷಣಗಳು ಇದ್ದರೆ ಮನೆಯಲ್ಲಿ ಚಿಕಿತ್ಸೆ ಮಾಡಿಕೊಳ್ಳದೆ ಆಸ್ಪತ್ರೆಗೆ ಹೋಗುವುದು ಒಳ್ಳೆಯದು:
ಉಸಿರಾಟದ ತೊಂದರೆ
ಜ್ವರದ ಜೊತೆಗೆ ಉಸಿರಾಡಲು ಕಷ್ಟವಾಗುತ್ತಿದ್ದರೆ, ಎದೆ ನೋವು ಇದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಇದು ನ್ಯುಮೋನಿಯಾ ಅಥವಾ ಶ್ವಾಸಕೋಶದ ಇನ್ಫೆಕ್ಷನ್ ಇರಬಹುದು.
ವಾಂತಿ ಮತ್ತು ಡಿಹೈಡ್ರೇಶನ್
ಜ್ವರದ ಜೊತೆಗೆ ನಿರಂತರ ವಾಂತಿ, ಭೇದಿ ಆಗುತ್ತಿದ್ದರೆ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುತ್ತದೆ. ಬಾಯಿ ಒಣಗುವುದು, ಮೂತ್ರ ಕಡಿಮೆಯಾಗುವುದು ಕಂಡು ಬಂದರೆ ಇದು ಡೆಂಗ್ಯೂ ಅಥವಾ ಟೈಫಾಯಿಡ್ ನ ಸೂಚನೆಯಾಗಬಹುದು.
ದೇಹದ ಮೇಲೆ ದದ್ದು ಅಥವಾ ರಕ್ತಸ್ರಾವ
ಚರ್ಮದ ಮೇಲೆ ಕೆಂಪು ಚುಕ್ಕೆಗಳು, ಮೂಗಿನಿಂದ ರಕ್ತ, ವಸಡಿನಿಂದ ರಕ್ತ ಬರುವುದು, ಕಣ್ಣು ಕೆಂಪಾಗುವುದು ಕಂಡುಬಂದರೆ ಇದು ಅಪಾಯಕಾರಿ. ಡೆಂಗ್ಯೂ ಜ್ವರದಲ್ಲಿ ಪ್ಲೇಟ್ಲೆಟ್ ಕಡಿಮೆಯಾಗುವ ಲಕ್ಷಣ ಇದಾಗಿದೆ.
ತೀವ್ರ ತಲೆನೋವು ಮತ್ತು ಕುತ್ತಿಗೆ ನೋವು
ಜೊತೆಗೆ ಬೆಳಕಿಗೆ ಕಣ್ಣು ಮಿಟುಕಿಸುವುದು, ವಾಂತಿ ಆಗುವುದು ಕಂಡರೆ ಮೆನಿಂಜೈಟಿಸ್ ಇರಬಹುದು. ತಕ್ಷಣ ತಪಾಸಣೆ ಮಾಡಿಸಿಕೊಳ್ಳಿ.
ಪ್ರಜ್ಞೆ ತಪ್ಪುವ ಲಕ್ಷಣ
ಜ್ವರದ ಜೊತೆಗೆ ತಲೆ ತಿರುಗುವುದು, ಗೊಂದಲ, ನಿದ್ರೆ ಹೆಚ್ಚಾಗುವುದು ಅಥವಾ ಪ್ರಜ್ಞೆ ತಪ್ಪುವ ಹಾಗೆ ಆದರೆ ಇದು ಮೆದುಳಿಗೆ ಸಂಬಂಧಿಸಿದ ಇನ್ಫೆಕ್ಷನ್ ಇರಬಹುದು.
ಮಕ್ಕಳು ಮತ್ತು ವಯಸ್ಕರಲ್ಲಿ ವಿಶೇಷ ಎಚ್ಚರಿಕೆ
5 ವರ್ಷದ ಒಳಗಿನ ಮಕ್ಕಳು ಮತ್ತು 60 ವರ್ಷ ಮೇಲ್ಪಟ್ಟವರಿಗೆ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಅವರಿಗೆ 3 ದಿನಕ್ಕಿಂತ ಹೆಚ್ಚು ಜ್ವರ ಇದ್ದರೆ ಕಾಯದೆ ಡಾಕ್ಟರ್ ಬಳಿ ಹೋಗಿ. ಮಧುಮೇಹ, BP ಇರುವವರೂ ಎಚ್ಚರ ವಹಿಸಬೇಕು.
ಹಾಗಾದ್ರೆ, ಮನೆಯಲ್ಲಿ ಏನು ಮಾಡಬಹುದು?
ಹೆಚ್ಚು ನೀರು ಕುಡಿಯಿರಿ. ವಿಶ್ರಾಂತಿ ತೆಗೆದುಕೊಳ್ಳಿ. ವೈದ್ಯರ ಸಲಹೆ ಇಲ್ಲದೆ ಆಂಟಿಬಯೋಟಿಕ್ ತೆಗೆದುಕೊಳ್ಳಬೇಡಿ. ಜ್ವರ 102 ಡಿಗ್ರಿಗಿಂತ ಹೆಚ್ಚಿದ್ದರೆ ಅಥವಾ 3 ದಿನ ದಾಟಿದರೆ ರಕ್ತ ಪರೀಕ್ಷೆ ಮಾಡಿಸುವುದು ಒಳ್ಳೆಯದು.