ನವದೆಹಲಿ: ದಿನವೂ ಹತ್ತಾರು ಮಾತ್ರೆ ತಗೆದುಕೊಂಡು ಅದಕ್ಕಾಗಿ ನೂರಾರು ರೂಪಾಯಿ ವೆಚ್ಚ ಮಾಡುವ ಜನರಿಗೆ ಕೇಂದ್ರ ಸರ್ಕಾರ ಭರ್ಜರಿ ಸಿಹಿ ಸುದ್ದಿ ನೀಡಿದೆ. ಹೌದು, ಕೇಂದ್ರ ಸರ್ಕಾರದ ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರವು ಮಧುಮೇಹ, ಅಧಿಕ ರಕ್ತದೊತ್ತಡ, ಹೃದ್ರೋಗ, ಸೋಂಕುಗಳು, ಕಣ್ಣಿನ ಅಸ್ವಸ್ಥತೆಗಳು, ಉಸಿರಾಟದ ಕಾಯಿಲೆಗಳು ಸೇರಿದಂತೆ ಹಲವು ಕಾಯಿಲೆಗಳ ಔಷಧಿಗಳ ಚಿಲ್ಲರೆ ಮಾರಾಟ ದರವನ್ನ ಕಡಿಮೆ ಮಾಡಿ ಆದೇಶಿಸಿದೆ. ಆ ಕುರಿತ ವರದಿ ಇಲ್ಲಿದೆ.
ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಅಧೀನ ಸಂಸ್ಥೆಯಾದ ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರ (NPPA), 2013 ರ ಔಷಧಗಳ (ಬೆಲೆ ನಿಯಂತ್ರಣ) ಆದೇಶ (DPCO) ಅಡಿಯಲ್ಲಿ, ವಿವಿಧ ದೀರ್ಘಕಾಲೀನ ಕಾಯಿಲೆಗಳ ಚಿಕಿತ್ಸೆಗೆ ಬಳಸುವ 39 ಅಗತ್ಯ ಔಷಧಿಗಳ ಚಿಲ್ಲರೆ ಬೆಲೆಯ ಗರಿಷ್ಠ ಮಿತಿಯನ್ನು ನಿಗದಿಪಡಿಸಿ ಆದೇಶ ಹೊರಡಿಸಿದೆ. ಇದರಿಂದ ಅಗತ್ಯ ಔಷಧಿಗಳ ಬೆಲೆ ಸ್ವಲ್ಪ ಕಡಿಮೆಯಾಗುತ್ತದೆ.
ಚಿಕಿತ್ಸಾ ವೆಚ್ಚದ ಮೇಲಾಗುವ ಪರಿಣಾಮವೇನು?
ಡ್ರಗ್ಸ್ ಪ್ರೈಸ್ ಕಂಟ್ರೋಲ್ ಪ್ರಕಾರ ಯಾವುದೇ ಫಾರ್ಮಾ ಕಂಪನಿಗಳು ಇದಕ್ಕಿಂತ ಹೆಚ್ಚಿನ ದರ ವಿಧಿಸುವಂತಿಲ್ಲ. ಅದರಂತೆ, ಮಧುಮೇಹ ಮತ್ತು ಬಿಪಿಯಂತಹ ಜೀವಮಾನ ಪರ್ಯಂತ ತೆಗೆದುಕೊಳ್ಳಬೇಕಾದ ಔಷಧಿಗಳ ಮೇಲಿನ ದರ ಮಿತಿಯಿಂದಾಗಿ ಸಾಮಾನ್ಯ ಕುಟುಂಬಗಳ ತಿಂಗಳ ವೈದ್ಯಕೀಯ ವೆಚ್ಚವು ಗಣನೀಯವಾಗಿ ಕಡಿಮೆಯಾಗಲಿದೆ.
ಹಾಗಾದ್ರೆ, ಯಾವ ಮಾತ್ರೆಯ ಬೆಲೆ ಎಷ್ಟು?
ಮಧುಮೇಹ ಸಂಬಂಧಿತ ಎಂಪಾಗ್ಲಿಫ್ಲೋಜಿನಾ, ಸಿಟಾಗ್ಲಿಪ್ಟಿನ್ ಮತ್ತು ಮೆಟ್‌ಫಾರ್ಮಿನ್ ಹೈಡ್ರೋಕ್ಲೋರೈಡ್ ಮಾತ್ರೆಗಳ ಬೆಲೆಗಳು ಅವುಗಳ ಸಾಮರ್ಥ್ಯಕ್ಕೆ (mg) ಅನುಗುಣವಾಗಿ ₹14.88 ರಿಂದ ₹17.17 ಕ್ಕೆ ನಿಗದಿ ಮಾಡಲಾಗಿದೆ.
ರಕ್ತದೊತ್ತಡ ಸಂಬಂಧಿತ ಆಮ್ಲೋಡಿಪೈನ್ + ಬಿಸೊಪ್ರೊಲೊಲ್ + ಟೆಲ್ಮಿಸಾರ್ಟನ್ ಮಾತ್ರೆಯ ಬೆಲೆ ₹14.74 ಬೆಲೆ ನಿಗದಿ ಮಾಡಲಾಗಿದೆ.
ಕಣ್ಣಿನ ಸೋಂಕು ಸಂಬಂಧಿತ ನೆಪಾಫೆನಾಕ್ + ಮೊಕ್ಸಿಫ್ಲೋಕ್ಸಾಸಿನ್ ಕಣ್ಣಿನ ಡ್ರಾಪ್ಸ್ ಪ್ರತಿ ಮಿಲಿ ಲೀಟರ್‌ಗೆ ₹68.64 ಬೆಲೆ ನಿಗದಿ ಮಾಡಲಾಗಿದೆ.
ಹೃದ್ರೋಗ ಸಂಬಂಧಿತ ಕ್ಲೋಪಿಡೋಗ್ರೆಲ್ + ಆಸ್ಪಿರಿನ್ + ಅಟೊರ್ವಸ್ಟಾಟಿನ್ ಮಾತ್ರೆಯ ಬೆಲೆ ₹6.37 ನಿಗದಿ ಮಾಡಲಾಗಿದೆ.
ಕ್ಯಾಲ್ಸಿಯಂ ಮತ್ತು ವಿಟಮಿನ್ D3 ಗಳ ಪ್ರತಿ ಮಾತ್ರೆಯ ಗರಿಷ್ಠ ಬೆಲೆಯನ್ನು ₹8.93 ಕ್ಕೆ ನಿಗದಿಪಡಿಸಲಾಗಿದೆ.
ನಾಯಿ ಕಡಿತಕ್ಕೆ ನೀಡುವ ಆಂಟಿ-ರೇಬಿಸ್ ಇಮ್ಯುನೊಗ್ಲೋಬ್ಯುಲಿನ್ ಇಂಜೆಕ್ಷನ್ ದರವನ್ನು ₹119.48 ಕ್ಕೆ ಪರಿಷ್ಕರಿಸಲಾಗಿದೆ.
ಹೃದಯಘಾತದ ಸಂದರ್ಭದಲ್ಲಿ ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯಲು ಬಳಸುವ ಪ್ರಾಣರಕ್ಷಕ 'ಟೆನೆಕ್ಟೆಪ್ಲೇಸ್' (50mg) ಇಂಜೆಕ್ಷನ್ ಬೆಲೆಯನ್ನು ₹60,238.27 ಕ್ಕೆ ನಿಗದಿಪಡಿಸಲಾಗಿದೆ.
ಹೆಚ್ಚು ಹಣ ವಸೂಲಿ ಮಾಡಿದರೆ ಏನು?
ಯಾವುದೇ ಔಷಧ ಕಂಪನಿಗಳು ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಯನ್ನು ವಿಧಿಸಿದರೆ, ಗ್ರಾಹಕರಿಂದ ಸಂಗ್ರಹಿಸಿದ ಹೆಚ್ಚುವರಿ ಮೊತ್ತವನ್ನು ಬಡ್ಡಿಯೊಂದಿಗೆ ಮರುಪಾವತಿಸಬೇಕಾಗುತ್ತದೆ ಎಂದು ಸರ್ಕಾರ ಎಚ್ಚರಿಸಿದೆ. ಈ ಕ್ರಮವನ್ನು ಔಷಧ (ಬೆಲೆ ನಿಯಂತ್ರಣ) ಆದೇಶ, 2013 ಮತ್ತು ಅಗತ್ಯ ಸರಕುಗಳ ಕಾಯ್ದೆ, 1955 ರ ಅಡಿಯಲ್ಲಿ ತೆಗೆದುಕೊಳ್ಳಲಾಗುತ್ತದೆ. ಇದರರ್ಥ ಔಷಧ ಕಂಪನಿಗಳು ತಮಗೆ ಬೇಕಾದಂತೆ ಬೆಲೆಗಳನ್ನು ವಿಧಿಸಲು ಸಾಧ್ಯವಿಲ್ಲ.