ಸಾಂದರ್ಭಿಕ ಚಿತ್ರ cottonbro studio / Pexels.com
ಆರೋಗ್ಯ

ಭಾರತದಲ್ಲಿ ನಿದ್ರಾಹೀನತೆಯ ಸಮಸ್ಯೆ: ಆಯುರ್ವೇದವು ಶಾಶ್ವತ ಪರಿಹಾರವನ್ನು ನೀಡಬಹುದೇ?

25-33 % ಯುವಜನತೆ ನಿದ್ರಾಹೀನತೆಯ ಗುಲಾಮರಾಗಿದ್ದಾರೆ. ನಿಧಾನವಾಗಿ ಭಾರತವು 'silent sleep epidemic' ಎಂದು ಕರೆಯಲ್ಪಡುತ್ತಿದೆ.

21ನೇ ಶತಮಾನದ ಆಧುನಿಕ ಜೀವನಶೈಲಿಯ ವೇಗ, ಅನಿಯಮಿತ ದಿನಚರಿ, ಹೆಚ್ಚುತ್ತಿರುವ ಮಾನಸಿಕ ಒತ್ತಡದಿಂದಾಗಿ ಭಾರತದಲ್ಲಿ ನಿದ್ರಾಹೀನತೆ ಕಬಂಧಬಾಹುವಿನಂತೆ ಒಂದು ಪ್ರಮುಖ ಆರೋಗ್ಯ ಸಮಸ್ಯೆಯಾಗಿ ಬೆಳೆದುನಿಂತಿದೆ.

ನಿದ್ರೆ ಎಂದರೆ ಕೇವಲ ವಿಶ್ರಾಂತಿಯಲ್ಲ; ನಿದ್ರೆ ನಮ್ಮ ದೇಹ ಹೊಂದಿರುವ ಪುನಶ್ಚೇತನ ವ್ಯವಸ್ಥೆ. ದೈಹಿಕ ಶ್ರಮ ನೀಗಿಸಿ, ಮನಸ್ಸಿಗೆ ವಿರಾಮ ನೀಡುವುದರ ಮೂಲಕ ಶಾರೀರಿಕ ಸಮತೋಲನದ ಅಡಿಪಾಯವಾಗಿದೆ.

2026ರ ಇತ್ತೀಚಿನ ರಾಷ್ಟ್ರವ್ಯಾಪಿ ಸಮೀಕ್ಷೆಯ ಪ್ರಕಾರ ಸುಮಾರು 59% ಭಾರತೀಯರು ದಿನಕ್ಕೆ 6 ಗಂಟೆಗಳಿಗಿಂತ ಕಡಿಮೆ ಅವಧಿಯ ನಿರಂತರ ನಿದ್ರೆ ಪಡೆಯುತ್ತಿದ್ದಾರೆ. 25-33 % ಯುವಜನತೆ ನಿದ್ರಾಹೀನತೆಯ ಗುಲಾಮರಾಗಿದ್ದಾರೆ. ನಿಧಾನವಾಗಿ ಭಾರತವು 'silent sleep epidemic' ಎಂದು ಕರೆಯಲ್ಪಡುತ್ತಿದೆ. ಭಾರತದಲ್ಲಿ ನಿದ್ರೆಯ ಕೊರತೆಯು ಕೇವಲ ವೈಯಕ್ತಿಕ ಸಮಸ್ಯೆಯಲ್ಲ; ಅದು ಸಾರ್ವಜನಿಕ ಆರೋಗ್ಯದ ಸವಾಲಾಗಿ ರೂಪುಗೊಳ್ಳುತ್ತಿದೆ. ಉತ್ತಮ ಆರೋಗ್ಯ ಮತ್ತು ಜೀವನದ ಗುಣಮಟ್ಟಕ್ಕಾಗಿ ನಿಯಮಿತ ಹಾಗೂ ಸಮರ್ಪಕ ನಿದ್ರೆ ಅತ್ಯಗತ್ಯವಾಗಿದೆ.

ಜೀವನ ಶಾಸ್ತ್ರವಾಗಿರುವ ಆಯುರ್ವೇದವು ಮನುಷ್ಯನ ಸರ್ವತೋಮುಖ ಆರೋಗ್ಯದ ದೃಷ್ಟಿಯಿಂದ ನಿದ್ರೆಯ ಮಹತ್ವವನ್ನು ಎತ್ತಿ ಹಿಡಿದಿದೆ. ಸಹಸ್ರಾರು ವರ್ಷಗಳಿಂದ ನಮ್ಮ ದೇಶದ ಋಷಿಮುನಿಗಳು ಹಾಗೂ ಸಾಮಾನ್ಯ ಜನರು ಆರೋಗ್ಯವನ್ನು ಸದೃಢವಾಗಿರಿಸಿಕೊಳ್ಳಲು ಪಾಲಿಸಿಕೊಂಡು ಬಂದಿರುವ ವೈದ್ಯಕೀಯ ವಿಜ್ಞಾನವು ಆಯುರ್ವೇದವಾಗಿದ್ದು, ಇದರಲ್ಲಿ ನಿದ್ರೆಯನ್ನು ಆರೋಗ್ಯ ಸ್ಥಿತಿ ಕಾಪಾಡುವ ಮೂರು ಸ್ತಂಭಗಳಲ್ಲಿ ಒಂದು ಎಂಬುದಾಗಿ ಉಲ್ಲೇಖಿಸಿದ್ದಾರೆ.

ದಿನಚರ್ಯ, ರಾತ್ರಿಚರ್ಯ ಹಾಗೂ ಋತುಚರ್ಯಗಳಲ್ಲಿ ನಿದ್ರಾ ಕ್ರಮಗಳ ಮಂಡನೆಯಿದೆ. ಕಾಶ್ಯಪ ಸಂಹಿತೆಯಲ್ಲಿ ಆರೋಗ್ಯ ಲಕ್ಷಣವನ್ನು ವಿವರಿಸುವಾಗ 'सुखस्वप्नप्रबोधनम्' ಅಂದರೆ 'ಒಳ್ಳೆಯ ನಿದ್ರೆ ಹಾಗೂ ಶುಭ್ರ ಮನಸ್ಸಿನಿಂದ ಜಾಗೃತರಾಗುವುದು ' ಎಂದು ಹೇಳಲಾಗಿದೆ.

ನಿದ್ರಾ ಶೈಲಿಯ ವಿವರಣೆಯೊಂದಿಗೆ, ಅಸಮತೋಲನ ನಿದ್ರೆಯ ಪರಿಣಾಮ ಹಾಗೂ ಚಿಕಿತ್ಸಾ ವಿಧಾನಗಳ ಸಂಪೂರ್ಣ ಚಿತ್ರಣವು ನಮ್ಮ ದೇಶದ ಅತ್ಯಂತ ಪುರಾಣ ವೈದ್ಯಕೀಯ ಪದ್ಧತಿಯಾದ ಆಯುರ್ವೇದದಲ್ಲಿದೆ.

ಚರಕ ಸಂಹಿತೆಯ ಉಲ್ಲೇಖದ ಪ್ರಕಾರ...

ಶುದ್ಧ ದೇಸೀ ಗೋವಿನ ಹಾಲು, ಸ್ನಿಗ್ಧ ಆಹಾರ, ರಕ್ತಶಾಲಿ ಅಕ್ಕಿ, ದ್ರಾಕ್ಷಿ, ಸಕ್ಕರೆ ಹಾಗೂ ಕಬ್ಬಿನ ಉತ್ಪನ್ನಗಳನ್ನು ರಾತ್ರಿ ಸೇವಿಸುವುದು, ನೇತ್ರ ತರ್ಪಣ, ಮುಖ ಲೇಪ ,ಅಭ್ಯಂಗ, ಸ್ನಾನ , ತಲೆಗೆ ತೈಲಧಾರಣೆ, ದೇಹಕ್ಕೆ ಔಷಧೀಯ ಲೇಪನ ಮಾಡಿ ಮೃದುವಾಗಿ ಮರ್ಧನ ಮಾಡುವುದು ಮುಂತಾದವುಗಳು ನಿದ್ರೆಯನ್ನು ಸಹಜವಾಗಿ ಉತ್ತೇಜಿಸುವ ವಿಧಾನಗಳಾಗಿ ಅಭ್ಯಾಸದಲ್ಲಿವೆ.

ಮನಸ್ಸಿಗೆ ಹಿತವಾದ ಶಬ್ಧ, ಗಂಧ, ಸ್ಪರ್ಶ, ಮೃದುವಾದ, ಸುಖಕರ ಹಾಗೂ ವಿಶ್ರಾಂತಿದಾಯಕ ಹಾಸಿಗೆ, ಆರಾಮದಾಯಕ ಆಸನಗಳು ಮತ್ತು ದೇಹಕ್ಕೆ ಆಯಾಸ ಉಂಟುಮಾಡದ ಸುಲಭ ಉಪಕರಣಗಳ ಬಳಕೆಯನ್ನು ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬಹುದು.ಎಮ್ಮೆಯ ಹಾಲು ನಿದ್ರೆ ಪ್ರಚೋದಿಸುವ ಅತ್ಯುತ್ತಮ ಆಹಾರ ಪದಾರ್ಥವೆಂದು ಹೇಳಲಾಗಿದೆ.

ಬ್ರಾಹ್ಮೀ, ಜಟಾಮಾಂಸಿ, ಅಶ್ವಗಂಧಾ, ಶಂಖಪುಷ್ಪಿ ಮುಂತಾದ ಔಷಧ ದ್ರವ್ಯಗಳ ನಿದ್ರಾಜನಕ ಪ್ರಭಾವ ವೈಜ್ಞಾನಿಕವಾಗಿ ಸಾಬೀತಾಗಿದೆ. ಬ್ರಾಹ್ಮೀ ಘೃತ, ಕಲ್ಯಾಣಕ ಘೃತ, ಸರಸ್ವತಾರಿಷ್ಟ, ಅಶ್ವಗಂಧಾರಿಷ್ಟ ಮುಂತಾದ ಔಷಧಯೋಗಗಳು ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸುತ್ತವೆ.

ನಿದ್ರಾ ಸಮಸ್ಯೆಗಳ ನಿರ್ವಹಣೆಯಲ್ಲಿ ದೇಹಶೋಧನ ಪದ್ಧತಿ ಪ್ರಮುಖ ಪಾತ್ರವಹಿಸುತ್ತವೆ. ಶಿರೋಧಾರಾ, ಶಿರೋಅಭ್ಯಂಗ, ನಸ್ಯ, ತಕ್ರಧಾರಾ ಮೊದಲಾದ ಚಿಕಿತ್ಸೆಗಳು ನರಮಂಡಲದ ಮೇಲೆ ಶಮನಕಾರಿ ಪರಿಣಾಮವನ್ನು ಉಂಟುಮಾಡುತ್ತದೆ.

ಇವು ದೀರ್ಘಕಾಲೀನ ನಿದ್ರಾಹೀನತೆಯನ್ನು ದೂರಮಾಡುವಲ್ಲಿ ಸಫಲವಾಗಿವೆ ಎಂದರೆ ಅತಿಶಯೋಕ್ತಿಯೇನಲ್ಲ.

ಕೊನೆಮಾತು: ಸುಖ-ದುಃಖಗಳು, ದೇಹದ ಪೋಷಣೆ, ಕಾರ್ಯಸಾಮರ್ಥ್ಯ, ಜ್ಞಾನ-ಅಜ್ಞಾನ ಇವೆಲ್ಲವೂ ನಿದ್ರೆಯ ಮೇಲೆ ಅವಲಂಬಿತವಾಗಿವೆ. ಸುಖನಿದ್ರೆಯತ್ತ ಒಂದು ಹೆಜ್ಜೆ, ಆರೋಗ್ಯಕರ ಜೀವನದತ್ತ ಒಂದು ದೊಡ್ಡ ಹೆಜ್ಜೆಯಾಗಬಲ್ಲದು. ಜೀವನಶೈಲಿ ಸುಧಾರಣೆ, ಮನಸ್ಸಿನ ಸಮತೋಲನ ಮತ್ತು ವೈಯಕ್ತಿಕ ದೇಹಪ್ರಕೃತಿಗೆ ಅನುಗುಣವಾದ ಚಿಕಿತ್ಸೆಯ ಮೂಲಕ ಆಯುರ್ವೇದವು ನಿದ್ರಾ ಸಂಕಟವನ್ನು ಎದುರಿಸಲು ಸಮಗ್ರ ಮಾರ್ಗವನ್ನು ಒದಗಿಸುತ್ತದೆ.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆ, ಉಡುಪಿಯಲ್ಲಿನ ಮನೋ ವಿಜ್ಞಾನ ಹಾಗೂ ಮಾನಸ ರೋಗ ಹೊರ ರೋಗಿ ವಿಭಾಗದಲ್ಲಿ ಎಲ್ಲಾ ರೀತಿಯ ಮಾನಸಿಕ ಅಸಮತೋಲನ, ದುಶ್ಚಟಗಳಿಂದಾಗುವ ಆರೋಗ್ಯ ಸಮಸ್ಯೆ ಹಾಗೂ ನಿದ್ರಾಹೀನತೆಗೆ ಅತ್ಯಂತ ಪರಿಣಾಮಕಾರಿ ಚಿಕಿತ್ಸಾ ಕ್ರಮಗಳು ಲಭ್ಯವಿದ್ದು, ಪ್ರಜ್ಞಾವಂತ ಜನರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.

ಡಾ ವಿಜಯೇಂದ್ರ ಜಿ ಭಟ್

ಪ್ರಾಧ್ಯಾಪಕ ಮತ್ತು ಮುಖ್ಯಸ್ಥ, ಮಾನಸರೋಗ ಏವಂ ಮನೋವಿಜ್ಞಾನ, ಪಿಜಿ ಅಧ್ಯಯನ ವಿಭಾಗ,

SDM ಕಾಲೇಜ್ ಆಫ್ ಆಯುರ್ವೇದ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಉಡುಪಿ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ರಧಾನಿ ನಿವಾಸದ ಮುಂದೆ ರಾಹುಲ್ ನೇತೃತ್ವದಲ್ಲಿ ಕಾಂಗ್ರೆಸ್ ಉಗ್ರ ಪ್ರತಿಭಟನೆ; ಮೋದಿ, ಅಮಿತ್‌ ಶಾ, ಪ್ರಧಾನ್‌ ರಾಜೀನಾಮೆಗೆ ಪಟ್ಟು

CJP Protest LIVE Updates | ಪ್ರತಿಭಟನೆ ಮುಂದುವರಿಯಲಿದೆ; ಭರವಸೆ ಕಳೆದುಕೊಳ್ಳಬೇಡಿ: ಸಿಜೆಪಿಯ ಅಭಿಜೀತ್ ದೀಪ್ಕೆ ವಿನಂತಿ

ಖಾಸಗಿ ಆಸ್ಪತ್ರೆಗೆ ಸೋನಮ್ ವಾಂಗ್‌ಚುಕ್‌ ಸ್ಥಳಾಂತರಕ್ಕೆ ದೆಹಲಿ ಹೈಕೋರ್ಟ್ ಸೂಚನೆ; ಧನ್ಯವಾದ ಅರ್ಪಿಸಿದ ಪತ್ನಿ ಗೀತಾಂಜಲಿ!

ಬೆಂಗಳೂರಿನಲ್ಲಿ 500 ರೂ. ನಕಲಿ ನೋಟು ಮುದ್ರಿಸಿ ಚಲಾವಣೆ: ಇಬ್ಬರ ಬಂಧನ; ಬೆಚ್ಚಿ ಬಿದ್ದ ರಾಜಧಾನಿ ಜನ!

'Secret Family': ಹೆಂಡತಿ- ಮಗನ ಜೊತೆಗೆ ರಾಹುಲ್ ದೋಣಿ ವಿಹಾರ! Video ಸಿಕ್ಕಾಪಟ್ಟೆ ವೈರಲ್, ನಿಜನಾ? ಕಾಂಗ್ರೆಸ್ ಹೇಳಿದ್ದೇನು?