ಆಗಾಗ್ಗೆ ತಲೆನೋವಿನ ಸಮಸ್ಯೆ ಇದೆಯಾ? ಇದು ತೀವ್ರ ನೋವು, ವಾಕರಿಕೆ, ವಾಂತಿ ಮತ್ತಿತರ ನರಗಳಿಗೆ ಸಂಬಂಧಿಸಿದ ಸಮಸ್ಯೆಯಾಗಬಹುದು. ಸಾಮಾನ್ಯವಾಗಿ ಔಷಧ ಸೇವನೆ ಮತ್ತು ಜೀವನಶೈಲಿಯ ಬದಲಾವಣೆಯಿಂದ ಆಗಾಗ್ಗೆ ತಲೆ ನೋವು ಬಂದರೂ ಅದನ್ನು ನಿರ್ಲಕ್ಷಿಸಬಾರದು ಎಂದು ತಜ್ಞರು ಹೇಳುತ್ತಾರೆ.
ನಿದ್ರೆ ಕೊರತೆ, ನಿರ್ಜಲೀಕರಣ, ಊಟ ಮಾಡದೆ ಇರುವುದು, ಒತ್ತಡ, ಹಾರ್ಮೋನುಗಳ ಬದಲಾವಣೆಗೂ ಮೈಗ್ರೇನ್ ಕಾರಣವಾಗಬಹುದು ಎಂದು ವೈಶಾಲಿಯ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನರಶಸ್ತ್ರಚಿಕಿತ್ಸೆಯ ಹಿರಿಯ ಸಲಹೆಗಾರ ಡಾ. ಗೌರವ್ ಬಾತ್ರಾ ಹೇಳುತ್ತಾರೆ.
ಕೆಲವು ಜನರಲ್ಲಿ ಸಂಸ್ಕರಿಸಿದ ಮಾಂಸ, ಹಳೆಯ ಚೀಸ್, ಆಲ್ಕೋಹಾಲ್ ಮತ್ತು ಅತಿಯಾದ ಕಾಫಿ ಸೇವನೆಯು ಮೈಗ್ರೇನ್‌ಗೆ ಕಾರಣವಾಗಬಹುದು. ತಲೆನೋವು ಯಾವಾಗ ಬರುತ್ತದೆ ಎಂಬುದನ್ನು ರೆಕಾರ್ಡ್ ಮಾಡುವುದು, ಅದರ ತೀವ್ರತೆ, ಅವಧಿ, ಆಹಾರ ಸೇವನೆ, ನಿದ್ರೆಯ ಅಭ್ಯಾಸಗಳು ಮತ್ತು ಯಾವ ರೀತಿಯ ಒತ್ತಡವಿದೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದರಿಂದ ವೈದ್ಯರು ಅತ್ಯಂತ ಪರಿಣಾಮಕಾರಿ ಚಿಕಿತ್ಸೆಯನ್ನು ಶಿಫಾರಸು ಮಾಡಲು ನೆರವಾಗುತ್ತದೆ.
ಜೀವನಶೈಲಿಯಲ್ಲಿನ ಬದಲಾವಣೆ: ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳುವುದು ಮೈಗ್ರೇನ್ ಸಮಸ್ಯೆ ಬಾರದಂತೆ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ದೇಹದಲ್ಲಿ ನೀರಿನಂಶವನ್ನು ಸಮರ್ಪಕವಾಗಿ ಕಾಯ್ದುಕೊಳ್ಳುವುದು, ಸಮಯಕ್ಕೆ ಸರಿಯಾಗಿ ಊಟ ಮಾಡುವುದು, ಸಾಕಷ್ಟು ನಿದ್ದೆ ಮಾಡುವುದು, ನಿಯಮಿತವಾಗಿ ವ್ಯಾಯಾಮ ಮಾಡುವುದು ಹಾಗೂ ಯೋಗ ಮತ್ತು ಧ್ಯಾನದಂತಹ ಒತ್ತಡ ನಿರ್ವಹಣಾ ವಿಧಾನಗಳನ್ನು ಅನುಸರಿಸುವಂತೆ ಡಾ. ಬಾತ್ರಾ ಸಲಹೆ ನೀಡುತ್ತಾರೆ.
ನೋವು ನಿವಾರಕ ಔಷಧಿಗಳು ಡೇಂಜರ್: ವೈದ್ಯರ ಸಲಹೆಯಿಲ್ಲದೆ ನೋವು ನಿವಾರಕಗಳನ್ನು ಪದೇ ಪದೇ ಬಳಸದಂತೆಯೂ ಅವರು ಎಚ್ಚರಿಕೆ ನೀಡಿದ್ದಾರೆ. ನೋವು ನಿವಾರಕ ಔಷಧಿಗಳ ಅತಿಯಾದ ಬಳಕೆಯು 'ಔಷಧದ ಅತಿಯಾದ ಬಳಕೆಯಿಂದ ಉಂಟಾಗುವ ತಲೆನೋವಿಗೆ' (medication-overuse headaches) ಕಾರಣವಾಗಬಹುದು; ಇದರಿಂದ ಮೈಗ್ರೇನ್ ಸಮಸ್ಯೆ ಹೆಚ್ಚಾಗುವುದಲ್ಲದೆ, ಅದರ ಚಿಕಿತ್ಸೆಯೂ ಕಷ್ಟಕರವಾಗಬಹುದು.
ಯಾವಾಗ ತುರ್ತು ವೈದ್ಯಕೀಯ ಚಿಕಿತ್ಸೆ ಅಗತ್ಯ?
ಆಗಾಗ್ಗೆ ತಲೆನೋವು ಬರುವುದರಿಂದ ಜೀವಕ್ಕೆ ಆಪತ್ತಿನ ಸಾಧ್ಯತೆ ಇಲ್ಲದಿದ್ದರೂ ಕೆಲವೊಂದು ಲಕ್ಷಣಗಳು ಕಂಡುಬಂದಾಗ ತುರ್ತು ಚಿಕಿತ್ಸೆ ಪಡೆಯುವ ಅಗತ್ಯವಿದೆ. ಇದಕ್ಕಿದ್ದಂತೆ ತೀವ್ರ ತಲೆನೋವು, ಕೈ ಕಾಲುಗಳಲ್ಲಿ ನಿಶಕ್ತತೆ, ಗೊಂದಲ, ಮಾತನಾಡಲು ಕಷ್ಟವಾಗುವುದು, ದೃಷ್ಟಿಯಲ್ಲಿ ಬದಲಾವಣೆ, ಜ್ವರ, ಕೆಮ್ಮು ಹಾಗೂ ಸೀನು ಹೆಚ್ಚಾದಾಗ ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ. ತಲೆಗಾಯದ ನಂತರ ತಲೆ ನೋವು ಬರುತ್ತಿದ್ದರೆ ನಿರ್ಲಕ್ಷಿಸಬಾರದು.
ಯಾವಾಗ MRI ಅಥವಾ ಸಿಟಿ ಸ್ಕ್ಯಾನ್ ಅಗತ್ಯ?
ಆಗಾಗ್ಗೆ ಮೈಗ್ರೇನ್ ಸಮಸ್ಯೆ ಅನುಭವಿಸುವವರು ವಿವರವಾದ ಪರಿಶೀಲನೆಗಾಗಿ ತಜ್ಞರನ್ನು ಸಂಪರ್ಕಿಸಬೇಕು. ಮೈಗ್ರೇನ್ ಇರುವ ಪ್ರತಿಯೊಬ್ಬ ವ್ಯಕ್ತಿಗೂ ಅಗತ್ಯವಿಲ್ಲದಿದ್ದರೂ, ಮೆದುಳಿನ ಸಮಸ್ಯೆ ಬಗ್ಗೆ ತಿಳಿಯಲು MRI ಅಥವಾ CT ಸ್ಕ್ಯಾನ್‌ನಂತಹ ಇಮೇಜಿಂಗ್ ಪರೀಕ್ಷೆಗಳನ್ನು ಮಾಡಿಸುವುದು ಉತ್ತಮ ಎಂದು ಡಾ. ಬಾತ್ರಾ ಹೇಳಿದ್ದಾರೆ. ತಲೆನೋವು ಇದ್ದಕ್ಕಿದ್ದಂತೆ ಆರಂಭವಾಗಿ, ಕಾಲಾನಂತರದಲ್ಲಿ ಹಂತಹಂತವಾಗಿ ಕೆಟ್ಟದಾಗುವುದು, 50 ವರ್ಷ ವಯಸ್ಸಿನ ನಂತರ ಹೆಚ್ಚಾಗಬಹುದು ಎಂದು ಅವರು ಹೇಳಿದ್ದಾರೆ. ಆಗಾಗ್ಗೆ ಪರೀಕ್ಷೆ ಹಾಗೂ ಜೀವನಶೈಲಿಯ ಬದಲಾವಣೆಯಿಂದ ಮೈಗ್ರೇನ್ ನಿರ್ವಹಣೆಯನ್ನು ಗಮನಾರ್ಹವಾಗಿ ಸುಧಾರಿಸಬಹುದು ಎಂದು ಅವರು ಸಲಹೆ ನೀಡಿದ್ದಾರೆ.