ಸಂಗ್ರಹ ಚಿತ್ರ 
ಸುದ್ದಿಗಳು

ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶ 2023: ಸುಧಾಕರ್‌ ಸೇರಿ 7 ಸಚಿವರಿಗೆ ಹಿನ್ನಡೆ

ತೀವ್ರ ಕುತೂಹಲ ಕೆರಳಿಸಿರುವ ರಾಜ್ಯ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಮುಂದುವರೆದಿದ್ದು, ಆರಂಭಿಕ ಮತಎಣಿಕೆ ಪ್ರಕ್ರಿಯೆಯಲ್ಲಿ ಸುಧಾಕರ್ ಸೇರಿ 7 ಮಂದಿ ಸಚಿವರಿಗೆ ಆರಂಭಿಕ ಹಿನ್ನಡೆಯಾಗಿದೆ.

ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿರುವ ರಾಜ್ಯ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಮುಂದುವರೆದಿದ್ದು, ಆರಂಭಿಕ ಮತಎಣಿಕೆ ಪ್ರಕ್ರಿಯೆಯಲ್ಲಿ ಸುಧಾಕರ್ ಸೇರಿ 7 ಮಂದಿ ಸಚಿವರಿಗೆ ಆರಂಭಿಕ ಹಿನ್ನಡೆಯಾಗಿದೆ.

ಎಸ್‌.ಟಿ.ಸೋಮಶೇಖರ್‌, ಗೋವಿಂದ ಕಾರಜೋಳ, ವಿ. ಸೋಮಣ್ಣ, ಶ್ರೀರಾಮುಲು, ಸುಧಾಕರ್‌ ಸೇರಿ ಏಳು ಮಂದಿ ಸಚಿವರಿಗೆ ಹಿನ್ನಡೆಯುಂಟಾಗಿದೆ ಎಂದು ತಿಳಿದುಬಂದಿದೆ.

ಸಚಿವ ಆರ್​.ಅಶೋಕ ಈ ಬಾರಿ ಪಕ್ಷದ ಹೈಕಮಾಂಡ್​ ತೀರ್ಮಾನದಂತೆ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದಾರೆ. ತಮ್ಮ ಹಿಂದಿನ ಪದ್ಮನಾಭನಗರ ಕ್ಷೇತ್ರದೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಅವರನ್ನು ಕಟ್ಟಿ ಹಾಕುವ ಉದ್ದೇಶದಿಂದ ಕನಕಪುರದಲ್ಲೂ ಅಶೋಕ ಸ್ಪರ್ಧೆ ಮಾಡಿದ್ದು, ಸದ್ಯಕ್ಕೆ ಹಿನ್ನಡೆ ಅನುಭವಿಸಿದ್ದಾರೆ. ಕಾಂಗ್ರೆಸ್​ನ ಡಿಕೆ ಶಿವಕುಮಾರ್ ಮುನ್ನಡೆಯಲ್ಲಿದ್ದಾರೆ. ಕಂದಾಯ ಸಚಿವರಾಗಿದ್ದ ಆರ್​ ಅಶೋಕ್​, ಗ್ರಾಮ ವಾಸ್ತವ್ಯ ಮಾಡುವ ಮೂಲಕ ಗಮನ ಸೆಳೆದಿದ್ದರು.

ಸಚಿವ ವಿ.ಸೋಮಣ್ಣ ಅವರ ಕ್ಷೇತ್ರ ಈ ಬಾರಿ ಬದಲಾಗಿದೆ. ಗೋವಿಂದ ರಾಜನಗರ ಬದಲಿಗೆ ಚಾಮರಾಜನಗರ ಮತ್ತು ವರುಣ ಎರಡೂ ಕಡೆ ಸಹ ಸೋಮಣ್ಣ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಚಾಮರಾಜ ನಗರದಿಂದ ಸ್ಪರ್ಧಿಸಲಷ್ಟೇ ಒಲವು ಹೊಂದಿದ್ದ ಸೋಮಣ್ಣಗೆ, ಹೈಕಮಾಂಡ್​​​ ವರುಣಾದಲ್ಲೂ ಟಿಕೆಟ್​ ನೀಡುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ತೊಡೆತಟ್ಟಲು ಹಚ್ಚಿತ್ತು. ಚಾಮರಾಜನಗರದಲ್ಲಿ ಕಾಂಗ್ರೆಸ್​ನಿಂದ ಹ್ಯಾಟ್ರಿಕ್ ಗೆಲುವು ಕಂಡಿರುವ ಪುಟ್ಟರಂಗ ಶೆಟ್ಟಿ ಅವರೊಂದಿಗೆ ಸೋಮಣ್ಣ ತೀವ್ರ ಜಿದ್ದಾಜಿದ್ದಿಗೆ ಪೈಪೋಟಿಗೆ ಇಳಿದಿದ್ದಾರೆ. ವಸತಿ ಖಾತೆ ಸಚಿವರಾಗಿ ಸೋಮಣ್ಣ ಬೊಮ್ಮಾಯಿ ಸರ್ಕಾರದಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಸಚಿವ ಜೆಸಿ ಮಾಧುಸ್ವಾಮಿ ಅವರು ಮೊದಲ ಹಂತದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿ ಟಿಕೆಟ್​ ಸಿಗದ ಕಾರಣ ಕೆಎಸ್​ ಕಿರಣ್​ಕುಮಾರ್ ಕಾಂಗ್ರೆಸ್​ನಿಂದ ಕಣದಲ್ಲಿದ್ದರೆ, ಜೆಡಿಎಸ್​ನಿಂದ ಈ ಹಿಂದೆ ಮೂರು ಬಾರಿ ಗೆದ್ದಿದ್ದ ಮಾಜಿ ಶಾಸಕ ಸಿಬಿ ಸುರೇಶ ಬಾಬು ಸವಾಲು ಎಸೆದಿದ್ದಾರೆ. ಸದ್ಯದ ಟ್ರೆಂಡ್​ನಲ್ಲಿ ಏರಿಳಿತ ಕಂಡು ಬರುತ್ತಿದೆ. ಇವರು ಬೊಮ್ಮಾಯಿ ಸಚಿವ ಸಂಪುಟದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾಗಿ ಕೆಲಸ ಮಾಡಿದ್ದಾರೆ.

ಶಿವಮೊಗ್ಗ ಕ್ಷೇತ್ರದಲ್ಲಿ ಸಚಿವ ಆರಗ ಜ್ಞಾನೇಂದ್ರ ಮತ್ತು ಕಾಂಗ್ರೆಸ್​ನ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಧ್ಯೆ ಸ್ಪರ್ಧೆ ಏರ್ಪಟ್ಟಿದೆ. 1983ರಿಂದ ಇಲ್ಲಿವರೆಗೂ ಆರಗ ಅವರು ಸತತ 10 ಬಾರಿ ಸ್ಪರ್ಧಿಸಿ ದಾಖಲೆ ಬರೆದಿದ್ದಾರೆ. ಇದುವರೆಗೂ ನಾಲ್ಕು ಬಾರಿ ಗೆದ್ದಿರುವ ಅವರು, ಐದು ಅವಧಿಗಳಲ್ಲಿ ಸೋಲು ಅನುಭವಿಸಿದ್ದರು. ಈ ಬಾರಿ ಗೆದ್ದರೆ ಅವರಿಗೆ ಐದನೇ ಗೆಲುವು ದೊರೆಯಲಿದೆ. ಎರಡೂವರೆ ದಶಕದಿಂದ ಇಬ್ಬರು ನಡುವೆಯೇ ನೇರ ಪೈಪೋಟಿ ಇದೆ. ಸದ್ಯ ಸಚಿವ ಜ್ಞಾನೇಂದ್ರ ಮುನ್ನಡೆಯಲ್ಲಿದ್ದಾರೆ. ಹಲವು ಟೀಕೆಗಳ ನಡುವೆ ಸಂಪುಟ ಸೇರಿದ ಮೊದಲ ಯತ್ನದಲ್ಲೇ ಗೃಹ ಸಚಿವರಾಗಿ ಕಾರ್ಯ ನಿರ್ವಹಣೆ ಮಾಡಿದ್ದರು.

ಬೆಂಗಳೂರಿನಲ್ಲಿ ಮಲ್ಲೇಶ್ವರ ಕ್ಷೇತ್ರದಲ್ಲಿ ಸಚಿವ ಸಿಎನ್​ ಅಶ್ವತ್ಥ ನಾರಾಯಣ ಮತ್ತು ಕಾಂಗ್ರೆಸ್​ನ ಅನೂಪ್ ಅಯ್ಯಂಗಾರ್ ನಡುವೆ ಹಣಾಹಣಿ ಏರ್ಪಟ್ಟಿದೆ. ಜೆಡಿಎಸ್​ನಿಂದ ಉತ್ಕರ್ಷ ಕಣದಲ್ಲಿದ್ದು, ಸದ್ಯ ಅಶ್ವತ್ಥ ನಾರಾಯಣ ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ. ಬೊಮ್ಮಾಯಿ ಸಂಪುಟದಲ್ಲಿ ಇವರು ಉನ್ನತ ಶಿಕ್ಷಣ ಸಚಿವರಾಗಿ ಕೆಲಸ ಮಾಡಿದ್ದಾರೆ. ಈ ಮೊದಲು ಬಿಎಸ್​ವೈ ಸಂಪುಟದಲ್ಲಿ ಡಿಸಿಎಂ ಆಗಿದ್ದರು.

ಬಾಗಲಕೋಟೆ ಜಿಲ್ಲೆಯ ಬೀಳಗಿ ಕ್ಷೇತ್ರದಲ್ಲಿ ಸಚಿವ ಮುರುಗೇಶ ನಿರಾಣಿ ಮತ್ತು ಕಾಂಗ್ರೆಸ್​ನ ಜೆಟಿ ಪಾಟೀಲ್​ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಬೀಳಗಿ ಕಳೆದ ಆರು ಚುನಾವಣೆಗಳು ಎಂದರೆ 1994 ರಿಂದಲೂ ನಿರಾಣಿ ಮತ್ತು ಪಾಟೀಲ್ ನಡುವಿನ ಜಿದ್ದಾಜಿದ್ದಿನ ಕಣವಾಗಿದ್ದು, ಇಬ್ಬರು ಕೂಡ ತಲಾ ಮೂರು ಬಾರಿ ಗೆಲುವು ಸಾಧಿಸಿದ್ದಾರೆ. ಈ ಬಾರಿ ಯಾರು ವಿಜಯ ಲಕ್ಷ್ಮಿ ಯಾರಿಗೆ ಒಲಿಯುತ್ತಾಳೆ ಎಂಬುವುದು ಕುತೂಹಲಕ್ಕೆ ಕಾರಣವಾಗಿದೆ. ಆದರೆ, ಕಾಂಗ್ರೆಸ್​ನ ಟಿಕೆಟ್​ ವಂಚಿತ ಇತರ ಮುಖಂಡರು ಅತೃಪ್ತಿ ಹೊಂದಿದ್ದು, ಕಾಂಗ್ರೆಸ್​ಗೆ ಒಳೇಟಿನ ಭೀತಿಯೂ ಇದೆ. ಭಾರಿ ಕೈಗಾರಿಕಾ ಸಚಿವರಾಗಿದ್ದ ನಿರಾಣಿ, ಬಿಎಸ್​ವೈ ರಾಜೀನಾಮೆ ಬಳಿಕ ಸಿಎಂ ರೇಸ್​ನಲ್ಲಿ ಮುಂಚೂಣಿಯಲ್ಲಿದ್ದರು.

ಬೆಂಗಳೂರಿನ ಯಶವಂತಪುರ ಕ್ಷೇತ್ರದಲ್ಲಿ ಸಚಿವ ಎಸ್.​ಟಿ.ಸೋಮಶೇಖರ್ ಕಣದಲ್ಲಿದ್ದಾರೆ. ಜೆಡಿಎಸ್​ನಿಂದ ಜವರಾಯಿಗೌಡ ಹಾಗೂ ಕಾಂಗ್ರೆಸ್​ನಿಂದ​ ಎಸ್​.ಬಾಲರಾಜ್​ಗೌಡ ಸ್ಪರ್ಧೆಯಲ್ಲಿದ್ದಾರೆ. 2013 ಮತ್ತು 2018ರಲ್ಲಿ ಎರಡು ಬಾರಿ ಕಾಂಗ್ರೆಸ್​ನಿಂದ ಗೆದ್ದಿದ್ದ ಸೋಮಶೇಖರ್ 2019ರ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಆಯ್ಕೆಯಾಗಿದ್ದರು. ಸೋಮಶೇಖರ್​ ಸಹಕಾರ ಸಚಿವರಾಗಿದ್ದರಲ್ಲದೇ, ಮೈಸೂರು ಜಿಲ್ಲಾ ವಸ್ತುವಾರಿ ಆಗಿ ಸಹ ಕರ್ತವ್ಯ ನಿರ್ವಹಣೆ ಮಾಡಿದ್ದಾರೆ.

ಹಾವೇರಿ ಜಿಲ್ಲೆಯ ಹಿರೇಕೆರೂರು ಕ್ಷೇತ್ರದಲ್ಲಿ ಸಚಿವ ಬಿಸಿ ಪಾಟೀಲ್ ಕಠಿಣ ಸ್ಪರ್ಧೆ ಎದುರಿಸುತ್ತಿದ್ದಾರೆ. ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿರುವ ಮಾಜಿ ಶಾಸಕ ಯು.ಬಿ.ಬಣಕಾರ್ ಕಣದಲ್ಲಿದ್ದಾರೆ. ಇಬ್ಬರ ನಡುವೆ ತೀವ್ರ ಹಣಾಹಣಿ ಇದೆ. 2004 ರಿಂದಲೂ ಇಬ್ಬರ ನಡುವೆ ತುರುಸಿನ ಸ್ಪರ್ಧೆ ನಡೆಯುತ್ತಿದೆ. ಇವರು ಬಿಎಸ್​ವೈ ಹಾಗೂ ಬೊಮ್ಮಾಯಿ ಸಂಪುಟದಲ್ಲಿ ಕೃಷಿ ಸಚಿವರಾಗಿದ್ದರು,

ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸಚಿವ ಡಾ. ಕೆ.ಸುಧಾಕರ್ ಸ್ಪರ್ಧೆ ಮಾಡಿದ್ದು, ಕಾಂಗ್ರೆಸ್​ನಿಂದ ಪ್ರದೀಪ್​ ಈಶ್ವರ್​ ಎದುರಾಳಿಯಾಗಿದ್ದಾರೆ. 2013 ಮತ್ತು 2018ರ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಗೆಲುವು ಕಂಡಿದ್ದ ಸುಧಾಕರ್, ನಂತರ ಬಿಜೆಪಿ ಸೇರಿದ್ದರು. ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದ ಸುಧಾಕರ್​ ಕೋವಿಡ್ ಅವಧಿಯಲ್ಲಿ ಆರೋಗ್ಯ ಖಾತೆಯನ್ನು ವಹಿಸಿಕೊಳ್ಳುವ ಮೂಲಕ ಬೊಮ್ಮಾಯಿ ಸಂಪುಟದಲ್ಲಿ ಮಹತ್ವದ ಭೂಮಿಕೆ ನಿರ್ವಹಿಸಿದ್ದರು.

ತಮಕೂರು ಜಿಲ್ಲೆಯ ತಿಪಟೂರು ಕ್ಷೇತ್ರದಲ್ಲಿ ಸಚಿವ ಬಿಸಿ ನಾಗೇಶ್ ಮತ್ತು ಕಾಂಗ್ರೆಸ್​ನ ಕೆ.ಷಡಕ್ಷರಿ ಸ್ಪರ್ಧೆ ಏರ್ಪಟ್ಟಿದೆ. 1999ರಲ್ಲೇ ಶಾಸಕರಾಗಿ ಆಯ್ಕೆಯಾಗಿದ್ದ ಷಡಕ್ಷರಿ, 2008ರಿಂದ ನಾಗೇಶ್ ಅವರೊಂದಿಗೆ ಪೈಪೋಟಿ ಎದುರಿಸುತ್ತಿದ್ದಾರೆ. ಕಳೆದ ಮೂರು ಚುನಾವಣೆಗಳಲ್ಲಿ ಅವರೊಮ್ಮೆ, ಇವರೊಮ್ಮೆ ಜಯ ಸಾಧಿಸಿಕೊಂಡು ಬಂದಿದ್ದಾರೆ. ಈ ಬಾರಿ ಗೆಲ್ಲಲೇಬೇಕೆಂಬ ಜಿದ್ದಿಗೆ ಷಡಕ್ಷರಿ ಬಿದ್ದಿದ್ದಾರೆ. ಪ್ರಾಥಮಿಕ ಶಿಕ್ಷಣ ಸಚಿವರಾಗಿ ಇವರು ಪರಿಚಿತ. ಹಿಜಾಬ್ ವಿವಾದದ ವೇಳೆ ಇವರು ದೇಶಾದ್ಯಂತ ಸುದ್ದಿ ಆಗಿದ್ದರು.

ಉಡುಪಿ ಜಿಲ್ಲೆಯ ಕಾರ್ಕಳ ಕ್ಷೇತ್ರದಲ್ಲಿ ಸಚಿವ ಸುನೀಲ್​ ಕುಮಾರ್ ಈ ಸಲ ಭಾರಿ ಪೈಪೋಟಿಯನ್ನು ಎದುರಿಸುತ್ತಿದ್ದಾರೆ. 2004ರಿಂದ ಒಮ್ಮೆ ಹೊರತು ಪಡಿಸಿ ಮೂರು ಬಾರಿ ಗೆದ್ದಿರುವ ಸುನೀಲ್​ ಕುಮಾರ್ ಅವರಿಗೆ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್​ ಮುತಾಲಿಕ್​ ಪ್ರಬಲ ಪೈಪೋಟಿಯಾಗಿದ್ದಾರೆ. ಹಿಂದುತ್ವದ ಹೆಸರಲ್ಲಿ ಮುತಾಲಿಕ್​ ಸುನೀಲ್​ ಕುಮಾರ್ ಅವರಿಗೆ ಎದುರಾಳಿಯಾಗಿದ್ದಾರೆ. ಕಾಂಗ್ರೆಸ್​ನಿಂದ ಉದಯ ಶೆಟ್ಟಿ ಮುನಿಯಾಲ್ ಸಹ ಕಣದಲ್ಲಿದ್ದು, ಕಾರ್ಕಳ ಕುತೂಹಲದ ಕಣವಾಗಿದೆ. ಇಂಧನ ಖಾತೆ ಸಚಿವರಾಗಿ ಇವರು ಕಾರ್ಯ ನಿರ್ವಹಣೆ ಮಾಡಿದ್ದರು.

ಬೆಂಗಳೂರಿನ ಆರ್​ಆರ್​ ನಗರ ಕ್ಷೇತ್ರದಲ್ಲಿ ಸಚಿವ ಮುನಿರತ್ನ ಭಾರಿ ಪೈಪೋಟಿಯನ್ನು ಎದುರಿಸುತ್ತಿದ್ದಾರೆ. 2013, 2018ರಲ್ಲಿ ಕಾಂಗ್ರೆಸ್​ನಿಂದ ಗೆದ್ದಿದ್ದ ಮುನಿರತ್ನ, ನಂತರ ಬಿಜೆಪಿ ಸೇರಿ ಉಪ ಚುನಾವಣೆಯಲ್ಲಿ ಮತ್ತೆ ಗೆದ್ದಿದ್ದರು. ಕಾಂಗ್ರೆಸ್​ನಿಂದ ಐಎಎಸ್ ಅಧಿಕಾರಿಯಾಗಿದ್ದ ದಿ. ಡಿಕೆ ರವಿ ಪತ್ನಿ ಕುಸುಮಾ ಹನುಮಂತರಾಯಪ್ಪ ಕಣದಲ್ಲಿದ್ದಾರೆ. ಮುನಿರತ್ನ ಅವರು ತೋಟಗಾರಿಕಾ ಖಾತೆ ಜತೆ ಸಾಂಖಿಕ ಖಾತೆ ಸಚಿವರಾಗಿಯೂ ಕೆಲಸ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ಮೊದಲ ಬಾರಿಗೆ ದಾಳಿ ಕುರಿತು ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

ಧರ್ಮಸ್ಥಳ ಪ್ರಕರಣ NIA ತನಿಖೆ ಮಾಡಿದರೆ ಆಕ್ಷೇಪವಿಲ್ಲ: ಸಚಿವ ಸತೀಶ್ ಜಾರಕಿಹೊಳಿ

ಭಾರತ- ಫಿಜಿ ರಕ್ಷಣಾ ಸಹಕಾರ ಕ್ರಿಯಾ ಯೋಜನೆ ಸಿದ್ಧ: ಇಂಡೋ ಪೆಸಿಫಿಕ್‌ ವಲಯದಲ್ಲಿ ಚೀನಾದ ಪ್ರಾಬಲ್ಯ ತಡೆಗೆ ಮಾಸ್ಟರ್ ಪ್ಲಾನ್!

SCROLL FOR NEXT