ಸುದ್ದಿಗಳು

ಕರ್ನಾಟಕ ಚುನಾವಣಾ ಫಲಿತಾಂಶ: ಮತ ಎಣಿಕೆಗೆ ಕ್ಷಣಗಣನೆ; ಬೆಂಗಳೂರು, ದಕ್ಷಿಣ ಕನ್ನಡದಲ್ಲಿ ಕರ್ಫ್ಯೂ ಜಾರಿ

Ramyashree GN

ಬೆಂಗಳೂರು: 2023ರ ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಶನಿವಾರ ಬೆಳಗ್ಗೆ 7 ಗಂಟೆಗೆ ಸ್ಟ್ರಾಂಗ್ ರೂಂ ತೆರೆಯಲಾಗಿದ್ದು, ಬಿಗಿ ಭದ್ರತೆಯ ನಡುವೆ ಬೆಳಗ್ಗೆ 8 ಗಂಟೆಗೆ ಎಣಿಕೆ ಪ್ರಕ್ರಿಯೆ ಆರಂಭವಾಗಲಿದೆ.

ರಾಜ್ಯದಾದ್ಯಂತ 36 ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದ್ದು, ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಅಭ್ಯರ್ಥಿಗಳಿಗೆ ಆತಂಕ ಶುರುವಾಗಿದೆ.

ಮತ ಎಣಿಕೆ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗಳಾಗುವುದನ್ನು ತಪ್ಪಿಸಲು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ರಾಜಧಾನಿ ಬೆಂಗಳೂರು ಮತ್ತು ಕೋಮು ಸೂಕ್ಷ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಧಿಕಾರಿಗಳು ಕರ್ಫ್ಯೂ ಜಾರಿ ಮಾಡಿದ್ದಾರೆ. 

ಚುನಾವಣಾ ಫಲಿತಾಂಶವು ಎರಡು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಮತ್ತು ರಾಜ್ಯ ಪಕ್ಷವಾದ ಜೆಡಿಎಸ್‌ಗೆ ನಿರ್ಣಾಯಕವಾಗಿದೆ.

ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯು ಲೋಕಸಭೆ ಚುನಾವಣೆಗೆ ಸೆಮಿಫೈನಲ್ ಎಂದೇ ಹೇಳಲಾಗುತ್ತಿದ್ದು, ಇದು 2024ರ ಸಂಸತ್ ಚುನಾವಣೆಗೆ ರಣಕಹಳೆ ಮೊಳಗಿಸಲಿದೆ ಎನ್ನಲಾಗಿದೆ.

ಅತಂತ್ರ ವಿಧಾನಸಭೆಯನ್ನು ಸೂಚಿಸುವ ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಕಾಂಗ್ರೆಸ್ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಭವಿಷ್ಯ ನುಡಿದಿವೆ. 

SCROLL FOR NEXT