ರಾಜ್ಯ

ಮೌಲ್ಯಮಾಪನ ಬಹಿಷ್ಕರಿಸಿರುವ ಪಿಯು ಪ್ರಾಧ್ಯಾಪಕರ ವಿರುದ್ಧ ಎಸ್ಮಾ ಕಾಯ್ದೆ ಹೇರಿಕೆ?

Srinivas Rao BV

ಬೆಂಗಳೂರು: ಪದವಿ ಪೂರ್ವ ಕಾಲೇಜಿನ ಕೆಲವು ಪ್ರಾಧ್ಯಾಪಕರು ಮೌಲ್ಯಮಾಪನ ಪ್ರಕ್ರಿಯೆಯನ್ನು ಬಹಿಷ್ಕರಿಸಲು ನಿರ್ಧರಿಸಿರುವುದರಿಂದ, ಪ್ರತಿಭಟನಾ ನಿರತ ಪ್ರಾಧ್ಯಾಪಕರ ಮೇಲೆ ಎಸ್ಮಾ (ಕರ್ನಾಟಕ ಅತ್ಯಾವಶ್ಯಕ ಸೇವೆಗಳ ನಿರ್ವಹಣಾ ಕಾಯ್ದೆ) ಹೇರಲು ಸರ್ಕಾರ ಚಿಂತನೆ ನಡೆಸಿದೆ.
ಬೇಡಿಕೆಗಳ ಈಡೇರಿಕೆ ಬಗ್ಗೆ ಪ್ರಾಧ್ಯಾಪಕರು ಸಿಎಂ ಸಿದ್ದರಾಮಯ್ಯ, ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರೊಂದಿಗೆ ನಡೆಸಿದ ಸಭೆ ವಿಫಲವಾದ ಹಿನ್ನೆಲೆಯಲ್ಲಿ ಮೌಲ್ಯಮಾಪನವನ್ನು ಬಹಿಷ್ಕರಿಸಿರುವ ಪಿಯು ಪ್ರಾಧ್ಯಾಪಕರು  ಏ.4 ರಿಂದ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದರು. ಒಂದು ವೇಳೆ ಪ್ರತಿಭಟನೆ ಮುಂದುವರೆದಲ್ಲಿ ಸರ್ಕಾರ ಪ್ರಾಧ್ಯಾಪಕರ ಮೇಲೆ ಎಸ್ಮಾ ಕಾಯ್ದೆಯನ್ನು ಹೇರುವ ಆಯ್ಕೆಯನ್ನು ಪರಿಗಣಿಸಿದೆ ಎನ್ನಲಾಗಿದೆ.  
ಬೇಡಿಕೆ ಈಡೇರುವವರೆಗೂ ಪ್ರತಿಭಟನೆಯನ್ನು ಕೈಬಿಡುವುದಿಲ್ಲ, ಮೌಲ್ಯಮಾಪನವನ್ನು ಮಾಡುವುದಿಲ್ಲ ಎಂದು ಪಿಯು ಪ್ರಾಧ್ಯಾಕಪರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಸ್ಪಷ್ಟಪಡಿಸಿದ್ದಾರೆ. ಎರಡು ದಶಕಗಳಿಂದ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸುತ್ತಿದ್ದೇವೆ, ಬೇಡಿಕೆಗಳ ಪೈಕಿ ಒಂದನ್ನೂ ಸರ್ಕಾರ ಈಡೆರಿಸಿಲ್ಲ ಎಂದು ತಿಮ್ಮಯ್ಯ ಪುರ್ಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆಯ ಹೊರತಾಗಿಯೂ ಏ.3 ರಂದು ಪ್ರಾರಂಭವಾದ ಮೌಲ್ಯಮಾಪನಕ್ಕೆ  ಹಾಜರಾಗಿದ್ದ ಕೆಲವು ಶಿಕ್ಷಕರನ್ನು ಒತ್ತಾಯಪೂರ್ವಕವಾಗಿ ವಾಪಸ್ ಕರೆಸಿಕೊಳ್ಳಾಲಾಗಿದೆ. ಪ್ರತಿಭಟನೆ ಹೀಗೇ ಮುಂದುವರೆದಲ್ಲಿ ರಾಜ್ಯ ಸರ್ಕಾರ ಪಿಯು ಪ್ರಾಧ್ಯಾಪಕರ ವಿರುದ್ಧ ಎಸ್ಮಾ ಕಾಯ್ದೆ ಹೇರಲು ಯೋಚಿಸುತ್ತಿದೆ.

SCROLL FOR NEXT