ತುಮಕೂರು: ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ರಚನೆ ಮಾಡಿರುವ ಸಿದ್ದರಾಮಯ್ಯ ಸರ್ಕಾರದ ಕ್ರಮವನ್ನು ಮಾಜಿ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ಅವರು ಖಂಡಿಸಿದ್ದಾರೆ.
ಉನ್ನತ ಮಟ್ಟದ ಅಧಿಕಾರಿಗಳು, ಸಚಿವರು ಮತ್ತು ಮುಖ್ಯಮಂತ್ರಿಗಳ ವಿರುದ್ಧ ತನಿಖೆ ನಡೆಸಬೇಕೆಂದರೆ ಎಸಿಬಿ ಸಚಿವ ಸಂಪುಟದ ಒಪ್ಪಿಗೆ ಪಡೆಯಬೇಕಿದೆ. ಈಗಾಗಲೇ ಸಂಪುಟದಲ್ಲಿರುವ ಸಚಿವರ ಹಿನ್ನೆಲೆ ನಮಗೆ ತಿಳಿದೇ ಇದೆ ಎಂದು ಅವರು ಹೇಳಿದ್ದಾರೆ.
ಅಷ್ಟೇ ಅಲ್ಲದೇ, ಎಸಿಬಿ ಸಿಎಂ ವಾಚ್ ಹಗರಣ ಕುರಿತು ತನಿಖೆ ನಡೆಸಲು, ಮುಖ್ಯಮಂತ್ರಿಗಳು ಸಾರ್ವಜನಿಕ ಸೇವಕರ ಅಥವಾ ಇಲ್ಲವಾ ಎಂಬುದರ ಬಗ್ಗೆ ಕಾನೂನು ಇಲಾಖೆ ಅಭಿಪ್ರಾಯ ಕೇಳಿದೆ. ಎಸಿಬಿಗೆ ಮೂಲಭೂತವೇ ತಿಳಿಯದೇ ಇರುವುದು ನಾಚಿಕೆಗೇಡು ಸಂಗತಿ ಎಂದ ಅವರು, ಲಾಲು ಪ್ರಸಾದ್ ಯಾದವ್ ಮತ್ತು ತಮಿಳುನಾಡಿನ ಜಯಲಲಿತಾ ಅವರು ಅಧಿಕಾರದಲ್ಲಿದ್ದಾಗಲೇ ಜೈಲಿಗೆ ಕಳುಹಿಸಿಲ್ಲವೇ ಎಂದು ವಿವರಣೆ ನೀಡಿದ್ದಾರೆ.
ದೇಶದ 14 ರಾಜ್ಯಗಳಲ್ಲಿ ಎಸಿಬಿ ಕಾರ್ಯನಿರ್ವಹಿಸುತ್ತಿದೆ ಎಂದು ಮುಖ್ಯಮಂತ್ರಿಗಳು ಹೇಳಬಹುದು. ಹಾಗೆಂದು ರಾಜ್ಯದಲ್ಲಿ ಲೋಕಾಯುಕ್ತ ಬಲವಾಗಿರಬೇಕಾದರೆಯೇ, ರಾಜ್ಯದ ಜನತೆ ತೊಂದರೆ ಅನುಭವಿಸಬೇಕೇ? ಕಳೆದ ಒಂದು ವರ್ಷದದಿಂದ ಕೆಲವು ಘಟನೆಗಳು ನಡೆದಿದೆ. ಹಾಗೆಂದು, ಎಸಿಬಿ ರಚನೆ ಮಾಡಿರುವುದು ಸರಿಯಲ್ಲ ಎಂದು ಸಂತೋಷ್ ಹೆಗ್ಡೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos