ರಾಜ್ಯ

ಲಾಭದತ್ತ ಬೆಂಗಳೂರು ರೈಲು ವಿಭಾಗ

Sumana Upadhyaya

ಬೆಂಗಳೂರು: ನೇರ ರೈಲು ಕಾರ್ಯಾಚರಣೆಗಳಲ್ಲಿ ತೊಡಗಿರುವ ರೈಲ್ವೆ ಸಿಬ್ಬಂದಿ ಕರ್ತವ್ಯದಲ್ಲಿರುವಾಗ ಹೆಚ್ಚು ಜಾಗರೂಕರಾಗಿರುವ ಅಗತ್ಯವಿದೆ ಎಂದು ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಸಂಜೀವ್ ಅಗರ್ ವಾಲ್ ತಿಳಿಸಿದ್ದಾರೆ.

ಅವರು ನಿನ್ನೆ ಬೆಂಗಳೂರಿನಲ್ಲಿ ನಡೆದ 61ನೇ ರೈಲ್ವೆ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿ, ರೈಲ್ವೆ ಇಲಾಖೆಯ ಎಂಜಿನಿಯರಿಂಗ್, ಯಾಂತ್ರಿಕ ಮತ್ತು ಸಂಚಾರ ವಿಭಾಗಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಕೆಲಸ ನಿರ್ವಹಿಸುವಾಗ ಅತ್ಯಂತ ಜಾಗರೂಕರಾಗಿರಬೇಕು. ನಿತ್ಯ ರೈಲಿನಲ್ಲಿ ಸಾವಿರಾರು ಪ್ರಯಾಣಿಕರು ಸಂಚರಿಸುತ್ತಿದ್ದು, ಅವರು ತಮ್ಮ ಸುರಕ್ಷತೆಗಾಗಿ ಸಿಬ್ಬಂದಿ ಮೇಲೆ ನಂಬಿಕೆ ಇಟ್ಟುಕೊಂಡಿರುತ್ತಾರೆ ಎಂದರು.

ಬೆಂಗಳೂರು ವಿಭಾಗದ ಸಾಧನೆಯನ್ನು ವಿವರಿಸಿದ ಅವರು, ಇಲಾಖೆಯ ಆದಾಯ ಸಾವಿರದ 6562 ಕೋಟಿಯಿಂದ  ಸಾವಿರದ 710 ಕೋಟಿ ರೂಪಾಯಿಗೆ ತಲುಪಿದೆ. ವಾಣಿಜ್ಯ ಇಲಾಖೆಯ ಟಿಕೆಟ್ ತಪಾಸಣೆ ಇಲಾಖೆಯ ಆದಾಯ 12.8 ಕೋಟಿಯಾಗಿದೆ. ಡೀಸೆಲ್ ಬೆಲೆ ಇಳಿಕೆಯಾದ್ದರಿಂದ ವಿಭಾಗದ ವೆಚ್ಚ ಸಾವಿರ ಕೋಟಿಯಿಂದ 950 ಕೋಟಿಗೆ ಇಳಿದಿದೆ ಎಂದು ಅಗರ್ ವಾಲ್ ತಿಳಿಸಿದ್ದಾರೆ.

ರೈಲ್ವೆ ಸಿಬ್ಬಂದಿಗಳು ಯಾವುದೇ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರೂ ಇನ್ನೊಬ್ಬರಿಗೆ ಉದಾಹರಣೆಯಾಗಿ ಬದುಕಬೇಕು. ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು ಎಂದು ಬೆಂಗಳೂರು ವಿಭಾಗದ ಹೆಚ್ಚುವರಿ ವ್ಯವಸ್ಥಾಪಕಿ ಅಪರ್ಣ ಗಾರ್ಗ್ ಹೇಳಿದರು.

ವಿವಿಧ ವಿಭಾಗಗಳಲ್ಲಿ ದಕ್ಷತೆಯಿಂದ ಕೆಲಸ ಮಾಡಿದವರಿಗೆ ವಿಭಾಗೀಯ ಮಟ್ಟದ ಪ್ರಶಸ್ತಿ ನೀಡಲಾಯಿತು. ಗ್ರೂಪ್ ಸಿ ವಿಭಾಗದಲ್ಲಿ 158 ಮಂದಿ ಸಿಬ್ಬಂದಿಗೆ ಪ್ರಶಸ್ತಿ ವಿತರಿಸಲಾಯಿತು.
ರೈಲ್ವೆ ಸಪ್ತಾಹವನ್ನು ಪ್ರತಿವರ್ಷ ಆಚರಿಸಲಾಗುತ್ತಿದ್ದು, 1853, ಏಪ್ರಿಲ್ 21ರಂದು ಮುಂಬೈ-ಥಾಣೆ ನಡುವೆ 21 ಮೈಲು ದೂರದವರೆಗೆ ದೇಶದಲ್ಲಿಯೇ ಪ್ರಥಮ ಬಾರಿಗೆ ರೈಲು ಸಂಚಾರ ನಡೆಸಿದ ಸ್ಮರಣಾರ್ಥ ರೈಲ್ವೆ ಸಪ್ತಾಹವನ್ನು ಆಚರಿಸಲಾಗುತ್ತದೆ.

SCROLL FOR NEXT