ಧಾರವಾಡ: ಪೈಪ್ ಒಡೆದು ನೀರು ವ್ಯರ್ಥವಾಗುವುದು ಹಲವು ಕಡೆ ನಾವು ಗಮನಿಸಿರುತ್ತೇವೆ. ಅದನ್ನು ಸಂಬಂಧಪಟ್ಟ ಅಧಿಕಾರಿಗಳು ಸರಿಪಡಿಸುವವರೆಗೆ ನೀರು ಪೋಲಾಗುತ್ತಿರುತ್ತದೆ. ಈ ರೀತಿ ಪೋಲಾಗುತ್ತಿದ್ದ ನೀರಿನಿಂದ ಧಾರವಾಡ ಮಹಿಳೆಯೊಬ್ಬರು ಓಯಸಿಸ್ ಮಾದರಿಯಲ್ಲಿ ಸಮರ್ಥವಾಗಿ ಬಳಸಿಕೊಂಡಿದ್ದಾರೆ.
ಏನಪ್ಪಾ ಇದು ಧಾರವಾಡದಲ್ಲಿ ಓಯಾಸಿಸ್ ನಿರ್ಮಿಸುವುದಾ ಎಂದು ಆಶ್ಚರ್ಯ ಪಡುವುದು ಸಹಜ. ಆದರೆ ಅದು ಸತ್ಯ. ಮರುಭೂಮಿಯಲ್ಲಿ ಕಂಡುಬರುವ ಬುಗ್ಗೆಗೆ ಓಯಾಸಿಸ್ ಎಂದು ಹೇಳಲಾಗುತ್ತದೆ. ಅದೇ ರೀತಿ ಧಾರವಾಡದಲ್ಲೂ ಬರ ಹೆಚ್ಚಾಗಿದ್ದು ಜನರು ನೀರಿಗಾಗಿ ಪರದಾಡುತ್ತಿದ್ದಾರೆ. ಇಂತಹ ಜಾಗದಲ್ಲಿ ವ್ಯರ್ಥವಾಗುತ್ತಿದ್ದ ನೀರನ್ನು ಮಹಿಳೆಯೊಬ್ಬರು ಸಮರ್ಥವಾಗಿ ಬಳಸಿಕೊಂಡಿರುವುದರಿಂದ ಓಯಾಸಿಸ್ ಎಂದರೆ ತಪ್ಪಾಗಲಾರದು.
ಧಾರವಾಡ ಜಿಲ್ಲೆ ಮಲ್ಲೋಲ್ಲಿ ಹಳ್ಳಿ ನಿವಾಸಿ ಬಸವ್ವ ಕಂಬ್ಲಿ(45) ತನ್ನ ಚಿಕ್ಕ ಮನೆಯ ಚಿಕ್ಕದಾಗಿ ಓಯಾಸಿಸ್ ನಿರ್ಮಿಸಿದ ಮಹಿಳೆ. 2008ರಲ್ಲಿ ಪ್ರವಾಹಕ್ಕೆ ತುತ್ತಾಗಿ ಆಸ್ತಿ ಪಾಸ್ತಿ ಕಳೆದುಕೊಂಡ ಬಸವ್ವ ಅವರಿಗೆ ಸರ್ಕಾರಿ ಪುನರ್ವಸತಿ ಯೋಜನೆಯಿಂದ ಮನೆ ನೀಡಲಾಯಿತು. ಈಕೆಯ ಮನೆಯ ಮುಂದೆ ಸರ್ಕಾರಿ ನೀರಿನ ಪೈಪ್ ಇದೆ. ಉತ್ತಮ ಮಟ್ಟದ ಪೈಪ್ ಹಾಕದೇ ಇರುವುದರಿಂದ ಪೈಪ್ ನಿಂದ ನೀರು ಸೋರಿಕೆಯಾಗುತ್ತಿತ್ತು.
ಇದನ್ನು ಇಂಜಿನಿಯರ್ ಗಳು ಸ್ವಲ್ಪಮಟ್ಟಿಗೆ ಸರಿಪಡಿಸಿದರು. ಆದರೂ, ಈ ಪೈಪ್ ನಿಂದ ನೀರು ಸೋರಿಕೆಯಾಗಿ ಯಾರು ಬಳಸದಂತೆ ವ್ಯರ್ಥವಾಗುತ್ತಿತ್ತು. ಆದರೆ, ಈ ರೀತಿ ಪೋಲಾಗುತ್ತಿರುವ ನೀರನ್ನು ಬಳಕೆ ಮಾಡಲು ನಿರ್ಧರಿಸಿದ ಬಸವ್ವ, ತನ್ನ ಮನೆ ಮುಂದೆ ಹಳ್ಳ ಬಗೆದಳು. ಸೋರಿಕೆಯಾಗುತ್ತಿದ್ದ ನೀರು ಆ ಹಳ್ಳಕ್ಕೆ ಹರಿಯಿತು.
ಮನೆ ಮುಂದೆ ಬೆಳೆಯುತ್ತಿದ್ದ ತರಕಾರಿಗಳಿಗೆ ಹಳ್ಳದಲ್ಲಿ ಸಂಗ್ರಹವಾದ ನೀರನ್ನು ಉಪಯೋಗಿಸುತ್ತಿದ್ದಳು. ಇದೇ ತರಕಾರಿ, ಹೂವು ಸೇರಿದಂತೆ ಅನೇಕ ಬೆಳೆಗಳನ್ನು ಬಸವ್ವ ಬೆಳೆಯುತ್ತಿದ್ದಾರೆ. ಅಷ್ಟೇ ಅಲ್ಲದೇ, ಬೇಸಿಗೆಯ ಧಗೆಯಿಂದ ನೀರನ್ನರಸಿ ಬಂದ ಅನೇಕ ಪಕ್ಷಿಗಳು ಈ ಹಳ್ಳದಲ್ಲಿರುವ ನೀರನ್ನು ಕುಡಿಯುತ್ತಿವೆ.
ಕಳೆದ ಎರಡು ವರ್ಷಗಳ ಹಿಂದೆ ಇದ್ದ ಒಬ್ಬ ಮಗನನ್ನು ಕಳೆದುಕೊಂಡೆ. ಹಾಗಾಗಿ, ಬದುಕುವ ಸಲುವಾಗಿ ಏನಾದರೂ ಮಾಡಬೇಕು ಎಂದು ಇದ್ದ ನಾನು ಮನೆ ಮುಂದೆಯೇ ತರಕಾರಿ, ಹಣ್ಣುಗಳನ್ನು ಬೆಳೆಯಲು ಆರಂಭಿಸಿದೆ. ಆದರೆ, ಬೆಳೆ ಬೆಳೆಯಲು ನೀರು ಬೇಕಾಯಿತು. ಇದಕ್ಕೆ ಪೈಪ್ ನಿಂದ ಸೋರಿಕೆಯಾಗುತ್ತಿದ್ದ ನೀರನ್ನು ಬಳಸಿಕೊಂಡೆ. ಈಗ ಪುಟ್ಟದಾಗಿ ಒಂದು ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದೇನೆ ಎಂದು ಬಸವ್ವ ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಬಸವ್ವ ಅವರ ಈ ಕೆಲಸಕ್ಕೆ ಉಪ ಆಯುಕ್ತ ರಾಜೇಂದ್ರ ಚೋಳನ್ ಪ್ರಶಂಸಿದ್ದಾರೆ. ಇತ್ತೀಚೆಗೆ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ವೇಳೆ ಬಸವ್ವ ಅವರನ್ನು ಕೆಲಸವನ್ನು ಕಂಡು ಪ್ರಶಂಸಿದ್ದು, ಕೆಲಸ ಮಾಡುವುದು ಶ್ರೇಷ್ಠ, ಅದನ್ನು ಯಾವ ಜಾಗದಲ್ಲಾದರೂ ಮಾಡಬಹುದು ಎಂಬುದನ್ನು ಬಸವ್ವ ತೋರಿಸಿಕೊಟ್ಟಿದ್ದಾರೆ ಎಂದು ಶ್ಲಾಘಿಸಿದ್ದಾರೆ.
ಆದರೆ, ಈ ಹಳ್ಳಿಯಲ್ಲಿ ಜನರು ನೀರಿಗಾಗಿ ಪರದಾಡುತ್ತಿದ್ದಾರೆ. ನೀರಿನ ಕೊರೆತೆ ಹೆಚ್ಚಾಗಿದ್ದು, ಈ ಜಿಲ್ಲೆಯ ಸುತ್ತಾಮುತ್ತಾ ಟ್ಯಾಂಕರ್ ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics