ಬರ ಪೀಡಿತ ಗ್ರಾಮೀಣ ಬಡವರಿಗೆ 175 ದಿನ ಉದ್ಯೋಗ ನೀಡಿ: ಕೇಂದ್ರ ಸರ್ಕಾರಕ್ಕೆ ಸಚಿವ ಈಶ್ವರ ಖಂಡ್ರೆ ಪತ್ರ

ಬೆಂಗಳೂರು: ರಾಜ್ಯದಲ್ಲಿ ಈ ಬಾರಿ 226 ತಾಲೂಕುಗಳು ಬರ ಪೀಡಿತವಾಗಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಬಡ ಕಾರ್ಮಿಕರಿಗೆ ವಿಬಿ ಜಿ ರಾಮ್ ಜಿ ಅಡಿಯಲ್ಲಿ 175 ದಿನ ಉದ್ಯೋಗ ನೀಡಲು ಅನುವಾಗುವಂತೆ ಕೆಲಸದ ಮಿತಿಯನ್ನು 50 ದಿನ ಹೆಚ್ಚಿಸಲು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ್ ಖಂಡ್ರೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚವ್ಹಾಣ್ ಅವರಿಗೆ ಪತ್ರ ಬರೆದಿರುವ ಈಶ್ವರ ಖಂಡ್ರೆ, ರಾಜ್ಯದಲ್ಲಿ ಉಂಟಾಗಿರುವ ಮಳೆಯ ಕೊರತೆಯನ್ನು ಅಂಕಿ-ಅಂಶಗಳ ಸಹಿತ ವಿವರಿಸಿ, ಜನ ಗುಳೆ ಹೋಗದಂತೆ ತಪ್ಪಿಸಲು ಭೂ ರಹಿತ ಕೂಲಿ ಕಾರ್ಮಿಕರಿಗೆ, ದುರ್ಬಲರಿಗೆ, ಗ್ರಾಮೀಣ ಬಡಜನರಿಗೆ ಹೆಚ್ಚಿನ ಉದ್ಯೋಗ ನೀಡುವ ಅಗತ್ಯವನ್ನು ಪ್ರತಿಪಾದಿಸಿದ್ದಾರೆ.
ರಾಜ್ಯದಲ್ಲಿ ಈ ವರ್ಷ ತೀವ್ರ ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆಗಳು ಬಾಧಿತವಾಗಿದ್ದು, ಸ್ಥಳೀಯ ಬಡ ಹಾಗೂ ಅಕುಶಲ ಕಾರ್ಮಿಕರಿಗೆ ಉದ್ಯೋಗ ದೊರಕದಂತಾಗಿ ನಗರಗಳಿಗೆ ಗುಳೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಈ ನಿಟ್ಟಿನಲ್ಲಿ ವಿಬಿ ಜಿ ರಾಮ್ ಜಿ ಅಡಿಯಲ್ಲಿ ಉದ್ಯೋಗ ಕಲ್ಪಿಸಿ ಗುಳೆ ಹೋಗುವುದನ್ನು ತಡೆಯಲಾಗುತ್ತಿದೆ ಎಂದೂ ತಿಳಿಸಿದ್ದಾರೆ.
ಬರದ ಹಿನ್ನೆಲೆಯಲ್ಲಿ ರಾಜ್ಯದ ಹಲವು ಗ್ರಾಮೀಣ ಜನರು ವಿಬಿ ಜಿ ರಾಮ್ ಜಿ ಉದ್ಯೋಗಕ್ಕೆ ಬೇಡಿಕೆಯಿದ್ದು, ಕಳೆದ ವರ್ಷಕ್ಕಿಂತ ಈ ಸಾಲಿನಲ್ಲಿ ಶೇ.30.33ರಷ್ಟು ಹೆಚ್ಚುವರಿ ಮಾನವ ದಿನ ಸೃಜಿಸಲಾಗಿದೆ. ಹೀಗಾಗಿ ಹಾಲಿ ಇರುವ 125 ದಿನಗಳ ಕೆಲಸದ ಮಿತಿಗೆ 50 ಹೆಚ್ಚುವರಿ ದಿನ ಸೇರಿಸಿ 175 ದಿನ ಉದ್ಯೋಗ ನೀಡಲು ಅವಕಾಶ ನೀಡುವಂತೆ ಕೇಂದ್ರ ಸಚಿವರಿಗೆ ಬರೆದಿರುವ ಪತ್ರದಲ್ಲಿ ಈಶ್ವರ್ ಖಂಡ್ರೆ ಆಗ್ರಹಿಸಿದ್ದಾರೆ.
ರಾಜ್ಯ ಸರ್ಕಾರ ಈಗಾಗಲೇ 60:40ರ ಅನುಪಾತದಲ್ಲಿ ವಿಬಿ ಜಿ ರಾಮ್ ಜಿಯನ್ನು ರಾಜ್ಯಾದ್ಯಂತ ಅನುಷ್ಠಾನ ಮಾಡಿದೆ ಎಂದು ತಿಳಿಸಿರುವ ಸಚಿವರು, ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಗ್ರಾಮೀಣ ಬಡಜನರಿಗೆ, ಭೂ ರಹಿತ ಕೂಲಿ ಕಾರ್ಮಿಕರ ಸುಗಮ ಜೀವನೋಪಾಯಕ್ಕಾಗಿ 50 ದಿನ ಹೆಚ್ಚುವರಿ ಉದ್ಯೋಗವನ್ನು ನೀಡಲು ಅನುಮತಿಸುವಂತೆ ಕೋರಿದ್ದಾರೆ.
ಈ ವರ್ಷದ ಜುಲೈನಿಂದ ಮಾರ್ಚ್ 2027 ರವರೆಗಿನ ಒಂಬತ್ತು ತಿಂಗಳ ಅವಧಿಯಲ್ಲಿ, 'ವಿಬಿ-ಜಿ ರಾಮ್ ಜಿ' ಯೋಜನೆಯ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರವು 5,657 ಕೋಟಿ ರೂಪಾಯಿಗಳನ್ನು ಭರಿಸುತ್ತಿದ್ದರೆ, ರಾಜ್ಯ ಸರ್ಕಾರವು 3,771 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡುತ್ತಿದೆ ಎಂದು ಅವರು ತಿಳಿಸಿದರು.
ಇಲ್ಲಿಯವರೆಗೆ ರಾಜ್ಯ ಸರ್ಕಾರವು 1,167 ಕೋಟಿ ರೂಪಾಯಿಗಳನ್ನು ಮತ್ತು ಕೇಂದ್ರ ಸರ್ಕಾರವು 1,751 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದು, ಒಟ್ಟು ಬಿಡುಗಡೆಯಾದ ಮೊತ್ತ 2,918 ಕೋಟಿ ರೂಪಾಯಿಗಳಾಗಿದೆ. ಇದರಲ್ಲಿ 803 ಕೋಟಿ ರೂಪಾಯಿಗಳನ್ನು ಕೌಶಲ್ಯರಹಿತ ಕಾರ್ಮಿಕರಿಗೆ ವೇತನವಾಗಿ ಪಾವತಿಸಲಾಗಿದೆ ಎಂದು ಅವರು ಹೇಳಿದರು.
ರಾಜ್ಯಾದ್ಯಂತ ಇರುವ 5,927 ಗ್ರಾಮ ಪಂಚಾಯಿತಿಗಳಿಗೆ ಈಗಾಗಲೇ 2,053 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ ಮತ್ತು ಯೋಜನೆ ಅನುಷ್ಠಾನಗೊಳಿಸುವ ಇಲಾಖೆಗಳಿಗೆ 86 ಕೋಟಿ ರೂಪಾಯಿಗಳನ್ನು ನೀಡಲಾಗಿದೆ ಎಂದು ಖಂಡ್ರೆ ತಿಳಿಸಿರುವುದಾಗಿ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



