ರಾಜ್ಯ

5 ಮೆಟ್ರೋ ಸ್ಟೇಷನ್ ಗಳಿಂದ ಬಾಡಿಗೆಗೆ ಸ್ಕೂಟರ್, ಸೈಕಲ್ ಸೇವೆ

Sumana Upadhyaya

ಬೆಂಗಳೂರು: ಮೆಟ್ರೋ ನಿಲ್ದಾಣದಿಂದ ಇಳಿದು ನಿಮಗೆ ಎಲ್ಲಾದರೂ ಹೋಗಬೇಕೆಂದರೆ ನಿಮಗೆ ಬಾಡಿಗೆಗೆ ಸ್ಕೂಟರ್, ಸೈಕಲ್ ಸಿಗುತ್ತದೆ. ಅದು ಕೂಡ ಗಂಟೆಗೆ 20 ರೂಪಾಯಿಗೆ. ಈ ಸೇವೆ ಇನ್ನು ಮೂರು ವಾರಗಳಲ್ಲಿ ಆರಂಭವಾಗಲಿದ್ದು, ಮೆಟ್ರೋದ ಪೂರ್ವ-ಪಶ್ಚಿಮ ಕಾರಿಡಾರ್ ನಲ್ಲಿ ಕಾರ್ಯಚಾಲನೆಗೊಳ್ಳುವ ಸಾಧ್ಯತೆಯಿದೆ.

ಬೆಂಗಳೂರಿನ ವಿಕೆಡ್ರೈವ್ ಅಡ್ವೆಂಚರ್ ಸರ್ವಿಸಸ್ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಶನ್ (ಬಿಎಂಆರ್ ಸಿಎಲ್) ಜೊತೆ ಒಪ್ಪಂದಕ್ಕೆ ಸಹಿ ಹಾಕಿದ್ದು ಅಪ್ನಾ ರೈಡ್ ಎಂಬ ಹೆಸರಿನಿಂದ ಸೇವೆಯನ್ನು ಜನತೆಗೆ ಒದಗಿಸಲಿದೆ. ಇಂದಿರಾ ನಗರ, ಟ್ರಿನಿಟಿ ಸರ್ಕಲ್, ಬೈಯಪ್ಪನಹಳ್ಳಿ, ಸಂಪಿಗೆ ರಸ್ತೆ ಮತ್ತು ಪೀಣ್ಯ ಸ್ಟೇಷನ್ ಗಳಲ್ಲಿ ಸೇವೆ ಲಭ್ಯವಿರುತ್ತದೆ. ಹೋಂಡಾ ಆಕ್ಟಿವಾ ಮತ್ತು ಹೋಂಡಾ ನವಿ ಸ್ಕೂಟರ್ ಜನರ ಸೇವೆಗೆ ಲಭ್ಯವಿರುತ್ತದೆ.

ವಿಕೆಡ್ರೈವ್ ನ ಸಹ ಸ್ಛಾಪಕ ಜಿ-ಅನಿಲ್ ಈ ಬಗ್ಗೆ ಮಾಹಿತಿ ನೀಡಿ, ಬೆಳಗ್ಗೆ 5 ಗಂಟೆಯಿಂದ ರಾತ್ರಿ 11ರವರೆಗೆ ಈ ಮೆಟ್ರೋ ಸ್ಟೇಷನ್ ಗಳಿಂದ ಜನರ ಸೇವೆಗಾಗಿ 30 ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅಥವಾ ಬೈಕ್ ಗಳನ್ನು ತರಲು ಯೋಜನೆ ಮಾಡಿದ್ದೇವೆ. ವಾರಾಂತ್ಯಗಳಲ್ಲಿ ರಾಯಲ್ ಎನ್ ಫೀಲ್ಡ್, ಹರ್ಲೆ ಡೇವಿಡ್ಸನ್ ಮತ್ತು ಟ್ರಯಂಪ್ ಬೈಕ್ ಗಳನ್ನು ಜನರ ಸೇವೆಗೆ ಒದಗಿಸಲಾಗುವುದು.

ಬಾಡಿಗೆಗೆ ಪಡೆಯುತ್ತಿರುವವರಿಗೆ ಮ್ಯಾನಿಂಗ್ ಸಿಬ್ಬಂದಿ ಕೀ ನೀಡುತ್ತಾರೆ. ಯಾವ ಸ್ಟೇಷನ್ ನಿಂದ ಸ್ಕೂಟರ್ ತೆಗೆದುಕೊಂಡು ಹೋಗಿರುತ್ತೀರೋ ಅಲ್ಲಿಗೇ ವಾಪಸು ತಂದುಬಿಡಬಹುದು. ಅಥವಾ ಮೆಟ್ರೋ ಸೂಚಿಸಿದ ಜಾಗದಲ್ಲಿಯೂ ಬಿಡಬಹುದು. ಗಾಡಿಗೆ ಜಿಪಿಎಸ್ ಅಳವಡಿಸಲಾಗುತ್ತಿದ್ದು, ಎಲ್ಲಾ ಸಮಯಗಳಲ್ಲೂ ಪತ್ತೆಹಚ್ಚಬಹುದು. ಹೆಲ್ಮೆಟ್ ನ್ನು ನೀಡಲಾಗುತ್ತದೆ.

ಮಾಸಿಕ ಯೋಜನೆಗಳು: ದಿನನಿತ್ಯ ಬಳಸುವವರಿಗೆ ವಾರದ, ತಿಂಗಳಿಗೆ ಮತ್ತು ವರ್ಷದ ಯೋಜನೆಯೆಂಬುದಿರುತ್ತದೆ. ಹಿಂಬದಿ ಸವಾರರಿಗೆ ಪ್ರತ್ಯೇಕ ದರವಿರುವುದಿಲ್ಲ. ಇನ್ನು ಮೂರು ವಾರಗಳಲ್ಲಿ ಈ ಯೋಜನೆ ಆರಂಭವಾಗಲಿದೆ. ಎನ್ನುತ್ತಾರೆ ಅನಿಲ್.

SCROLL FOR NEXT