ಬೆ೦ಗಳೂರು: ಬೆಂಗಳೂರಿನ ಹೊರವಲಯದ ಕೆಆರ್ ಪುರಂ ಸಮೀಪ ಭಾನುವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸಾಫ್ಟ್ ವೇರ್ ಉದ್ಯೋಗಿ ಮೃತಪಟ್ಟಿದ್ದಾನೆ.
ಬೆಂಗಳೂರಿನ ಕೆ.ಆರ್.ಪುರ ಸಮೀಪದ ಹೊರವರ್ತುಲ ರಸ್ತೆಯಲ್ಲಿ ಭಾನುವಾರ ಬೆಳಗಿನ ಜಾವ ಈ ಭೀಕರ ಅಪಘಾತ ಸಂಭವಿಸಿದ್ದು, ಅತಿ ವೇಗದಿಂದ ನಿಯಂತ್ರಣ ತಪ್ಪಿದ ಬೈಕ್ ಅಡ್ಡಾದಿಡ್ಡಿ ಚಲಿಸಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಬೈಕ್ ಡಿಕ್ಕಿ ಹೊಡೆಯುತ್ತಿದ್ದಂತೆಯೇ ಬೈಕ್ ಸವಾರ ಕೆಳಗೆ ಬಿದ್ದಿದ್ದು, ಕೂಡಲೇ ಹಿಂದಿನಿಂದ ಬಂದ ಲಾರಿ ಆತನ ಮೇಲೆ ಹರಿದಿದೆ. ತೀವ್ರ ರಕ್ತಸ್ರಾವದಿಂದ ಟೆಕ್ಕಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
ಮೃತ ಟೆಕ್ಕಿಯನ್ನು ಅಸ್ಸಾ೦ ಮೂಲದ ಅಮಿತ್‍ಕುಮಾರ್ ಚೇಟ್ರಿ (26) ಎಂದು ಗುರುತಿಸಲಾಗಿದ್ದು, ಈತ ಎಲೆಕ್ಟ್ರಾನಿಕ್ಸ್ ಸಿಟಿ ಹತ್ತಿರದ ಇನ್ಫೋಸಿಸ್‍ನಲ್ಲಿ ಉದ್ಯೋಗಿ ಎಂದು ತಿಳಿದುಬಂದಿದೆ. ಅಲ್ಲದೆ ಅಮಿತ್ ಸಿಲ್ಕ್ ಬೋಡ್‍೯ ಪ್ರದೇಶದಲ್ಲಿ ವಾಸವಿದ್ದು, ಭಾನುವಾರ ಬೆಳಗಿನ ಜಾವ ಸುಮಾರು 3.45ರಲ್ಲಿ ಹೆಬ್ಬಾಳದಲ್ಲಿರುವ ತನ್ನ ಸ೦ಬ೦ಧಿಕರ ಮನೆಗೆ ಹೋಗುತ್ತಿದ್ದಾಗ ಈ ದುಘ೯ಟನೆ ಸ೦ಭವಿಸಿದೆ.
ಅತಿವೇಗವಾಗಿ ಬೈಕ್ ಚಲಾಯಿಸಿಕೊ೦ಡು ಬ೦ದ ಅಮಿತ್, ಎಎಸ್‍ಆರ್ ಕನ್ವೆನ್ಷನ್ ಹಾಲ್ ಸಮೀಪ ತಿರುವಿನಲ್ಲಿ ನಿಯ೦ತ್ರಣ ಕಳೆದುಕೊ೦ಡು ಬೈಕ್ ಅಡ್ಡಾದಿಡ್ಡಿ ಚಲಿಸಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಗುದ್ದಿದ ರಭಸಕ್ಕೆ ಅಮಿತ್ ಪಕ್ಕದ ರಸ್ತೆಗೆ ಬಿದ್ದಿದ್ದಾನೆ. ಇದೇ ವೇಳೆಗೆ ಹೆಬ್ಬಾಳದಿ೦ದ ಹಳೇ ಮದ್ರಾಸ್ ರಸ್ತೆ ಕಡೆ ಬರುತ್ತಿದ್ದ ಲಾರಿ ಅಮಿತ್ ಮೇಲೆ ಹರಿದಿದೆ ಎ೦ದು ಪೊಲೀಸರು ತಿಳಿಸಿದ್ದಾರೆ.
ಅಪಘಾತದ ಬಳಿಕ ಲಾರಿ ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗಿದ್ದು, ಸ್ಥಳೀಯರು ವಾಹನದ ನೋ೦ದಣಿ ಸ೦ಖ್ಯೆಯನ್ನು ಬರೆದುಕೊಂಡು ಪೊಲೀಸರಿಗೆ ನೀಡಿದ್ದಾರೆ. ಪ್ರಸ್ತುತ ಲಾರಿ ಚಾಲಕನ ಕುರಿತು ಮತ್ತು ಲಾರಿ ಕುರಿತು ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಇಲ್ಲದೆ ಅಪಘಾತ ಪ್ರದೇಶದ ಸಮೀಪದ ಕಟ್ಟಡದಲ್ಲಿ ಸಿಸಿ ಕ್ಯಾಮರಾ ಅಳವಡಿಸಿದ್ದು, ಆ ದೃಶ್ಯಾವಳಿ ವಶಕ್ಕೆ ಪಡೆದು ಪರಿಶೀಲಿಸಲಾಗುತ್ತಿದೆ. ಘಟನೆ ನಡೆದಾಗ ಅಮಿತ್ ಹೆಲ್ಮೆಟ್ ಧರಿಸಿರಲಿಲ್ಲ ಎ೦ದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೆ.ಆರ್.ಪುರ ಸ೦ಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.