ರಾಜ್ಯ

ಲೋಕಾಯುಕ್ತ ನಂತರ ಈಗ ಸಿಐಡಿಯಲ್ಲೂ ಭ್ರಷ್ಟಾಚಾರ: ಎಸ್‌ಪಿ ಮಧುರ ವೀಣಾ ವಿರುದ್ಧ ವರದಿ

Lingaraj Badiger
ಬೆಂಗಳೂರು: ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರ ಪ್ರಕರಣದ ನಂತರ ಈಗ ಉನ್ನತ ಮಟ್ಟದ ತನಿಖೆಗೆ ಮೀಸಲಾಗಿರುವ ಸಿಐಡಿ ಸಂಸ್ಥೆಯಲ್ಲೂ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದ್ದು,  ಲಂಚ ಪಡೆದ ಆರೋಪ ಎದುರಿಸುತ್ತಿರುವ ಸಿಐಡಿ ಎಸ್‌ಪಿ ಮಧುರವೀಣಾ ಅವರ ವಿರುದ್ದ ಸಿಐಡಿ ಡಿಐಜಿ ಸೋನಿಯಾ ನಾರಂಗ್‌ ಅವರು ವರದಿ ಸಲ್ಲಿಸಿದ್ದಾರೆ.
ಮಧುರವೀಣಾ ಅವರು ವೇಶ್ಯಾವಾಟಿಕೆ ದಂಧೆಯ ನೆಪ ಮಾಡಿ ಖಾಸಗಿ ಹೊಟೇಲ್ ಮೇಲೆ ನಕಲಿ ದಾಳಿ ನಡೆಸಿ ಹಣ ವಸೂಲಿ ಮಾಡಿರುವ ಆರೋಪ ಎದುರಿಸುತ್ತಿದ್ದು, ಈ ಸಂಬಂಧ ಸೋನಿಯಾ ನಾರಂಗ ಅವರು ಸಿಐಡಿ ಡಿಜಿಪಿ ಕಿಶೋರ್‌ ಚಂದ್ರ ಅವರಿಗೆ ವರದಿ ಸಲ್ಲಿಸಿದ್ದಾರೆ. 
ಮಧುರವೀಣಾ ಅವರು ಶಿವಾಜಿ ನಗರದ ಹೊಟೇಲ್‌ ಒಂದರ ಮೇಲೆ ದಾಳಿ ನಡೆಸಿ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂದು ಸುಳ್ಳು ದೂರು ದಾಖಲಿಸಕೊಳ್ಳುವ ಬೆದರಿಕೆ ಒಡ್ಡಿ 2 ಲಕ್ಷ ರುಪಾಯಿ ಲಂಚ ಪಡೆದಿದ್ದಾರೆಎಂದು ಹೊಟೇಲ್‌ ಸಿಬಂಧಿ ಸಿಐಡಿಗೆ ದೂರು ಸಲ್ಲಿಸಿದ್ದರಲ್ಲದೆ ಲಂಚ ಪಡೆದುದಕ್ಕೆ ಸಾಕ್ಷಿಯಾಗಿ ಸಿಸಿಟಿವಿ ದೃಶ್ಯಾವಳಿಗಳನ್ನೂ ಒದಗಿಸಿದ್ದರು.
ಈ ದೃಶ್ಯಾವಳಿಗಳ ಆಧಾರದ ಮೇಲೆ ಸೋನಿಯಾ ನಾರಂಗ್‌ ಅವರು ಮಧುರವೀಣಾ ಅವರ ವಿರುದ್ಧ ವರದಿ ತಯಾರಿಸಿ ಕಿಶೋರ್‌ ಚಂದ್ರ ಅವರಿಗೆ ಸಲ್ಲಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರೆದಿದೆ.
ಮಾರ್ಚ್ 3 ರಂದು ಮಧ್ಯಾಹ್ನ ಮಧುರ ವೀಣಾ ನೇತೃತ್ವದಲ್ಲಿ 11 ಮಂದಿ ಪೊಲೀಸರ ತಂಡ ರಾಮಡಾ ಹೋಟೆಲ್ ಮೇಲೆ ದಾಳಿ ನಡೆಸಿದ್ದರು. ಆ ವೇಳೆ ಆನ್‌ ಲೈನ್‌ ನಲ್ಲಿ ರೂಮ್‌ ಬುಕ್‌ ಮಾಡಿಕೊಂಡಿದ್ದ ಇಬ್ಬರು ಯುವತಿಯರಿದ್ದರು. ಇಬ್ಬರು ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂದು ಪೊಲೀಸರು ಆರೋಪಿಸಿ ಲಂಚ ಕೇಳಿದ್ದರು ಎಂದು ಹೇಳಲಾಗಿದೆ.
SCROLL FOR NEXT