ಬೆಂಗಳೂರು: ನಮ್ಮ ಮೆಟ್ರೋ ಎಂದರೆ ಕೇವಲ ಬೆಂಗಳೂರು ನಗರದ ಪೂರ್ವದಿಂದ ಪಶ್ಚಿಮಕ್ಕೆ 18.1 ಕಿಲೋ ಮೀಟರ್ ಉದ್ದದ ದೀರ್ಘಾವಧಿಯ ಪ್ರಯಾಣ ಮಾತ್ರವಲ್ಲ; ಪ್ರಯಾಣಿಕರ ಅವಶ್ಯಕತೆಗಳಿಗನುಗುಣವಾಗಿ ನಿಗದಿತ ನಿಲ್ದಾಣಗಳಲ್ಲಿ ಅಲ್ಪಾವಧಿಯ ಪ್ರಯಾಣ ಮಾಡುವುದು ಕೂಡ ಆಗಿದೆ. ಎಂ.ಜಿ ರಸ್ತೆ, ಇಂದಿರಾನಗರ, ಮಾಗಡಿ ರಸ್ತೆ ಮತ್ತು ವಿಜಯನಗರ ಮೆಟ್ರೋ ನಿಲ್ದಾಣಗಳಿಂದ ತ್ವರಿತ ಪ್ರಯಾಣದ ಅನುಕೂಲ ಕೂಡ ಇದೆ.
ನಗರದ ಎಲ್ಲಾ ಮೆಟ್ರೋ ನಿಲ್ದಾಣಗಳ ಕಾರ್ಯನಿರ್ವಹಣೆ ನಿಯಂತ್ರಣ ಕೇಂದ್ರವಾಗಿರುವ ಬೈಯಪ್ಪನಹಳ್ಳಿ ನಿಲ್ದಾಣದ ಸಹಾಯಕ ವ್ಯವಸ್ಥಾಪಕ ಟಿ.ಮಾಧವರಾಜ್ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯೊಂದಿಗೆ ಮಾತನಾಡಿ, ಈ ಮೇಲಿನ ನಾಲ್ಕು ನಿಲ್ದಾಣಗಳಲ್ಲಿ ಹಿಂದೆ ತಿರುವು ಅಥವಾ ಲೈನ್ ಬದಲಾಯಿಸುವ ಸೌಲಭ್ಯವಿದೆ ಎಂದರು.
ಈ ನಿಲ್ದಾಣಗಳಲ್ಲಿ ಲೂಪ್ ವ್ಯವಸ್ಥೆಯಿರುವುದರಿಂದ ಒಮ್ಮೆ ಹೊರಟ ರೈಲು ನಿಗದಿತ ನಿಲ್ದಾಣದಿಂದ ಅಗತ್ಯವಿರದಿದ್ದರೆ ಮುಂದೆ ಹೋಗುವ ಬದಲು ವಾಪಸ್ಸು ಆರಂಭಿಕ ನಿಲ್ದಾಣಕ್ಕೆ ಬರಬಹುದು. ಆರಂಭದ ನಿಲ್ದಾಣದಿಂದ ಇತರ ಮೂರು ನಿಲ್ದಾಣಗಳಿಗೆ ಬೇಡಿಕೆಯನ್ನು ಆಧರಿಸಿ ರೈಲುಗಳನ್ನು ಬಿಡಲಾಗುವುದು. ಈ ಸೌಲಭ್ಯದಿಂದ ಪ್ರಯಾಣಿಕರು ಸಿಗದಿದ್ದರೂ ಕೂಡ ರೈಲನ್ನು ಸುಮ್ಮನೆ ಓಡಿಸುವ ಬದಲು ಹಿಂತಿರುಗಿ ಬರಬಹುದು.
24/7 ಮೆಟ್ರೋ ನರ್ವ್ ಕೇಂದ್ರ: ಮೆಟ್ರೋ ರೈಲುಗಳ ಸುಗಮ ಸಂಚಾರಕ್ಕೆ 17 ಮಂದಿ ಮಹಿಳೆಯರು ಸೇರಿದಂತೆ 40 ಮಂದಿ ನೌಕರರು ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಬೈಯಪ್ಪನಹಳ್ಳಿಯಲ್ಲಿರುವ ಕೇಂದ್ರ ನಿಯಂತ್ರಣ ಘಟಕದಲ್ಲಿ ಮೂರು ಬೃಹತ್ತಾದ ವಿಡಿಯೋ ಸ್ರ್ಕೀನ್ ಗಳಿದ್ದು ಸುಮಾರು 100 ಕಂಪ್ಯೂಟರ್ ಗಳು ಕಾರ್ಯನಿರ್ವಹಿಸುತ್ತಿವೆ.
ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಿಂದ 500 ಮೀಟರ್ ದೂರದಲ್ಲಿ ಈ ಕೇಂದ್ರವಿದೆ.
ಪ್ರತಿ 3 ನಿಮಿಷಗಳಿಗೊಂದು ರೈಲು: ಬೆಂಗಳೂರು ಮೆಟ್ರೋ ರೈಲು ನಿಗಮ ಪ್ರಸ್ತುತ 50 ರೈಲುಗಳನ್ನು ಹೊಂದಿದೆ. ಅವುಗಳಲ್ಲಿ ಐದು ರೈಲುಗಳನ್ನು ಕೊರಿಯಾದಿಂದ ತರಿಸಲಾಗಿದೆ. ಇನ್ನುಳಿದ 45 ರೈಲುಗಳನ್ನು ಪ್ರಪಂಚದ ವಿವಿಧ ಕಡೆಗಳಿಂದ ಭಾಗಗಳನ್ನು ತರಿಸಿ ಇಲ್ಲಿ ಜೋಡಿಸಲಾಗಿದೆ. ಇವುಗಳಲ್ಲಿ 21 ರೈಲುಗಳು ಪೂರ್ವ-ಪಶ್ಚಿಮ ಕಾರಿಡಾರಿನಲ್ಲಿ ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆಯಲ್ಲಿ ಸಂಚರಿಸಲಿದ್ದು ಇವುಗಳ ಉದ್ಘಾಟನೆ ನಾಳೆ ನೆರವೇರಲಿದೆ.
ಪ್ರಸ್ತುತ ಮೆಟ್ರೋ ರೈಲಿನ ರೀಚ್ -1 ಮತ್ತು ರೀಚ್ -2ನಲ್ಲಿ 18ರಿಂದ 20 ಸಾವಿರ ಪ್ರಯಾಣಿಕರು ಸಂಚರಿಸುತ್ತಿದ್ದು, ಪ್ರತಿದಿನ 89 ಟ್ರಿಪ್ ಸಂಚರಿಸುತ್ತದೆ. ಮುಂದಿನ ದಿನಗಳಲ್ಲಿ ಬೇಡಿಕೆ ಹೆಚ್ಚಾದರೆ ಪ್ರತಿ ಮೂರು ನಿಮಿಷಗಳಿಗೊಂದು ರೈಲನ್ನು ಬಿಡುವ ಹಾಗೂ ದಿನಕ್ಕೆ ಸುಮಾರು 15 ಲಕ್ಷ ಪ್ರಯಾಣಿಕರಿಗೆ ಸೇವೆ ಒದಗಿಸುವ ಸಾಮರ್ಥ್ಯ ನಮ್ಮಲ್ಲಿದೆ ಎನ್ನುತ್ತಾರೆ ಮಾಧವರಾಜ್.
ಸದ್ಯ, ಮೆಟ್ರೋದ ಪ್ರತಿ ರೈಲಿನಲ್ಲಿ 3 ಕೋಚ್ ಗಳಿದ್ದು ಸಾವಿರ ಪ್ರಯಾಣಿಕರನ್ನು ಪ್ರತಿ ಟ್ರಿಪ್ ನಲ್ಲಿ ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ. ಭವಿಷ್ಯದಲ್ಲಿ ಮತ್ತೆ ಮೂರು ಕೋಚ್ ಗಳನ್ನು ಸೇರಿಸುವ ಸಾಧ್ಯತೆಯಿದೆ. ಇನ್ನಷ್ಟು ಪ್ರಯಾಣಿಕರ ಪ್ರಯಾಣಕ್ಕೆ ಅನುಕೂಲವಾಗುತ್ತದೆ ಎಂದರು.
ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲಾ, ಪ್ರತಿ 10 ನಿಮಿಷಗಳಿಗೊಂದು ರೈಲು ಸಂಚರಿಸುವಂತೆ ಮಾಡುವುದು ನಮ್ಮ ಪ್ರಾರಂಭಿಕ ಯೋಜನೆ. ಅದಕ್ಕೆ ಜನರ ಪ್ರತಿಕ್ರಿಯೆ ಹೇಗಿದೆ ಎಂದು ನೋಡುತ್ತೇವೆ. ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೆ ಅದನ್ನು ಆರು ನಿಮಿಷಗಳಿಗೆ ಇಳಿಸುತ್ತೇವೆ ಎಂದರು.