ಬೆಂಗಳೂರು: ಬಾಕಿ ಉಳಿದಿರುವ 747 ಪ್ರಕರಣಗಳ ತನಿಖೆಯನ್ನು ಮುಂದುವರೆಸಿ ಎಂದು ಲೋಕಾಯುಕ್ತ ಪೊಲೀಸರಿಗೆ ಹೈಕೋರ್ಟ್ ಸೂಚನೆ ನೀಡಿದೆ.
ನ್ಯಾಯಮೂರ್ತಿ ಎ ಎನ್ ವೇಣುಗೋಪಾಲಗೌಡ ಅವರಿದ್ದ ಏಕಸದಸ್ಯ ಪೀಠವು, ಲೋಕಾಯುಕ್ತ ಮನಸ್ಸು ಮಾಡಿದರೆ, ಲಕ್ಷಗಟ್ಟಲೇ ಪ್ರಕರಣಗಳನ್ನು ದಾಖಲಿಸಬಹುದು. ಆದರೆ, ಸಾವಿರದ ಸಂಖ್ಯೆಯಲ್ಲಿ ಮಾತ್ರ ಪ್ರಕರಣಗಳು ದಾಖಲಾಗಿವೆ. ಅಷ್ಟೇ ಅಲ್ಲದೇ, ಪೊಲೀಸರು ತಮ್ಮ ತನಿಖೆಯನ್ನು ಮುಂದುವರೆಸದೇ, ಸುಮ್ಮನೇ ಕುಳಿತಿರುವುದು ಸರಿಯಲ್ಲ ಎಂದು ಹೇಳಿದೆ.
ಈ ವೇಳೆ ಲೋಕಾಯುಕ್ತ ಪರ ವಕೀಲ ವೆಂಕಟೇಶ ಪಿ ದಳವಾಯಿ ಅವರು, ಲೋಕಾಯುಕ್ತದಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ಅಂಕಿ ಅಶಗಳನ್ನು ನ್ಯಾಯಪೀಠಕ್ಕೆ ಒದಗಿಸಿದರು.
ಒಂದು ವರ್ಷದಷ್ಟು ಹಳೆಯ ಪ್ರಕರಣಗಳನ್ನು ಇದೇ 2016ರ ಜೂನ್ ಒಳಗಾಗಿ ವಿಲೇವಾರಿ ಮಾಡುವಂತೆ ಆದೇಶಿಸಿದ ನ್ಯಾಯಾಲಯ, ಮುಂದಿನ ವಿಚಾರಣೆಯನ್ನು ಆಗಸ್ಟ್ ಮೊದಲ ವಾರಕ್ಕೆ ಮುಂದೂಡಿದೆ.