ಉರುಳಾದ ಗಾಳಿಪಟದ ದಾರ: ಹೈವೋಲ್ಟೇಜ್ ತಂತಿಗೆ ಸಿಲುಕಿ 3 ದಿನ ನರಳಿದ ಕಪ್ಪು ಗಿಡುಗ; ವಿದ್ಯುತ್ ಪೂರೈಕೆ ಸ್ಥಗಿತಗೊಳಿಸದೆಯೇ ಪಕ್ಷಿಯ ರಕ್ಷಣೆ; KPTCL ಮಾನವೀಯತೆಗೆ ಭಾರಿ ಮೆಚ್ಚುಗೆ..!

ಬೆಂಗಳೂರು: ಗಾಳಿಪಟ ಹಾರಿಸಲು ಬಳಸಿದ ದಾರವೊಂದು ಮೂಕ ಪಕ್ಷಿಯ ಪಾಲಿಗೆ ಉರುಳಾಗಿ ಪರಿಣಮಿಸಿದೆ. ಹೈವೋಲ್ಟೇಜ್ ವಿದ್ಯುತ್ ತಂತಿಯಲ್ಲಿ ಸಿಲುಕಿಕೊಂಡು ಸತತ ಮೂರು ದಿನಗಳ ಕಾಲ ಬದುಕಿಗಾಗಿ ಹೋರಾಡುತ್ತಿದ್ದ ಕಪ್ಪು ಗಿಡುಗನನ್ನು ಕೆಪಿಟಿಸಿಎಲ್ ಸಿಬ್ಬಂದಿ ಸಾಹಸಿಕ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.
ವಿಶೇಷವೆಂದರೆ, ಬರೋಬ್ಬರಿ 400 ಕೆವಿ ವಿದ್ಯುತ್ ಪ್ರವಹಿಸುತ್ತಿದ್ದ ತಂತಿಯಲ್ಲಿ 90 ಅಡಿ ಎತ್ತರದಲ್ಲಿ ಸಿಲುಕಿದ್ದ ಪಕ್ಷಿಯನ್ನು ರಕ್ಷಿಸುವಾಗಲೂ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಿಲ್ಲ. ಬನ್ನೇರುಘಟ್ಟದ ಬಳಿ ನಡೆದ ಈ ಅಪರೂಪದ ಕಾರ್ಯಾಚರಣೆಗೆ ಕೆಪಿಟಿಸಿಎಲ್ ತಂಡದ ತಾಂತ್ರಿಕ ಪರಿಣತಿ ಹಾಗೂ ಮಾನವೀಯ ಕಾಳಜಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಕಳೆದ ನವೆಂಬರ್ 23 ರಂದು ಗಾಳಿಪಟದ ದಾರಕ್ಕೆ ಸಿಲುಕಿಕೊಂಡಿದ್ದ ಈ ಕಪ್ಪು ಗಿಡುಗವು ಬನ್ನೇರುಘಟ್ಟ ಸಮೀಪದ ಹೈ-ಟೆನ್ಷನ್ ವಿದ್ಯುತ್ ತಂತಿಯಲ್ಲಿ ನೇತಾಡುತ್ತಿತ್ತು. ತಂತಿಯಲ್ಲಿ ನರಳಾಡುತ್ತಿದ್ದ ಪಕ್ಷಿಯ ವಿಡಿಯೋ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿತ್ತು.
ಇದನ್ನು ನೋಡಿ ಸಾರ್ವಜನಿಕರೇನಾದರೂ ರಕ್ಷಣೆಗೆ ಮುಂದಾದರೆ ಭಾರಿ ವಿದ್ಯುತ್ ಆಘಾತಕ್ಕೆ ತುತ್ತಾಗಿ ಪ್ರಾಣಾಪಾಯ ಸಂಭವಿಸಬಹುದು ಎಂಬ ಆತಂಕ ವನ್ಯಜೀವಿ ರಕ್ಷಕರಲ್ಲಿ ಮೂಡಿತ್ತು.
ಈ 400 ಕೆವಿ ವಿದ್ಯುತ್ ಮಾರ್ಗವು ಬೆಂಗಳೂರಿನ ಸುಮಾರು 10 ಪ್ರಮುಖ ಪ್ರದೇಶಗಳಿಗೆ ವಿದ್ಯುತ್ ಪೂರೈಸುವ ಕಾರಣ, ಹಗಲು ಹೊತ್ತಿನಲ್ಲಿ ವಿದ್ಯುತ್ ಸ್ಥಗಿತಗೊಳಿಸಿ ಕಾರ್ಯಾಚರಣೆ ನಡೆಸುವುದು ಸವಾಲಾಗಿತ್ತು. ಹೀಗಾಗಿ ವಿದ್ಯುತ್ ಪ್ರವಹಿಸುತ್ತಿರುವಾಗಲೇ (Live line) ಕಾರ್ಯಾಚರಣೆ ನಡೆಸಲು ಕೆಪಿಟಿಸಿಎಲ್ ನಿರ್ಧರಿಸಿತು. ಇದಕ್ಕಾಗಿ ಬ್ರೆಜಿಲ್‌ನಿಂದ ಆಮದು ಮಾಡಿಕೊಂಡಿದ್ದ ವಿಶೇಷ 'ಇನ್ಸುಲೇಟೆಡ್ ಏರಿಯಲ್ ವರ್ಕ್ ಪ್ಲಾಟ್‌ಫಾರ್ಮ್' ವಾಹನವನ್ನು ಬಳಸಲಾಯಿತು.
ನವೆಂಬರ್ 26 ರಂದು ಬೆಳಿಗ್ಗೆ 5:30 ಕ್ಕೆ ಆರಂಭವಾದ ಸುದೀರ್ಘ ಸಿದ್ಧತೆಗಳ ಬಳಿಕ, ಮಧ್ಯಾಹ್ನ 1:00 ಗಂಟೆಯ ವೇಳೆಗೆ ವಿದ್ಯುತ್ ಪೂರೈಕೆಗೆ ಯಾವುದೇ ಅಡ್ಡಿಯಾಗದಂತೆ ಗಿಡುಗವನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು.
ಪೀಣ್ಯದ ಕೆಪಿಟಿಸಿಎಲ್ ಹಾಟ್‌ಲೈನ್ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ನೂರ್ ಅಹ್ಮದ್ ಷರೀಫ್ ಹಾಗೂ ಮುಖ್ಯ ಎಂಜಿನಿಯರ್ ಕಾಂತಮಣಿ ಅವರ ಮಾರ್ಗದರ್ಶನದಲ್ಲಿ, ಏವಿಯನ್ ಅಂಡ್ ರೆಪ್ಟೈಲ್ ರಿಹ್ಯಾಬಿಲಿಟೇಶನ್ ಸೆಂಟರ್ (ARRC) ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಯ ಸಹಯೋಗದೊಂದಿಗೆ ಈ ಕಾರ್ಯಾಚರಣೆ ಯಶಸ್ವಿಯಾಯಿತು.
ವಿದ್ಯುತ್ ವ್ಯತ್ಯಯವಾಗದಂತೆ ತಾಂತ್ರಿಕ ಕೌಶಲ್ಯ ಮತ್ತು ಮಾನವೀಯತೆಯನ್ನು ಮೆರೆದು ಮೂಕ ಪ್ರಾಣಿಯ ಜೀವ ಉಳಿಸಿದ ಕೆಪಿಟಿಸಿಎಲ್ ತಂಡ ಹಾಗೂ ಇತರ ಸಂಸ್ಥೆಗಳ ಕಾರ್ಯವನ್ನು ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
400 ಕೆವಿ ವಿದ್ಯುತ್ ಪ್ರವಹಿಸುತ್ತಿರುವ ತಂತಿಯಿಂದ ಜೀವವೊಂದನ್ನು ರಕ್ಷಿಸುವುದರ ಜೊತೆಗೆ ವಿದ್ಯುತ್ ಪೂರೈಕೆಯಲ್ಲಿಯೂ ವ್ಯತ್ಯಯವಾಗದಂತೆ ನೋಡಿಕೊಂಡಿರುವುದು ತಾಂತ್ರಿಕ ಪರಿಣತಿ ಮತ್ತು ಮಾನವೀಯ ಕಾಳಜಿಯ ಅಪರೂಪದ ಉದಾಹರಣೆ. ಈ ಅದ್ಭುತ ಕಾರ್ಯಾಚರಣೆಯಲ್ಲಿ ಭಾಗಿಯಾದ ಕೆಪಿಟಿಸಿಎಲ್ ತಂಡ ಹಾಗೂ ಎಲ್ಲರನ್ನೂ ಅಭಿನಂದಿಸುತ್ತೇನೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.
ಇನ್ನು ರಕ್ಷಣೆಗೆ ಒಳಗಾದ ಪಕ್ಷಿಗೆ ಗಾಯಗಳಾಗಿದ್ದು, ಸದ್ಯ ಚಿಕಿತ್ಸೆ ಮತ್ತು ಪುನರ್ವಸತಿ ಕಲ್ಪಿಸಲಾಗುತ್ತಿದೆ ಎಂದು ಕೆಪಿಟಿಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


