ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ನಿವೃತ್ತ ಶಿಕ್ಷಕರ ಮತ್ತು ಮಾಜಿ ಸೇನಾಧಿಕಾರಿಗಳ ಸೇವೆಯನ್ನು ಪಡೆದುಕೊಳ್ಳಲು ಕೆಲವು ರಾಜ್ಯಗಳ ಶಿಕ್ಷಣ ಇಲಾಖೆಗಳು ನಿರ್ಧರಿಸಿವೆ.
ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಹೊರಡಿಸಿರುವ ಸುತ್ತೋಲೆಯಲ್ಲಿ, ಶಾಲೆಗಳಲ್ಲಿ ನಿವೃತ್ತರ ಸೇವೆಯನ್ನು ಸಹ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುವುದು. ಇತ್ತೀಚೆಗೆ ದೆಹಲಿಯಲ್ಲಿ ನಡೆದ ಎಲ್ಲಾ ರಾಜ್ಯಗಳ ಶಿಕ್ಷಣ ಸಚಿವರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಸಭೆಯಲ್ಲಿ ಸುಮಾರು 9 ರಾಜ್ಯಗಳು ಮುಂದಿನ ಶೈಕ್ಷಣಿಕ ವರ್ಷದಿಂದ ಇದನ್ನು ಪ್ರಾಯೋಗಿಕ ಮಾದರಿಯಲ್ಲಿ ಜಾರಿಗೆ ತರಲು ಒಪ್ಪಿಕೊಂಡಿವೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಪ್ರಾಯೋಗಿಕ ಕಾರ್ಯಕ್ರಮವನ್ನು ಜಾರಿಗೆ ತರುವಲ್ಲಿ ಕೆಲಸ ಮಾಡುತ್ತಿದೆ. ವಿದ್ಯಾಂಜಲಿ ಅನ್ನುವ ಕಾರ್ಯಕ್ರಮದಡಿ ನಿವೃತ್ತ ಶಿಕ್ಷಕರು, ಸರ್ಕಾರಿ ಅಧಿಕಾರಿಗಳು, ಮಾಜಿ ಸೇನಾ ಸಿಬ್ಬಂದಿ, ವೃತ್ತಿಪರರು, ಬೇರೆಡೆಯಿಂದ ವಲಸೆ ಬಂದವರು ಮತ್ತು ಮಹಿಳೆಯರು ಸ್ವಯಂ ಪ್ರೇರಣೆಯಿಂದ ಮುಂದೆ ಬಂದರೆ ಸರ್ಕಾರಿ ಶಾಲೆಗಳಲ್ಲಿ ಇತರ ಪಠ್ಯೇತರ ಚಟುವಟಿಕೆಗಳನ್ನು ನಡೆಸಲು ಅವರನ್ನು ನೇಮಕ ಮಾಡಲಾಗುವುದು. ಇವರು ಖಾಯಂ ಶಿಕ್ಷಕರಿಗೆ ಬದಲಿನವರು ಅಲ್ಲ. ಮತ್ತು ಬೋಧನೆಯಲ್ಲಿ ಕೂಡ ಇವರು ಪಾಲ್ಗೊಳ್ಳುವುದಿಲ್ಲ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳೆರಡೂ ಮುಖ್ಯ. ಪಠ್ಯೇತರ ಚಟುವಟಿಕೆಗಳಾದ ಜೀವನ ಕೌಶಲ್ಯ, ಆರೋಗ್ಯ, ಶುಚಿತ್ವ, ಶಾರೀರಿಕ ತರಬೇತಿ, ಕಲೆ ಮೊದಲಾದವುಗಳನ್ನು ನಿವೃತ್ತ ಶಿಕ್ಷಕರು ಹೇಳಿಕೊಡುತ್ತಾರೆ.