ಮೈಸೂರು: ಮೈಸೂರು ಜಿಲ್ಲಾಧಿಕಾರಿ ಸಿ.ಶಿಖಾ ಅವರಿಗೆ ಬೆದರಿಕೆ ಹಾಕಿ, ತಲೆಮರೆಸಿಕೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಹಾಗೂ ಮೈಸೂರು ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಕೆ.ಮರಿಗೌಡ ಅವರು ಕಡೆಗೂ ಬುಧವಾರ ಪೊಲೀಸರಿಗೆ ಶರಣಾಗಿದ್ದಾರೆ.
ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ನಿನ್ನೆ ಜಾಮೀನು ಅರ್ಜಿಯನ್ನು ಹಿಂಪಡೆದಿದ್ದ ಮರಿಗೌಡ ಇಂದು, ವಕೀಲರ ಜೊತೆ ಮೈಸೂರಿನ ನಜರ್ ಬಾದ್ ಪೊಲೀಸ್ ಠಾಣೆಗೆ ಹಾಜರಾಗಿ, ಪೊಲೀಸರಿಗೆ ಶರಣಾಗಿದ್ದಾರೆ.
ಮರಿಗೌಡ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದ್ದು, ಬಂಧನ ಭೀತಿಯಲ್ಲಿದ್ದ ಸಿಎಂ ಆಪ್ತ ಕೇರಳದ ಕೊಟ್ಟಂನ ಖಾಸಗಿ ಹೊಟೇಲ್‌ನಲ್ಲಿ ವಾಸ್ತವ್ಯ ಹೂಡಿದ್ದ ಎನ್ನಲಾಗಿದೆ.
ಮರಿಗೌಡ ಅವರು ಅಧಿಕಾರಿಯ ವರ್ಗಾವಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಶಿಖಾ ಅವರಿಗೆ ಬೆದರಿಕೆ ಹಾಕಿದ್ದರು. ಈ ಸಂಬಂಧ ಶಿಖಾ ಅವರು ಕಾಂಗ್ರೆಸ್ ನಾಯಕ ಸಿಎಂ ಆಪ್ತ ಮರಿಗೌಡ ವಿರುದ್ಧ ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ಮರಿಗೌಡ ತಲೆಮರೆಸಿಕೊಂಡಿದ್ದರು.