ಬೆಳಗಾವಿ: ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆ ಭಾನುವಾರವೂ ಮುಂದುವರೆದಿದ್ದು, ಕರ್ನಾಟಕದ ಗಡಿ ಭಾಗದ ಜಿಲ್ಲೆಗಳಲ್ಲೂ ಮಳೆ ವ್ಯಾಪಕ ದುಷ್ಪರಿಣಾಮ ಬೀರಿದೆ.
ಪ್ರಮುಖವಾಗಿ ಮಹಾರಾಷ್ಟ್ರದ ಭಾರಿ ಮಳೆಯಿಂದಾಗಿ ಅಲ್ಲಿನ ಬಹುತೇಕ ಜಲಾಶಯಗಳು ಅಪಾಯದ ಮಟ್ಟ ಮೀರಿದ್ದು, ಇದೇ ಕಾರಣಕ್ಕಾಗಿ ಕೃಷ್ಣಾ, ಗೋದಾವರಿ ಮತ್ತು ದೂದ್ ಗಂಗಾ ನದಿಗಳಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿದೆ. ಇದರಿಂದಾಗಿ ಕರ್ನಾಟಕದ ಗಡಿ ಭಾಗದಲ್ಲಿರುವ ಜಿಲ್ಲೆಗಳ ನದಿ ಪಾತ್ರದ ಗ್ರಾಮಗಳಿಗೆ ನೀರು ನುಗ್ಗಿದ್ದು, ಬಹುತೇಕ ಗ್ರಾಮಸ್ಥರು ಇದೀಗ ಗ್ರಾಮ ತೊರೆಯುವಂತಾಗಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿರುವ ಯಕ್ಸಂಬಾ ಪಟ್ಟಣದಲ್ಲಿ ಭಾರಿ ಪ್ರಮಾಣದಲ್ಲಿ ನೀರು ನುಗ್ಗಿದ್ದು, ನದಿ ತಟದಲ್ಲಿರುವ ತೋಟ ಮತ್ತು ಗದ್ದೆಗಳು ಸಂಪೂರ್ಣ ಜಲಾವೃತ್ತಗೊಂಡಿವೆ. ಈ ಪಟ್ಟಣದ ಸುಮಾರು 15ಕ್ಕೂ ಹೆಚ್ಚು ರೈತ ಕುಟುಂಬಗಳು ಗ್ರಾಮ ತೊರೆದಿದ್ದು, ಸುರಕ್ಷಿತ ಪ್ರದೇಶಗಳನ್ನರಸಿ ಹೊರಟಿವೆ. ಇನ್ನು ಮುಂದಿನ 48 ಗಂಟೆಗಳಲ್ಲಿ ಈ ಭಾಗದಲ್ಲಿ ಮತ್ತಷ್ಟು ಮಳೆಯಾಗಲಿದೆ ಕೇಂದ್ರ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಇನ್ನು ಕಳೆದ ಕೇವಲ 24 ಗಂಟೆಗಳ ಅವಧಿಯಲ್ಲಿ ಮುಂಬೈ ನಗರವೊಂದರಲ್ಲೇ ಬರೊಬ್ಬರಿ 142 ಮಿಲಿ ಮೀಟರ್ ಮಳೆಯಾಗಿದ್ದು, ಇದು ಈ ವರೆಗಿನ ಮುಂಬೈನಲ್ಲಿನ ಅತ್ಯಧಿಕ ಮಳೆಯಾಗಿದೆ ಎಂದು ಹೇಳಲಾಗುತ್ತಿದೆ.
ಒಟ್ಟಾರೆ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆ ಕೇವಲ ಆ ರಾಜ್ಯಕ್ಕೆ ಮಾತ್ರವಲ್ಲದೆ ಕರ್ನಾಟಕದ ಗಡಿ ಜಿಲ್ಲೆಗಳಲ್ಲೂ ಪರಿಣಾಮ ಬೀರಿ, ಜನಜೀವನ ಅಸ್ತವ್ಯಸ್ಥಗೊಳ್ಳುವಂತೆ ಮಾಡಿದೆ.