ರಾಜ್ಯ

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಅಕ್ರಮ ಕೇಸು ಪರಿಶೀಲನೆಗೆ ಹೈಕೋರ್ಟ್ ಆದೇಶ

Sumana Upadhyaya
ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಸಂಸದ  ಬಿ.ಎಸ್.ಯಡಿಯೂರಪ್ಪನವರ ವಿರುದ್ಧ ಅಪರಾಧ ಪ್ರಕರಣ ತನಿಖೆ ಕೈಗೊಳ್ಳುವ ಮೊದಲು ಸಮರ್ಥ ಅಧಿಕಾರಿಗಳಿಂದ ಪೂರ್ವ ಸಮ್ಮತಿ ಪಡೆದುಕೊಳ್ಳುವ ಅಗತ್ಯದ ಬಗ್ಗೆ ಪರಾಮರ್ಶಿಸುವಂತೆ ಹೈಕೋರ್ಟ್ ಬುಧವಾರ ಶಿವಮೊಗ್ಗದ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ  ಆದೇಶ ನೀಡಿದೆ.
ಯಡಿಯೂರಪ್ಪ ಅವರ ಪುತ್ರಿ ಅರುಣಾ ದೇವಿಯವರು ಭಾಗಿಯಾಗಿದ್ದಾರೆ ಎನ್ನಲಾಗಿರುವ ಕರ್ನಾಟಕ ಗೃಹ ಮಂಡಳಿಯ ಸೈಟು ಖರೀದಿ ಮತ್ತು ಅಕ್ರಮ ಹಂಚಿಕೆ ಕುರಿತ ಕೇಸಿನ ವಿಚಾರಣೆ ಇದಾಗಿದೆ.
2012, ಫೆಬ್ರವರಿ 12ರಂದು ನ್ಯಾಯವಾದಿ ಬಿ.ವಿನೋದ್ ಎಂಬುವವರು ಸಲ್ಲಿಸಿದ್ದ ಖಾಸಗಿ ದೂರಿನ ಆಧಾರದ ಮೇಲೆ ಯಡಿಯೂರಪ್ಪ ಅವರ ವಿರುದ್ಧ ಅಪರಾಧ ಪ್ರಕರಣದಡಿ ಲೋಕಾಯುಕ್ತ ವಿಶೇಷ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿ ನ್ಯಾಯಮೂರ್ತಿ ಆನಂದ್ ಬೈರರೆಡ್ಡಿ ಈ ಆದೇಶ ಹೊರಡಿಸಿದ್ದಾರೆ.  
ಸಿಆರ್ ಪಿಸಿ ಸೆಕ್ಷನ್ 197ರಡಿ ಸಾರ್ವಜನಿಕ ಸೇವೆಯಲ್ಲಿರುವ ವ್ಯಕ್ತಿಯೊಬ್ಬರ ವಿರುದ್ಧ ಅಪರಾಧ ಪ್ರಕರಣ ವಿಚಾರಣೆ ಕೈಗೆತ್ತಿಕೊಳ್ಳುವಾಗ ಸಂಬಂಧಪಟ್ಟ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯಬೇಕು ಎಂದು ನ್ಯಾಯಮೂರ್ತಿ ಬೈರರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ ಗೃಹ ಮಂಡಳಿ 2011ರಲ್ಲಿ ಯಡಿಯೂರಪ್ಪನವರು ಉಪ ಮುಖ್ಯಮಂತ್ರಿಯಾಗಿದ್ದಾಗ ಶಿವಮೊಗ್ಗದ ವಿನೋಬ ನಗರದಲ್ಲಿ ಪತ್ರಕರ್ತರ ಕೋಟಾದಡಿಯಲ್ಲಿ ನಾಲ್ವರಿಗೆ ಸೈಟು ಹಂಚಿಕೆ ಮಾಡಲಾಗಿತ್ತು. ಈ ನಾಲ್ವರೂ ಅರುಣಾ ದೇವಿಯವರು ನಡೆಸುತ್ತಿದ್ದ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇವರಿಂದ 2012ರಲ್ಲಿ ಅರುಣಾ ಎಲ್ಲಾ ನಾಲ್ಕು ಸೈಟ್ ಗಳನ್ನು ಖರೀದಿಸಿದ್ದರು.
ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ವಿನೋದ್ ಯಡಿಯೂರಪ್ಪ ವಿರುದ್ಧ ಖಾಸಗಿ ದೂರು ದಾಖಲಿಸಿದ್ದರು. ವಿಚಾರಣೆ ನಡೆಸಿದ ಲೋಕಾಯುಕ್ತ ವಿಶೇಷ ನ್ಯಾಯಾಲಯ ಲೋಕಾಯುಕ್ತ ಪೊಲೀಸರಿಗೆ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಆದೇಶ ನೀಡಿತ್ತು. ಅದಾಗ್ಯೂ ಬಿ ವರದಿ ಸಲ್ಲಿಸಿದ ಲೋಕಾಯುಕ್ತ ಪೊಲೀಸರು, ಸೈಟ್ ಖರೀದಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಹೇಳಿದ್ದರು. ಕೊನೆಗೆ ಬಿ ವರದಿಯನ್ನು ಲೋಕಾಯುಕ್ತ ವಿಶೇಷ ಕೋರ್ಟ್ ತಿರಸ್ಕರಿಸಿ ಯಡಿಯೂರಪ್ಪ ಮತ್ತು ಇತರರಿಗೆ ಸಮ್ಮನ್ಸ್ ಜಾರಿ ಮಾಡಿತ್ತು.
SCROLL FOR NEXT