ಬೆಂಗಳೂರು: ಈ ಬಾರಿ ಮುಂಗಾರು ಮಳೆ ಕೊರತೆಯಿಂದ ರೈತರು ಬೆಳೆಯುವ ಭತ್ತ ಹಾಗೂ ಕಬ್ಬಿಗೆ ನೀರು ಬಿಡದೆ ಇರಲು ನಿರ್ಧರಿಸಿರುವ ಸರ್ಕಾರ, ತಮಿಳು ನಾಡಿಗೆ ಪೂರ್ಣ ಪ್ರಮಾಣದ ನೀರು ಬಿಡಲು ಸಾಧ್ಯವಿಲ್ಲ ಎಂದು ಕಾವೇರಿ ನೀರು ಹಂಚಿಕೆ ನ್ಯಾಯಮಂಡಳಿಗೆ ಮನವರಿಕೆ ಮಾಡಿಕೊಡಲು ತೀರ್ಮಾನಿಸಿದೆ.
ಜಲಾಶಯದಲ್ಲಿ ಈಗ ಇರುವ ನೀರನ್ನು ಮಂಡ್ಯ, ಮೈಸೂರು ಹಾಗೂ ಬೆಂಗಳೂರು ನಗರಗಳಿಗೆ ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಬಳಸಲು ಸಿಎಂ ಸಿದ್ದರಾಮಯ್ಯ ನೇತೃತ್ವದ ಸಭೆ ಶುಕ್ರವಾರ ನಿರ್ಧರಿಸಿದೆ.
ನೀರಿಲ್ಲದೆ ಬೆಳೆಯುವ ಬೆಳಗಳನ್ನು ಮಾತ್ರ ಬೆಳೆಯುವಂತೆ ರೈತರ ಮನವೊಲಿಸುವಂತೆ ಸಿಎಂ ಸಿದ್ದರಾಮಯ್ಯ ಜಲಸಂಪನ್ಮೂಲ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಭತ್ತದ ಕೃಷಿಯೆಗ ಕಾವೇರಿ ಮತ್ತು ಭದ್ರ ಜಲಾಶಯದಿಂದ ನೀರು ಬಿಡದಿರಲು ನಿರ್ಧರಿಸಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ಸಭೆಯ ನಂತರ ತಿಳಿಸಿದ್ದಾರೆ.
ಕಾವೇರಿ ಜಲಾನಯನ ಪ್ರದೇಶದಲ್ಲಿರುವ ಕೆಆರ್ ಎಸ್, ಹೇಮಾವತಿ, ಹಾರಂಗಿ ಮತ್ತು ಕಬಿನಿ ಜಲಾಶಯಗಳಲ್ಲಿ ಸದ್ಯ 62 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಈ ಸಮಯಕ್ಕೆ ಜಲಾಶಯಗಳಲ್ಲಿ 115 ಟಿಎಂಸಿ ನೀರು ಸಂಗ್ರಹವಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಇನ್ನೂ ತಮಿಳುನಾಡಿಗೆ ನೀರು ಬಿಡುವ ವಿಷಯಕ್ಕೆ ಪ್ರತಿಕ್ರಿಯಿಸಿದ ಎಂ ಬಿ ಪಾಟೀಲ್, ಮೊದಲವ ಮೂರು ತಿಂಗಳು ಅಂದರೆ ಜೂನ್ ನಿಂದ ಆಗಸ್ಟ್ ವರೆಗೂ ಕರ್ನಾಟಕ ತಮಿಳುನಾಡಿಗೆ 21 ಟಿಎಂಸಿ ನೀರು ಬಿಡುಗಡೆ ಮಾಡಿದೆ. ಇನ್ನುಳಿದ ನಿಗದಿತ 34 ಟಿಎಂಸಿ ನೀರು ಬಿಡಗಡೆಗೆ ತಡೆಯೊಡ್ಡಲು ನಿರ್ಧರಿಸಲಾಗಿದೆ.
ಬೆಂಗಳೂರು, ಮೈಸೂರು, ಹಾಗೂ ಮಂಡ್ಯ ನಗರಗಳ ಕುಡಿಯುವ ನೀರಿಗೆ 40 ಟಿಎಂ ಸಿ ನೀರಿನ ಅವಶ್ಯಕತೆಯಿದೆ ಎಂದು ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ತಮಿಳು ನಾಡಿಗೆ ಬಿಡಬೇಕಾದ ನೀರನ್ನು ಬಿಡಲು ಆಗುವುದಿಲ್ಲ ಎಂದು ಕೇಂದ್ರ ಜಸ ಸಂಪನ್ಮೂಲ ಇಲಾಖೆಗೆ ಮನವರಿಕೆ ಮಾಡಿಕೊಡುವುದಾಗಿ ಅವರು ತಿಳಿಸಿದ್ದಾರೆ.