ರಾಜ್ಯ

ಮಂಡ್ಯ: ಶಾಲಾ ಮಕ್ಕಳ ನೃತ್ಯವನ್ನು ಅರ್ಧಕ್ಕೆ ನಿಲ್ಲಿಸಿದ ಸಚಿವ ಡಿಕೆ ಶಿವಕುಮಾರ್

Shilpa D

ಮಂಡ್ಯ: 70 ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೋಂಡಿದ್ದ ಇಂಧನ ಸಚಿವ ಡಿ.ಕೆ ಶಿವಕುಮಾರ್ ಶಾಲಾ ಮಕ್ಕಳ ನೃತ್ಯವನ್ನು ಅರ್ಧಕ್ಕೆ ನಿಲ್ಲಿಸುವಂತೆ ಸೂಚಿಸಿದ ಘಟನೆ ಮಂಡ್ಯದಲ್ಲಿ ನಡೆದಿದೆ.

ಇಂದು ಬೆಳಗ್ಗೆ ಮಂಡ್ಯದ ವಿವಿ ಸ್ಟೇಡಿಯಂ ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ ಶಿಮಕುಮಾರ್ ಧ್ವಜಾರೋಹಣ ನಡೆಸಿ ಭಾಷಣ ನಡೆಸಿದರು. ಈ ವೇಳೆ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಶಾಲಾ ಮಕ್ಕಳು ಶಾಂತಿ ಕ್ರಾಂತಿ ಕನ್ನಡ ಸಿನಿಮಾದ ಹುಟ್ಟೋದ್ಯಾಕೆ ಸಾಯೋದ್ಯಾಕೆ ಎಂಬ ಹಾಡಿಗೆ ನೃತ್ಯ ಮಾಡುತ್ತಿದ್ದರು. ಈ ವೇಳೆ ಮೂವರು ಮಕ್ಕಳು ಆತ್ಮಹತ್ಯೆ ಮಾಡಿಕೊಂಡ ಐಎಎಸ್ ಅಧಿಕಾರಿ ಡಿ.ಕೆ ರವಿ, ಮಂಗಳೂರು ಡಿವೈಎಸ್ ಪಿ ಎಂ.ಕೆ ಗಣಪತಿ ಹಾಗೂ ಚಿಕ್ಕಮಗಳೂರು ಡಿವೈಎಸ್ ಪಿ ಕಲ್ಲಪ್ಪ ಹಂಡಿಭಾಗ್ ಅವರ ಭಾವಚಿತ್ರಗಳನ್ನು ಪ್ರದರ್ಶಿಸಿದರು. ಇದನ್ನು ನೋಡಿ ಗರಂ ಆದ ಡಿಕೆ ಶಿವಕುಮಾರ್, ನೃತ್ಯವನ್ನು ಅರ್ಧಕ್ಕೆ ನಿಲ್ಲಿಸುವಂತೆ ಸೂಚಿಸಿ ಮಕ್ಕಳು ಡ್ಯಾನ್ಸ್ ಮಾಡುವುದನ್ನು ನಿಲ್ಲಿಸಿದ್ದಾರೆ. ನಂತರ ಅಲ್ಲಿಯೇ ಇದ್ದ ಡಿಡಿಪಿಐ ಶಿವಮಾದು ಅವರನ್ನು ಕರೆದು ಎಚ್ಚರಿಕೆ ನೀಡಿದ್ದಾರೆ.

ಕಾಂಗ್ರೆಸ್ ಸರ್ಕಾರದ ಆಡಳಿತ ಅವಧಿಯಲ್ಲಿ ಈ ಮೂವರು ಅಧಿಕಾರಿಗಳ ಆತ್ಮಹತ್ಯೆಯಿಂದ ಸರ್ಕಾರ ಪೇಚಿಗೆ ಸಿಲುಕಿತ್ತು, ಮಕ್ಕಳು ಈ ಮೂವರ ಭಾವಚಿತ್ರ ಹಿಡಿದು ಡ್ಯಾನ್ಸ್ ಮಾಡಿದ್ದು ಶಿವಕುಮಾರ್ ಕೋಪಕ್ಕೆ ಕಾರಣವಾಗಿದೆ ಎನ್ನಲಾಗಿದೆ.

SCROLL FOR NEXT