ರಾಜ್ಯ

ಜೆಸ್ಕಾಂ ಸಿಬ್ಬಂದಿಯಿಂದ ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ

Manjula VN

ಬಳ್ಳಾರಿ: ಮಾಧ್ಯಮ ಪ್ರತಿನಿಧಿಗಳ ಮೇಲೆ ಗುಲಬರ್ಗಾ ವಿದ್ಯುತ್‌ ಸರಬರಾಜು ಕಂಪೆನಿ (ಜೆಸ್ಕಾಂ)ಯ ಸಿಬ್ಬಂದಿಗಳು ಹಲ್ಲೆ ಮಾಡಿರುವ ಘಟನೆಯೊಂದು ಶುಕ್ರವಾರ ನಡೆದಿದೆ.

ಮಾಧ್ಯಮ ವರದಿಗಾರ ಸುರೇಶ್ ಚಾವನ್, ಕ್ಯಾಮರಾಮೆನ್ ದಿವಾಕರ್ ರೆಡ್ಡಿ, ಛಾಯಾಗ್ರಾಹಕ ನೂರ್ ಹಲ್ಲೆಗೊಳಗಾದವರಾಗಿದ್ದಾರೆ.

ಜೆಸ್ಕಾಂನಲ್ಲಿನ ನೌಕರರು ಪ್ರತಿಭಟನೆ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಸುರೇಶ್, ದಿವಾಕರ್ ಹಾಗೂ ನೂರ್ ಅವರು ವರದಿ ಮಾಡಲು ಕಚೇರಿ ಬಳಿ ಹೋಗಿದ್ದರು. ಈ ವೇಳೆ ಜೆಸ್ಕಾಂ ಸಿಬ್ಬಂದಿಗಳು ಅವರ ಮೇಲೆ ಹಲ್ಲೆ ಮಾಡಿದ್ದಾರೆಂದು ಹೇಳಲಾಗುತ್ತಿದೆ.

ನೌಕರರೊಂದಿಗೆ ಜೆಸ್ಕಾಂ ಅಧಿಕಾರಿಗಳು ಸಭೆಯೊಂದನ್ನು ಏರ್ಪಡಿಸಿದ್ದರು. ಸಭೆ ಬಳಿಕ ನೌಕರರು ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಲು ಆರಂಭಿಸಿದ್ದರು.

ಘಟನೆ ಕುರಿತಂತೆ ವರದಿಗಾರರು ಪೊಲೀಸರಿಗೆ ದೂರು ನೀಡಿದ್ದು, ಜೆಸ್ಕಾಂನ ಕೆಲ ನೌಕರರು ಕರೆ ಮಾಡಿ ಮೇಲಿನ ಅಧಿಕಾರಿಗಳು ತಮಗೆ ಕಿರುಕುಳ ನೀಡುತ್ತಿದ್ದು, ವರ್ಗಾವಣೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆಂದು ಹೇಳಿದ್ದರು. ಇದರಂತೆ ವರದಿ ಮಾಡಲು ಕಚೇರಿ ಬಳಿ ಹೋಗಿದ್ದೆವು. ಈ ವೇಳೆ ಪ್ರತಿಭಟನೆಯನ್ನು ವರದಿ ಮಾಡುತ್ತಿದ್ದಾಗ 20-30 ಜನರು ನಮ್ಮ ಸುತ್ತಲೂ ನಿಂತು, ನಿಮ್ಮನ್ನು ಇಲ್ಲಿಗೆ ಯಾರು ಕರೆದವರು? ಎಂದು ಪ್ರಶ್ನೆ ಮಾಡಿದರು. ನಂತರ ನಮ್ಮ ಮೇಲೆ ಇದ್ದಕ್ಕಿದ್ದಂತೆ ಹಲ್ಲೆ ನಡೆಸಿದರು. ಅಲ್ಲದೆ, ನಮ್ಮ ಬಳಿ ಇದ್ದ ಕ್ಯಾಮೆರಾವನ್ನು ನಾಶ ಮಾಡಿದರು ಎಂದು ಹೇಳಿಕೊಂಡಿದ್ದಾರೆ.

ಮಾಧ್ಯಮ ಪ್ರತಿನಿಧಿಗಳ ಮೇಲೆ ನಡೆಸಿದ ಹಲ್ಲೆ ಪ್ರಕರಣವನ್ನು ಪತ್ರಕರ್ತರು ವಿರೋಧಿಸಿದ್ದು, ಹೊಸಪೇಟೆಯಲ್ಲಿ ಕೆಲ ಪತ್ರಕರ್ತರು ಪ್ರತಿಭಟನೆ ನಡೆಸಿದರು. ಹಲ್ಲೆ ನಡೆಸಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು. ಅಲ್ಲದೆ, ಜಿಲ್ಲಾಧಿಕಾರಿ ರಾಮ್ ಪ್ರಸತ್ ಮನೋಹರ್ ಅವರನ್ನು ಭೇಟಿ ಮಾಡಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

SCROLL FOR NEXT