ಮಾಗಡಿ: ಜಮೀನು ವಿವಾದ ಸಂಬಂಧ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂಪ್ರಕಾಶ್ ಪುತ್ರ ಕಾರ್ತಿಕೇಶ್ ಹಾಗೂ ಪೊಲೀಸ್ ಅಧಿಕಾರಿಗಳು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ರೈತನೊಬ್ಬ ಸೋಮವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಶಿವಣ್ಣ(48) ಮೃತ ರೈತ. ಸಹೋದರ ಲೋಕೇಶ್ ಜತೆ ಶಿವಣ್ಣನಿಗೆ ಜಮೀನಿನ ವಿಚಾರವಾಗಿ ವಿವಾದವಿತ್ತು. ಈ ವಿಚಾರದಲ್ಲಿ ಕಾರ್ತಿಕೇಶ್ ಹಾಗೂ ಪೊಲೀಸರು ಲೋಕೇಶ್ ಪರ ನಿಂತು ಕಿರುಕುಳ ನೀಡಿದ್ದರಿಂದ ವಿಷ ಸೇವಿಸಿದ್ದಾಗಿ, ಮೃತಪಡುವ ಮುನ್ನ ಶಿವಣ್ಣ ಹೇಳಿಕೆ ನೀಡಿದ್ದಾರೆ. ಇದನ್ನು ಮೊಬೈಲ್ನಲ್ಲಿ ವಿಡಿಯೋ ರೆಕಾರ್ಡ್ ಮಾಡಲಾಗಿದೆ.
ನನ್ನ ತಂದೆ ಸಾವಿಗೆ ಅವರ ಸಹೋದರ ಲೋಕೇಶ್, ನಾರಾಯಣಪ್ಪ ಹಾಗೂ ತಂಡದವರೇ ಕಾರಣ ಎಂದು ಆರೋಪಿಸಿ ಶಿವಣ್ಣರ ಪುತ್ರ ಅರುಣ್ ಕುಮಾರ್ ಮಾಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
2015ರ ಜು.13ರಂದು ಲೋಕೇಶ್ ತನ್ನ ಸಹಚರರೊಂದಿಗೆ ಮನೆಗೆ ನುಗ್ಗಿ ಕುಟುಂಬ ಸದಸ್ಯರ ಮೇಲೆ ಹಲ್ಲೆ ನಡೆಸಿದ್ದರು. ಈ ಬಗ್ಗೆ ದೂರು ನೀಡಿದ್ದರೂ ಕಾರ್ತಿಕೇಶ್, ಕ್ರಮ ಕೈಗೊಳ್ಳಲು ಅಡ್ಡಿಯಾಗಿದ್ದರು. ಲೋಕೇಶ್ ಪದೇಪದೆ ಕಿರುಕುಳ ನೀಡುತ್ತಿದ್ದುದರಿಂದ ಮನನೊಂದು ವಿಷ ಸೇವಿಸಿದ್ದೇನೆ’ ಎಂದು ಶಿವಣ್ಣ ವಿಡಿಯೋದಲ್ಲಿ ವಿವರಿಸಿದ್ದಾರೆ. .
ಶಿವಣ್ಣ ಮತ್ತು ಅವರ ಸೋದರ ಸಂಬಂಧಿಗಳಿಗೆ ಮೊದಲಿನಿಂದಲೂ ಗವಿನಾಗಮಂಗಲ ಸರ್ವೆ ನಂಬರ್37/3ರಲ್ಲಿನ 1ಎಕರೆ37 ಗುಂಟೆ ಜಮೀನಿಗೆ ಸಂಬಂಧಿಸಿ ವ್ಯಾಜ್ಯ ನಡೆಯುತ್ತಿತ್ತು. ಹಲವು ಬಾರಿ ಗಲಾಟೆಗಳು ನಡೆದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಕಳೆದ ವರ್ಷ ಜುಲೈ ತಿಂಗಳಿನಲ್ಲೂ ಶಿವಣ್ಣ ಮತ್ತು ನಾರಾಯಣಪ್ಪ ಕುಟುಂಬದವರಿಗೆ ಘರ್ಷಣೆ ನಡೆದು ದೂರು ದಾಖಲಾಗಿತ್ತು.
ಕಾರ್ತಿಕೇಶ್ ಮತ್ತು ಡಿ.ಜಿ.ಕಚೇರಿಯಲ್ಲಿ ಇದ್ದ ನರಸಿಂಹಮೂರ್ತಿ ಎಂಬುವವರ ಸಂಬಂಧಿ ಸಹಭಾಗಿತ್ವದಲ್ಲಿ ತಾಲ್ಲೂಕಿನ ಮಾರೇಗೌಡನದೊಡ್ಡಿ ಬಳಿ ಕ್ರಷರ್ ನಡೆಯುತ್ತಿತ್ತು.