ಉಡುಪಿ: ಕೃಷ್ಣ ಜನ್ಮಾಷ್ಠಮಿ ಅಂಗವಾಗಿ ನಡೆಯುವ ವಿಟ್ಲ ಪಿಂಡಿ ರಥೋತ್ಸವದಲ್ಲಿ ಸಾವಿರಾರು ಮಂದಿ ಭಾಗವಹಿಸಿ ರಥೋತ್ಸವವನ್ನು ಕಣ್ತುಂಬಿಕೊಂಡರು.
ರಥಬೀದಿಯಲ್ಲಿ ಪರ್ಯಾಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹಾಗೂ ಶೀರೂರು ಮಠದ ಲಕ್ಷ್ಮೀವರ ಸ್ವಾಮೀಜಿ ಅವರ ಸಮ್ಮುಖದಲ್ಲಿ ಪೇಜಾವರ ಕಿರಿಯ ವಿಶ್ವಪ್ರಸನ್ನ ಸ್ವಾಮೀಜಿ ಅವರು ಚಿನ್ನದ ರಥದಲ್ಲಿ ಶ್ರೀಕೃಷ್ಣನ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿದರು.
ನವರತ್ನ ರಥದಲ್ಲಿ ಅನಂತೇಶ್ವರ ಮತ್ತು ಚಂದ್ರೇಶ್ವರ ದೇವ ಮೂರ್ತಿಯನ್ನು ಪ್ರತಿಷ್ಠಾಪಿಸಿದ ನಂತರ ಪೂಜಾ ವಿಧಿ ವಿಧಾನಗಳನ್ನು ಪೂರ್ಣಗೊಳಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಚಿನ್ನದ ರಥ, ನವರತ್ನ ರಥ, ಹುಲಿ ವೇಷ ತಂಡ, ವಿವಿಧ ವೇಷ ತಂಡ, ಕಲಾತಂಡ, ವಾದ್ಯ ತಂಡ ಹಾಗೂ ಮರಗೋಲು ತಂಡಗಳು ಒಂದರ ಹಿಂದೆ ಒಂದು ಸಾಗಿ ಬಂದ ದೃಶ್ಯವನ್ನು ಜನರು ಕಣ್ತುಂಬಿಕೊಂಡರು.
ಸುಮಾರು 30 ಸಾವಿರ ಮಂದಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.ಹೆಚ್ಚಿನ ಸಂಖ್ಯೆಯಲ್ಲಿ ಭಕಾದಿಗಳು ಆಗಮಿಸಿದ್ದ ಹಿನ್ನೆಲೆಯಲ್ಲಿ ದೇವಾಲಯದ ಸುತ್ತ ಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು