ಬೊಮ್ಮನಹಳ್ಳಿ ಜಂಕ್ಷನ್ ಬಳಿ ಕೆಟ್ಟುಹೋಗಿ ನಿಂತ ಬಸ್ಸನ್ನು ಪಕ್ಕಕ್ಕೆ ನಿಲ್ಲಿಸಲು ಪ್ರಯಾಣಿಕರು ಸಹಾಯ ಮಾಡುತ್ತಿರುವುದು.
ಬೆಂಗಳೂರು: ದೇಶದಲ್ಲಿ ಬಸ್ ಸಾರಿಗೆ ವ್ಯವಸ್ಥೆಯಲ್ಲಿ ಬೆಂಗಳೂರಿನ ಮಹಾನಗರ ಸಾರಿಗೆ ಸಂಸ್ಥೆ ಉತ್ತಮ ಎಂಬ ಹೆಗ್ಗಳಿಕೆಗೆ ಕೆಲ ವರ್ಷಗಳ ಹಿಂದೆ ಪಾತ್ರವಾಗಿತ್ತು. ಆದರೆ ಪದೇ ಪದೇ ಬಸ್ಸು ಸ್ಥಗಿತದಿಂದಾಗಿ ಅದರ ಜನಪ್ರಿಯತೆ ಕುಸಿಯುತ್ತಿದೆ. ಮೊನ್ನೆ ಶುಕ್ರವಾರ ಒಂದೇ ದಿನ ಬೆಂಗಳೂರು ನಗರದಲ್ಲಿ ಸಂಚಾರ ನಡೆಸುತ್ತಿದ್ದ 8 ಬಸ್ಸುಗಳು ಕೆಟ್ಟು ಹೋಗಿ ಸ್ಥಗಿತಗೊಂಡಿರುವ ಬಗ್ಗೆ ಬೆಂಗಳೂರು ಸಂಚಾರ ಪೊಲೀಸರ ಟ್ವಿಟ್ಟರ್ ಖಾತೆಯಲ್ಲಿ ಹಾಕಲಾಗಿದೆ.
ಹೆಚ್ಚುವರಿ ಪೊಲೀಸ್ ಆಯುಕ್ತ ಆರ್. ಹಿತೇಂದ್ರ ಮಾತನಾಡಿ, ಮುಖ್ಯವಾಗಿ ಬೆಳಗ್ಗೆ ಮತ್ತು ಸಾಯಂಕಾಲದ ಹೊತ್ತುಗಳಲ್ಲಿ ಬಸ್ಸುಗಳು ಕೆಟ್ಟು ಹೋಗಿ ಸಂಚಾರ ಸ್ಥಗಿತಗೊಳ್ಳುವುದರಿಂದ ಪ್ರಯಾಣಿಕರಿಗೆ ತೊಂದರೆಯುಂಟಾಗುತ್ತದೆ. ಸಂಚಾರ ದಟ್ಟಣೆಯುಂಟಾಗುತ್ತದೆ. ಆದರೂ ಕೂಡ ಪ್ರಯಾಣಿಕರಿಗೆ ತೊಂದರೆಯಾಗದಿರಲೆಂದು ಟ್ವಿಟ್ಟರ್, ಫೇಸ್ ಬುಕ್ ಮೂಲಕ ಬಸ್ಸು ಕೆಟ್ಟು ಹೋಗಿರುವ ಬಗ್ಗೆ ಪ್ರಯಾಣಿಕರಿದೆ ಮಾಹಿತಿ ತಲುಪಿಸಲು ಯತ್ನಿಸುತ್ತೇವೆ ಎಂದರು.
ಬಿಎಂಟಿಸಿ ಮಾರ್ಗಸೂಚಿ ಸಲಹೆ ಪ್ರಕಾರ, 8 ಲಕ್ಷ ಕಿಲೋ ಮೀಟರ್ ಗಿಂತ ಹೆಚ್ಚು ಸಂಚಾರ ಮಾಡಿದ 10 ವರ್ಷಗಳಿಗೂ ಹಳೆಯದಾದ ಬಸ್ಸುಗಳ ಭಾಗಗಳನ್ನು, ಎಂಜಿನ್ ನ್ನು ಬದಲಾಯಿಸಬೇಕು ಎಂಬ ನಿಯಮವಿದೆ. ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಇಂದು ಬಿಎಂಟಿಸಿಯಲ್ಲಿರುವ 830ಕ್ಕೂ ಹೆಚ್ಚು ಬಸ್ಸುಗಳು 8 ಲಕ್ಷ ಕಿಲೋ ಮೀಟರ್ ಗಿಂತ ಹೆಚ್ಚು ಓಡಾಡಿದ್ದು, 199 ಬಸ್ಸುಗಳು 10 ವರ್ಷಗಳಿಗೂ ಹಳೆಯದ್ದು. ಇದರಿಂದಾಗಿಯೇ ಬಸ್ಸು ಸಂಚರಿಸುವಾಗ ಇದ್ದಕ್ಕಿದ್ದಂತೆ ಕೆಟ್ಟುಹೋಗಿ ನಿಲ್ಲುತ್ತದೆ.
ಪ್ರಸ್ತುತ, ಬಿಎಂಟಿಸಿ ಬಸ್ಸು ಸರಾಸರಿ 5.47 ಲಕ್ಷ ಕಿಲೋ ಮೀಟರ್ ದೂರವನ್ನು ಕ್ರಮಿಸುತ್ತದೆ. ಇದರ ಪ್ರಮಾಣ 2009ರಲ್ಲಿ 3 ಲಕ್ಷ ಕಿಲೋ ಮೀಟರ್ ಆಗಿತ್ತು. 2009ರಿಂದ 2016ರವರೆಗೆ, 19 ಸಾವಿರದ 417 ಬಿಎಂಟಿಸಿ ಬಸ್ಸುಗಳು ಕೆಟ್ಟುಹೋಗಿದ್ದವು. ಅಂದರೆ ದಿನಕ್ಕೆ ಸರಾಸರಿ 7 ಬಸ್ಸುಗಳು. ಬಸ್ಸು ಕೆಟ್ಟು ಹೋಗಿ ನಿಲ್ಲುವ ಸಂಖ್ಯೆ 2009ರಲ್ಲಿ 2 ಸಾವಿರದ 204 ಇದ್ದರೆ 2015-16ರಲ್ಲಿ 2 ಸಾವಿರದ 548 ಇದೆ.
ಬಸ್ಸುಗಳು ಕೆಟ್ಟುಹೋಗುವ ಸಂಖ್ಯೆ ಹೆಚ್ಚಾಗುತ್ತಿದ್ದರೂ ಕೂಡ ಬಿಎಂಟಿಸಿ ಬಸ್ಸುಗಳ ಸಂಖ್ಯೆಯೇನೂ ವಿಸ್ತರಣೆಯಾಗಿಲ್ಲ. 2012-13ರಲ್ಲಿ 6 ಸಾವಿರದ 431 ಆಗಿದ್ದರೆ, 2012-13ರಲ್ಲಿ 6 ಸಾವಿರದ 349 ಆಗಿದೆ. ಬೆಂಗಳೂರು ನಗರದ ಜನಸಂಖ್ಯೆಗೆ ಹೋಲಿಸಿದರೆ ಇಲ್ಲಿನ ಬೇಡಿಕೆಗಳನ್ನು ಈಡೇರಿಸಲು ಕನಿಷ್ಟ 15 ಸಾವಿರ ಬಸ್ಸುಗಳು ಬೇಕು.
ಸಂಚಾರ ತಜ್ಞ ಮತ್ತು ಸರ್ಕಾರದ ಸಲಹೆಗಾರ ಎಂ.ಎನ್.ಶ್ರೀಹರಿ, ಬಸ್ಸುಗಳ ಸಂಚಾರದಲ್ಲಿನ ವ್ಯತ್ಯಯದಿಂದಾಗಿ ಹಲವರು ಖಾಸಗಿ ವಾಹನಗಳನ್ನು ಅವಲಂಬಿಸಬೇಕಾಗಿ ಬಂದಿದೆ. ಅದರಿಂದ ನಗರದಲ್ಲಿ ಮಾಲಿನ್ಯ, ಸಂಚಾರ ದಟ್ಟಣೆ ಹೆಚ್ಚಾಗುತ್ತದೆ. ಆದರೆ ಖಾಸಗಿ ವಾಹನಗಳನ್ನು ಕಡಿಮೆ ಬಳಸುವಂತೆ ಜನರ ಮನವೊಲಿಸುವ ಪ್ರಯತ್ನ ನಡೆಯುತ್ತಿಲ್ಲ. ಜನರಿಗೆ ಸುರಕ್ಷತೆಯ ಪ್ರಯಾಣವನ್ನು ಒದಗಿಸುವುದು ಸರ್ಕಾರದ ಜವಾಬ್ದಾರಿ. ಇಲ್ಲದಿದ್ದರೆ ಪ್ರಯಾಣಿಕರು ಖಾಸಗಿ ವಾಹನ ಅಥವಾ ಮೆಟ್ರೋ ರೈಲು ಸೇವೆಯನ್ನು ಅವಲಂಬಿಸಬೇಕಾಗಿ ಬರುತ್ತದೆ ಎನ್ನುತ್ತಾರೆ.
ಈ ಬಗ್ಗೆ ಬಿಎಂಟಿಸಿ ಅಧಿಕಾರಿಗಳನ್ನು ಪ್ರಶ್ನಿಸಿದಾಗ, ನಮಗೆ ಬಸ್ಸು ಪದೇ ಪದೇ ಸ್ಥಗಿತಗೊಳ್ಳುವ ಬಗ್ಗೆ ಅರಿವಿದೆ.ಈ ಹಣಕಾಸು ವರ್ಷಕ್ಕೆ ಸುಮಾರು ಸಾವಿರದ 700 ಹೊಸ ಬಸ್ಸುಗಳನ್ನು ತರುವ ಯೋಜನೆಯಿದೆ ಎನ್ನುತ್ತಾರೆ. ಆದರೆ ಇನ್ನೊಬ್ಬ ಬಿಎಂಟಿಸಿ ಅಧಿಕಾರಿ, ಹೊಸ ಬಸ್ಸುಗಳನ್ನು ಬಿಡುಗಡೆ ಮಾಡುವಲ್ಲಿ ವಿಳಂಬವಾಗುವುದರಿಂದ ಸಾರಿಗೆ ಇಲಾಖೆಯಿಂದ ಫಿಟ್ನೆಸ್ ಪ್ರಮಾಣಪತ್ರ ಪಡೆಯಲು ಬೇರೆ ದಾರಿಯಿಲ್ಲದೆ ಅನಿವಾರ್ಯವಾಗಿ ಹಳೆ ಬಸ್ಸುಗಳನ್ನೇ ಮುಂದುವರಿಸಬೇಕಾಗಿದೆ ಎಂದರು.
ಹಳೆ ಬಸ್ಸುಗಳ ನಿರ್ವಹಣಾ ವೆಚ್ಚ ತುಂಬಾ ಜಾಸ್ತಿಯಾಗಿದೆ. ಬಸ್ಸುಗಳು ಕೆಟ್ಟು ಹೋಗುವುದರಿಂದ ಕೆಲವು ಬಸ್ಸುಗಳ ವೇಳಾಪಟ್ಟಿಯನ್ನು ರದ್ದುಪಡಿಸಬೇಕಾಗಿ ಬಂದಿದೆ. ಇದರಿಂದ ನಿಗದಿತ ಸಮಯಕ್ಕೆ ಬಸ್ ಸಂಚಾರದಲ್ಲಿ ವ್ಯತ್ಯಯವುಂಟಾಗಿ ಇಲಾಖೆಗೆ ಬರುವ ಆದಾಯದ ಮೇಲೆಯೂ ಹೊಡೆತ ಬೀಳುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ.