ರಾಜ್ಯ

2008 ಬೆಂಗಳೂರು ಸ್ಫೋಟ ಪ್ರಕರಣ: ಸಾಕ್ಷಿಧಾರನಿಗೆ ಕೇರಳದಿಂದ ಬೆದರಿಕೆ ಕರೆ

Manjula VN

ಮಡಿಕೇರಿ: 2008ರ ಬೆಂಗಳೂರು ಸ್ಫೋಟ ಪ್ರಕರಣ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಪ್ರಕರಣ ಸಂಬಂಧ ಪ್ರಮುಖ ಸಾಕ್ಷಿಧಾರನಿಗೆ ಕೇರಳದಿಂದ ಬೆದರಿಕೆ ಕರೆ ಬಂದಿರುವುದಾಗಿ ಬುಧವಾರ ತಿಳಿದುಬಂದಿದೆ.

ಪ್ರಕರಣದ ಪ್ರಮುಖ ಸಾಕ್ಷಿಧಾರನೆಂದು ಹೇಳಲಾಗುತ್ತಿರುವ ಐಗೂರ್ ಪ್ರಭಾಕರ್ ಅವರಿಗೆ ಕೇರಳದಿಂದ ಅನಾಮಧೇಯ ಕರೆಯೊಂದು ಬರುತ್ತಿದ್ದು, ಬೆದರಿಕೆ ಹಾಕುತ್ತಿದ್ದಾರೆಂದು ಹೇಳಲಾಗುತ್ತಿದೆ.

ಪ್ರಭಾಕರ್ ಅವರ ಹೇಳಿಕೆಯಂತೆ ಪೊಲೀಸರು ಇದೀಗ ಎಫ್ಐಆರ್ ದಾಖಲಿಸಿಕೊಂಡಿದ್ದು, ಕಾಲ್ ರೆಕಾರ್ಡ್ ನ್ನು ಪರಿಶೀಲಿಸಿ ತನಿಖೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

ನಗರದಲ್ಲಿ ನಡೆದ ಸ್ಫೋಟ ಪ್ರಕರಣದಲ್ಲಿ ತಡಿಯಂಡವೀಡ್ ನಜೀರ್ ಪ್ರಮುಖ ಆರೋಪಿಯಾಗಿದ್ದು, ಈತ ಮೂಲತಃ ಕೇರಳ ಮೂಲದವನಾಗಿದ್ದಾನೆ. ಪ್ರಕರಣ ಸಂಬಂಧ ಬಂಧನಕ್ಕೀಡಾಗಿದ್ದ ತಡಿಯಂಡವೀಡ್ ನನ್ನು ಪೊಲೀಸರು ವಿಚಾರಣೆಗೊಳಪಡಿದ್ದರು. ಈ ವೇಳೆ ಸೋಮವಾರಪೇಟೆ ತಾಲೂಕಿನ ಹೊಸತೋಟದಲ್ಲಿ ಈತ ತರಬೇತಿ ಪಡೆದುಕೊಂಡಿರುವ ವಿಚಾರ ಬೆಳಕಿಗೆ ಬಂದಿತ್ತು. ಇದೇ ಸ್ಥಳಕ್ಕೆ ಮದನಿ ಕೂಡ ಭೇಟಿ ನೀಡುತ್ತಿದ್ದ ಎಂಬ ಮಹತ್ವದ ಸುಳಿವು ಪೊಲೀಸರಿಗೆ ಸಿಕ್ಕಿತ್ತು.

ಇದಲ್ಲದೆ, ತಡಿಯಂಡವೀಡ್ ಇಸ್ಲಾಮಿಕ್ ಸೇವಕ್ ಸಂಘವನ್ನು ಹುಟ್ಟುಹಾಕಿದ್ದು, ಕರ್ನಾಟಕದಲ್ಲಿ ವಿಧ್ವಂಸಕ ಕೃತ್ಯವೆಸಗುವ ಸಲುವಾಗಿ ಯುವಕರನ್ನು ಸೇರ್ಪಡೆಗೊಳಿಸುವ ಯತ್ನ ನಡೆಸಿದ್ದ.

ಸರಣಿ ಸ್ಫೋಟ ಪ್ರಕರಣ ಸಂಬಂಧ ಐಗೂರು ಪ್ರಭಾಕರ್, ಯೋಗಾನಂದ ಮತ್ತು ರಮೇಶ್ ಎಂಬುವವರು ಪ್ರಮುಖ ಸಾಕ್ಷಿಧಾರರಾಗಿದ್ದಾರೆ. ಸ್ಫೋಟದ ಹಿಂದೆ ತಡಿಯಂಡವೀಡ್ ಇದ್ದು, ಈತನನ್ನು ಭೇಟಿಯಾಗಲು ಹೊಸತೋಟಕ್ಕೆ ಮದನಿ ಬರುತ್ತಿದ್ದ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಪ್ರಸ್ತುತ ಸ್ಫೋಟ ಪ್ರಕರಣದ ವಿಚಾರಣೆ ಬೆಂಗಳೂರಿನ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ವಿಚಾರಣೆ ವೇಳೆ ಸಾಕ್ಷ್ಯ ನುಡಿಯದಂತೆ ಪ್ರಮುಖ ಸಾಕ್ಷಿಧಾರರಾಗಿರುವ ಐಗೂರು ಪ್ರಭಾಕರ್ ಅವರಿಗೆ ಬೆದರಿಕೆಯೊಡ್ಡಲಾಗುತ್ತಿದೆ.

2008 ರ ಜುಲೈ 25 ರಂದು ನಗರದಲ್ಲಿ ನಡೆದ ಸರಣಿ ಸ್ಫೋಟದಲ್ಲಿ ಇಬ್ಬರು ಸಾವನ್ನಪ್ಪಿ, 20 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

SCROLL FOR NEXT