ಮಂಗಳೂರು: ರಾಜ್ಯದ ಪ್ರಪ್ರಥಮ ರಾಷ್ಟ್ರ ಕವಿ ಎಂಬ ಖ್ಯಾತಿಗೆ ಪಾತ್ರರಾಗಿರುವ ದಿವಂಗತ ಗೋವಿಂದ ಪೈ ಅವರ ಹುಟ್ಟೂರು ಮಂಜೇಶ್ವರದಲ್ಲಿ ನಡೆಯುತ್ತಿರುವ ಅವರ ಮನೆ ನವೀಕರಣ ಕಾರ್ಯ ಅಂತಿಮ ಹಂತಕ್ಕೆ ಬಂದು ತಲುಪಿದೆ.
ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರದಲ್ಲಿರುವ ಗೋವಿಂದ ಪೈ ಅವರ ಮನೆ ನವೀಕರಣ ಯೋಜನೆ ಡಿಸೆಂಬರ್ ತಿಂಗಳ ಕೊನೆಯೊಳಗೆ ಪೂರ್ತಿಯಾಗಲಿದೆ. ಸುಮಾರು 5 ಕೋಟಿ ರು ವೆಚ್ಚದಲ್ಲಿ ಕೇರಳ ಮತ್ತು ಕರ್ನಾಟಕ ಸರ್ಕಾರಗಳು ಈ ಸ್ಥಳವನ್ನು ಅಭಿವೃದ್ಧಿ ಪಡಿಸಿದೆ.
ಈ ಸ್ಮಾರಕ ಒಮ್ಮೆ ಪೂರ್ಣವಾದರೇ, ಎರಡು ರಾಜ್ಯಗಳ ನಡುವಿನ ಇದೊಂದು ಸಾಹಿತ್ಯ ಮತ್ತು ಸಂಸ್ಕೃತಿಯ ಕೊಂಡಿಯಾಗಿರುತ್ತದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಟ್ರಸ್ಟ್ ನ ಅಧ್ಯಕ್ಷರಾಗಿರುವ ವೀರಪ್ಪ ಮೊಯ್ಲಿ ತಿಳಿಸಿದ್ದಾರೆ.
ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ವೀರಪ್ಪ ಮೊಯ್ಲಿ, 1963 ರಲ್ಲಿ ಗೋವಿಂದ ಪೈ ಅವರ ನಿಧನದ ನಂತರ,ಅವರು ವಾಸವಿದ್ದ ಮನೆಯನ್ನು ಸರ್ಕಾರ ತನ್ನ ವಶಕ್ಕೆ ತೆಗೆದು ಕೊಂಡಿತು. 2008 ರಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಟ್ರಸ್ಟ್ ರಚನೆಯಾಯಿತು.
ಗಿಳಿವಿಂಡು ಯೋಜನೆ ಯಡಿ ಗೋವಿಂದ ಪೈ ಅವರ ಮನೆಯನ್ನು ಸ್ಮಾರಕ ಹಾಗೂ ಸಂಗ್ರಹಾಲಯವಾಗಿ ನವೀಕರಿಸಲು ತೀರ್ಮಾನಿಸಲಾಯಿತು. ಮ್ಯೂಸಿಯಂ ನಲ್ಲಿ ಗೋವಿಂದ ಪೈ ಅವರು ಸಂಗ್ರಹಿಸಿದ್ದ ಅಪಾರ ಪ್ರಮಾಣದ ಪುಸ್ತಕಗಳಿವೆ, ಸುಮಾರು 1.5 ಕೋಟಿ ರು ವೆಚ್ಚದಲ್ಲಿ ಭಾವನಿಕಾ ಎಂಬ ಸಭಾಂಗಣ ನಿರ್ಮಿಸಲಾಗಿದೆ. ವೈಶಾಕಿ, ಸಾಕೇತ ಮತ್ತು ಆನಂದ ಅತಿಥಿಗೃಹ, ಓಪನ್ ಥಿಯೇಟಕ್ ಸೇರಿದಂತೆ ಹಲವು ಸೌಲಭ್ಯಗಳನ್ನೊಳಗೊಂಡ ಸ್ಮಾರಕ ನಿರ್ಮಿಸಲಾಗಿದೆ ಎಂದು ಅವರು ತಿಳಿಸಿದ್ದಾಕೆ.
ಒಎನ್ ಜಿಸಿ, ಎಂಆರ್ ಪಿಎಲ್ ಮತ್ತು ಬಿಪಿಸಿಎಲ್ ಕಂಪನಿಗಳು ಅನುದಾನ ಬಿಡುಗಡೆ ಗೊಂಡ ನಂತರ ಸ್ಮಾರಕದ ನವೀಕರಣ ಕಾರ್ಯ ಪೂರ್ಣಗೊಂಡಿತು ಎಂದು ಅವರು ತಿಳಿಸಿದ್ದಾರೆ.