ರಾಜ್ಯ

ಕೆಸರಿನಲ್ಲಿ ಸಿಲುಕಿದ್ದ ಮತ್ತೊಂದು ಆನೆ ಸಾವು!

Srinivas Rao BV
ಮೈಸೂರು: ಇತ್ತ ರಾಮನಗರದಲ್ಲಿ ಕಾಡಾನೆ ಸಿದ್ದ ಮೃತಪಟ್ಟಿದ್ದರೆ, ಕೆಸರಲ್ಲಿ ಸತತ ಎರಡು ದಿನಗಳ ಕಾಲ ಸಿಲುಕಿದ್ದ ಆನೆಯೊಂದು ಮೃತಪಟ್ಟಿರುವ ಘಟನೆ ಮೈಸೂರಿನ ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆಯಲ್ಲಿ ನಡೆದಿದೆ.
ಕೆಸರಿನಲ್ಲಿ ಸಿಲುಕಿಕೊಂಡಿದ್ದ ಆನೆಯ ಚಿಕಿತ್ಸೆಗಾಗಿ ಅರಣ್ಯ ಅಧಿಕಾರಿಗಳು ತುಮಕೂರಿನಿಂದ ವೈದ್ಯರನ್ನು ಕರೆಸಲಾಗಿತ್ತಾದರೂ ಆನೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಎಸಿಎಫ್ ಸೋಮಪ್ಪ ಹಾಗೂ ಆರ್ ಎಫ್ಒ ಗಿರೀಶ್ ಆನೆ ಕೆಸರಿನಲ್ಲಿ ಸಿಲುಕಿದ್ದ ಬಗ್ಗೆ ಮಾಹಿತಿ ನೀಡಿದ್ದಾರೆ. 
ಆನೆಯನ್ನು ಕೆಸರಿನಿಂದ ಹೊರತೆಗೆಯಲು ಸಹಾಯಕವಾಗುವ ರೀತಿಯಲ್ಲಿ ಪಟಾಕಿ ಸಿಡಿಸಲು ಸಿಬ್ಬಂದಿಗಳಿಗೆ ಸೂಚಿಸಲಾಗಿತ್ತು. ಪಟಾಕಿ ಸಿಡಿಸಿದರೆ ಭಯಗೊಳ್ಳುವ ಆನೆ ಕೆಸರಿನಿಂದ ಹೊರಬರಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಯಾವುದೇ ಪ್ರಯತ್ನಗಳೂ ಆನೆಯನ್ನು ಸುರಕ್ಷಿತವಾಗಿ ಕೆಸರಿನಿಂದ ಹೊರತರಲು ಸಾಧ್ಯವಾಗಲಿಲ್ಲ. 
ಕಾಡಾನೆಯ ವರ್ತನೆಯ ಬಗ್ಗೆ ಗೊಂದಲಗಳಿದ್ದ ಹಿನ್ನೆಲೆಯಲ್ಲಿ ಯಾವುದೇ ಅರಣ್ಯ ಅಧಿಕಾರಿಗಳು ಆನೆಯ ಹತ್ತಿರವೂ ಹೋಗಲಿಲ್ಲ. ಆನೆಯ ರಕ್ಷಣಾ ಕಾರ್ಯಾಚರಣೆಯ ಭಾಗವಾಗಿ ದಸರಾ ಆನೆಗಳನ್ನು ಕರೆತರಲು ನಿರ್ಧರಿಸಲಾಗಿತ್ತು, ಆದರೆ ಆ ವೇಳೆಗೆ ಆನೆ ಮೃತಪಟ್ಟಿತ್ತು ಎಂದು ತಿಳಿದುಬಂದಿದೆ. 
SCROLL FOR NEXT