ರಾಜ್ಯ

ಡಿಸೆಂಬರ್ 17ರವರೆಗೆ ಹವಾಲ ಏಜೆಂಟ್ ವೀರೇಂದ್ರಗೆ ನ್ಯಾಯಾಂಗ ಬಂಧನ

Srinivasamurthy VN

ಬೆಂಗಳೂರು: ಕಳೆದ ಶನಿವಾರ ಬಂಧನಕ್ಕೀಡಾಗಿದ್ದ ಹವಾಲ ಏಜೆಂಟ್ ವೀರೇಂದ್ರ ಅವರನ್ನು ಡಿಸೆಂಬರ್ 17ರವರೆಗೂ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಕಳೆದ ಡಿಸೆಂಬರ್ 10 ಶನಿವಾರದಂದು ಬಂಧನಕ್ಕೀಡಾಗಿದ್ದ ವೀರೇಂದ್ರ ಅವರ ಬಂಧನ ಅವಧಿ ಮುಕ್ತಾಯಗೊಂಡ ಹಿನ್ನಲೆಯಲ್ಲಿ ಅವರನ್ನು ಇಂದು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿತ್ತು. ಇಂದು ನ್ಯಾಯಾಧೀಶರು  ವೀರೇಂದ್ರ ಅವರಿಗೆ ಡಿಸೆಂಬರ್ 17ರವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

ಡಿಸೆಂಬರ್ 10ರಂದು ಚಿತ್ರದುರ್ಗದ ಚಳ್ಳಕೆರೆಯ ಹವಾಲಾ ಏಜೆಂಟ್‌, ಸ್ಥಳೀಯ ಜೆಡಿಎಸ್‌ ಮುಖಂಡ ಕೆ.ಸಿ. ವೀರೇಂದ್ರ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದರು. ವೀರೇಂದ್ರ ಅವರ ಮನೆ ಮತ್ತು ಗೋವಾದಲ್ಲಿರುವ ಅವರ  ಮಾಲೀಕತ್ವದ ಕ್ಯಾಸಿನೊ ಸೇರಿದಂತೆ 15ಕ್ಕೂ ಹೆಚ್ಚು ಕಡೆಗಳಲ್ಲಿ ಕಳೆದ ಶನಿವಾರ ದಾಳಿ ನಡೆಸಿದ್ದ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು, ವೀರೇಂದ್ರ ಅವರ ಸ್ನಾನದ ಮನೆಯಿಂದ ರು. 2 ಸಾವಿರ ಮುಖಬೆಲೆಯ ರು. 5.7  ಕೋಟಿ, 28 ಕೆ.ಜಿ ಚಿನ್ನದ ಬಿಸ್ಕೆಟ್ ಗಳು‌, 4 ಕೆ.ಜಿ ಚಿನ್ನಾಭರಣ, ರು. 100 ಮತ್ತು ರು. 2000 ಮುಖಬೆಲೆಯ ರು.90 ಲಕ್ಷ ನಗದು ವಶಕ್ಕೆ ಪಡೆದಿದ್ದರು.

ವೀರೇಂದ್ರ ಅವರು ತಮ್ಮ ರಹಸ್ಯ ಲಾಕರ್ ಕಾಣದಂತೆ ಅದರ ಮೇಲೆ ಟೈಲ್ಸ್‌ ಅಳವಡಿಸಿದ್ದರು. ಆದರೆ ರಹಸ್ಯ ಮಾಹಿತಿ ಆಧರಿಸಿ ದಾಳಿ ನಡೆಸಿದ ಅಧಿಕಾರಿಗಳು ದಾಳಿ ಅಲ್ಲಿದ್ದ ಅಪಾರ ಪ್ರಮಾಣದ ನಗದನ್ನು  ವಶಪಡಿಸಿಕೊಂಡಿದ್ದರು. ವೀರೇಂದ್ರ ಅವರ ಸಹೋದರರಾದ ಕೆ.ಸಿ. ತಿಪ್ಪೇಸ್ವಾಮಿ ಮತ್ತು ಕೆ.ಸಿ. ನಾಗರಾಜ ಅವರ ಮನೆಗಳ ಮೇಲೂ ಐ.ಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.  ಪಿಎಲ್‌ಡಿ ಬ್ಯಾಂಕಿನ ಮಾಜಿ ಅಧ್ಯಕ್ಷರೂ ಆಗಿರುವ ವೀರೇಂದ್ರ ಅವರು ಇತ್ತೀಚೆಗೆ ಕ್ಯಾಸಿನೊ ಮತ್ತು ಕ್ರಿಕೆಟ್‌ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿಸಿಕೊಂಡಿದ್ದರು ಎಂದು ಹೇಳಲಾಗಿದೆ.

ಕೆಲ ಬ್ಯಾಂಕ್‌ ಅಧಿಕಾರಿಗಳು ಮತ್ತು ಮಧ್ಯವರ್ತಿಗಳ ಜೊತೆ ಸೇರಿ ವೀರೇಂದ್ರ ಅವರು ಹಳೆ ನೋಟುಗಳನ್ನು ಬದಲಾಯಿಸಿದ್ದರು ಎಂದು ಮೂಲಗಳು ತಿಳಿಸಿವೆ. ಇದೇ ಪ್ರಕರಣಕ್ಕೆ ಸಂಬಂಧಿಸಿ ಕೊಟಕ್‌ ಮಹೀಂದ್ರ ಬ್ಯಾಂಕ್‌,  ಐಸಿಐಸಿಐ, ಎಸ್‌ಬಿಐ ಮತ್ತು ಎಸ್‌ಬಿಎಂ ಅಧಿಕಾರಿಗಳ ವಿರುದ್ಧವೂ ಎಫ್ಐಆರ್ ದಾಖಲಿಸಲಾಗಿದೆ.

SCROLL FOR NEXT