ಹುಬ್ಬಳ್ಳಿ: ಅಧಿಕ ಮೌಲ್ಯದ ನೋಟುಗಳ ಅಪಮೌಲ್ಯದ ನಂತರ ಬ್ಯಾಂಕ್ ಗಳ ಮುಂದೆ ಸಾಲುಗಟ್ಟಲೆ ಸರದಿಯಲ್ಲಿ ಗಂಟೆಗಟ್ಟಲೆ ನಿಲ್ಲುವುದು ಕರ್ನಾಟಕದ ಹುಬ್ಬಳ್ಳಿ ಮತ್ತು ಕಲ್ಗಟಗಿ ತಾಲ್ಲೂಕಿನ ಜನರಿಗೆ ದಿನಚರಿಯಾಗಿಬಿಟ್ಟಿದೆ.
ಇಲ್ಲಿನ ಅದರ್ಗುಂಚಿ ಗ್ರಾಮದಲ್ಲಿನ ಜನರಿಗೆ ನಗದು ಹಣದ ಕೊರತೆಯಿಂದಾಗಿ ಇಲ್ಲಿನ ಗ್ರಾಮಸ್ಥರು 8-10 ಕಿಲೋ ಮೀಟರ್ ನಡೆದುಕೊಂಡು ಹುಬ್ಬಳ್ಳಿಗೆ ಹೋಗುತ್ತಾರೆ. ಅಲ್ಲಿನ ಬ್ಯಾಂಕಿನಲ್ಲಿ ಸರದಿಯಲ್ಲಿ ನಿಂತು ಹಣ ಪಡೆದುಕೊಂಡು ಬರುತ್ತಾರೆ. ಅದರ್ಗುಂಚಿ ಗ್ರಾಮದಲ್ಲಿರುವ ಒಂದೇ ಒಂದು ಎಟಿಎಂ ನವೆಂಬರ್ 8ರಿಂದ ಕಾರ್ಯ ಸ್ಥಗಿತಗೊಂಡಿತೆ.
ಗ್ರಾಮದಲ್ಲಿರುವ ಒಂದೇ ಒಂದು ಬ್ಯಾಂಕು ಕಾರ್ಪೊರೇಷನ್ ಬ್ಯಾಂಕ್ ನಲ್ಲಿ ಸುಮಾರು 6 ಸಾವಿರ ಠೇವಣಿಗಳಿವೆ. ಸುತ್ತಮುತ್ತಲ ರಾಮನಲ್, ಗಂಗಿಹಾಲ್, ಚವರ್ಗುಡ್ಡ, ಚನ್ನಾಪುರ್ ಮತ್ತು ತಿಮ್ಮಸಾಗರ್ ನ ಗ್ರಾಮಸ್ಥರು ವ್ಯವಹರಿಸುವ ಬ್ಯಾಂಕ್ ಇದು. ಪ್ರತಿದಿನ ಸುಮಾರು 200 ಮಂದಿ ಗ್ರಾಮಸ್ಥರು ಈ ಬ್ಯಾಂಕಿಗೆ ತಮ್ಮ ವ್ಯವಹಾರಕ್ಕೆ ಭೇಟಿ ನೀಡುತ್ತಾರೆ.
ಈ ಕುರಿತು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಪ್ರತಿನಿಧಿ ಕಾರ್ಪೊರೇಶನ್ ಬ್ಯಾಂಕಿಗೆ ಭೇಟಿ ಕೊಟ್ಟಾಗ, ಅಲ್ಲಿನ ಜನರು ಗಂಟೆಗಟ್ಟಲೆ ಸರದಿಯಲ್ಲಿ ನಿಂತಿರುವುದು ಕಂಡುಬಂತು. ನಾನಿಲ್ಲಿ ನನ್ನ ಖಾತೆಯಿಂದ 4 ಸಾವಿರ ರೂಪಾಯಿ ಪಡೆಯಲು ನಿಂತಿದ್ದೇನೆ. ಆದರೆ ಈ ಜನರ ಸಾಲು ನೋಡಿದರೆ ನಿಜಕ್ಕೂ ತಲೆನೋವಾಗುತ್ತದೆ ಎನ್ನುತ್ತಾರೆ ಗ್ರಾಮದಲ್ಲಿ ಅಕ್ಕಿ ಗಿರಣಿ ನಡೆಸುತ್ತಿರುವ ಮುತ್ತು ಇಟಿಗಟ್ಟಿ.
ಆದರೆ ಬ್ಯಾಂಕಿನ ವ್ಯವಸ್ಥಾಪಕಿ ಮಾಧವಿ ಹೇಳುವ ಪ್ರಕಾರ ಬ್ಯಾಂಕಿನಲ್ಲಿ ಹಣಕ್ಕೆ ಯಾವುದೇ ಕೊರತೆ ಇಲ್ಲ ಎನ್ನುತ್ತಾರೆ. ಎಟಿಎಂ ಬಗ್ಗೆ ಕೇಳಿದರೆ, ಅದು ರಿಪೇರಿಯಲ್ಲಿದೆ ಎಂದರು.
ಬ್ಯಾಂಕಿನಲ್ಲಿ ಹಣದ ಕೊರತೆ: ಮಿಶ್ರಿಕೋಟಿ ಗ್ರಾಮದ ಪರಿಸ್ಥಿತಿ ಕೂಡ ಇದಕ್ಕಿಂತ ಭಿನ್ನವಾಗೇನು ಇಲ್ಲ. ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕಿನಲ್ಲಿ ಹಣ ಎಂದು ಬೋರ್ಡ್ ಹಾಕಲಾಗಿದೆ. ಇಲ್ಲಿನ ಸಹಾಯಕ ವ್ಯವಸ್ಥಾಪಕ ಎಸ್.ಬಿ.ಕುಲಕರ್ಣಿಯವರನ್ನು ವಿಚಾರಿಸಿದರೆ, ನೋಟುಗಳ ನಿಷೇಧವಾದ ದಿನದಿಂದ ಈ ಬೋರ್ಡ್ ಹಾಕಿದ್ದೇವೆ. ಬ್ಯಾಂಕಿಗೆ ಹಣ ಬರುತ್ತಿಲ್ಲ ಎನ್ನುತ್ತಿದ್ದಾರೆ. ಇಲ್ಲಿನ ಗ್ರಾಮಸ್ಥರು ಹಣ ಸಿಗದೆ ಪರದಾಡುತ್ತಿದ್ದಾರೆ.
'' ವಿಜಯ ಬ್ಯಾಂಕಿನ ಕರೆನ್ಸಿ ಚೆಸ್ಟ್ ನಿಂದ ನಾವು ಹಣ ಪಡೆಯುತ್ತಿದ್ದೆವು. ಆದರೆ ನೋಟುಗಳ ಅಮಾನ್ಯತೆ ನಂತರ ನಮಗೆ ಅಲ್ಲಿಂದ ನಗದು ಸಿಗುತ್ತಿಲ್ಲ. ಪ್ರತಿದಿನ ನಮ್ಮ ಬ್ಯಾಂಕಿನ ಸಿಬ್ಬಂದಿ ಕುಮಟಾ ಅಥವಾ ಶಿರಸಿಗೆ ಹೋಗಿ 3 ಲಕ್ಷ ರೂಪಾಯಿ ನಗದು ಪಡೆದು ಬರಬೇಕಾಗುತ್ತದೆ. ಬ್ಯಾಂಕಿನಲ್ಲಿ ಸುಮಾರು 10 ಸಾವಿರ ಠೇವಣಿಗಳಿದ್ದು ಪ್ರತಿದಿನ ಸುಮಾರು 15 ಲಕ್ಷ ರೂಪಾಯಿ ಅಗತ್ಯವಿದೆ'' ಎನ್ನುತ್ತಾರೆ.
ಬ್ಯಾಂಕಿನಿಂದ ನಗದು ಬೇಕೆಂದರೆ ಬೆಳಗ್ಗೆ 10 ಗಂಟೆಯೊಳಗೆ ಹೋಗಬೇಕು. ಒಂದರ್ಧ ಗಂಟೆ ತಡವಾದರೂ ಕೂಡ ಹಣ ಸಿಗುವುದಿಲ್ಲ. ನಮ್ಮ ಮನೆಯಲ್ಲಿ ನಾಮಕರಣ ಕಾರ್ಯಕ್ರಮವಿದೆ. ಹಣದ ಅಗತ್ಯವಿದೆ. ಆದರೆ ಹಣ ಸಿಗುತ್ತದೋ ಇಲ್ಲವೋ ಗೊತ್ತಿಲ್ಲ ಎನ್ನುತ್ತಾರೆ ವೀರಪ್ಪ ಶೆಟ್ಟನ್ನವರ್ ಎಂಬ ಗ್ರಾಮಸ್ಥರು.