ಚಕ್ಕೆರೆ ಗ್ರಾಮದಲ್ಲಿರುವ ಕಾರ್ಪೊರೇಶನ್ ಬ್ಯಾಂಕ್ ಶಾಖೆ
ರಾಮನಗರ: ಚನ್ನಪಟ್ಟಣದಿಂದ 8 ಕಿಲೋ ಮೀಟರ್ ದೂರದಲ್ಲಿರುವ ಕಾರ್ಪೊರೇಶನ್ ಬ್ಯಾಂಕ್ 4 ಗ್ರಾಮಗಳಿಗೆ ಆಧಾರವಾಗಿದ್ದು ಮಧ್ಯಾಹ್ನದ ವೇಳೆಗೆ ಬಾಗಿಲು ಮುಚ್ಚುತ್ತದೆ. ಹತ್ತಿರದ ಎಟಿಎಂ ಅಧಿಕ ಮೌಲ್ಯದ ನೋಟುಗಳ ನಿಷೇಧದ ನಂತರ ಮುಚ್ಚಲಾಗಿದೆ. ಬ್ಯಾಂಕ್ ನೌಕರರು ಬಂದು ಗೇಟನ್ನು ತೆರೆದಾಗ ಗ್ರಾಮಸ್ಥರು ಅವರ ಸುತ್ತ ಹಣಕ್ಕಾಗಿ ಸುತ್ತಿವರಿಯುತ್ತಾರೆ. ತಮಗೆ ಹಣ ಕೊಡಿ, ಸಾಲ ಮಂಜೂರಾತಿ ಮಾಡಿಸಿ ಎಂದು ದುಂಬಾಲು ಬೀಳುತ್ತಾರೆ.
ಗ್ರಾಮದ ಮಹಿಳೆಯೊಬ್ಬರಿಗೆ ಸಾಲ ಮಂಜೂರು ಮಾಡಿ ಕೊಡುತ್ತೇನೆಂದು ಭರವಸೆ ನೀಡಿದ್ದ ಸ್ಥಳೀಯ ಬ್ಯಾಂಕಿನ ಮ್ಯಾನೇಜರ್ ಸತೀಶ್ ಕುಮಾರ್ ಅವರ ಬಳಿ ಬಂದು ನಿತ್ಯ ಆ ಮಹಿಳೆ ಒತ್ತಾಯಿಸುತ್ತಿದ್ದಾರಂತೆ. ಹೀಗೆ ಅನೇಕರು ನೋಟು ಅಪಮೌಲ್ಯಗೊಂಡ ನಂತರ ಬ್ಯಾಂಕಿನತ್ತ ದಿನನಿತ್ಯ ಬರುತ್ತಿದ್ದಾರೆ.
ಬ್ಯಾಂಕಿನಲ್ಲಿ ಹಣ ಠೇವಣಿಯಿಟ್ಟವರಿಗೆ ಹೊಸ ನೋಟುಗಳು ಬೇಕು. ಆದರೆ ನಮ್ಮ ಶಾಖೆಯಲ್ಲಿ ಅಷ್ಟೊಂದು ಹಣವಿಲ್ಲ. 13ರಿಂದ 14 ಲಕ್ಷದವರೆಗೆ ಹಣಕ್ಕೆ ಗ್ರಾಮಸ್ಥರ ಬೇಡಿಕೆಯಿದೆ. ಆದರೆ ನಮ್ಮ ಬಳಿ ಕೇವಲ 4 ಲಕ್ಷ ಸಿಗುತ್ತದೆಯಷ್ಟೆ ಎನ್ನುತ್ತಾರೆ.
ನವೆಂಬರ್ 8ರಂದು ನೋಟು ಅಪಮೌಲ್ಯಗೊಂಡ ನಂತರ ಬ್ಯಾಂಕಿನ ಮೂರೂವರೆ ಸಾವಿರ ಗ್ರಾಮಸ್ಥರು 30,000 ರೂಪಾಯಿ ಹಣ ಠೇವಣಿಯಿಟ್ಟಿದ್ದಾರೆ. ಆರಂಭದಲ್ಲಿ ಹಣ ಠೇವಣಿಯಿಡಲು ಜನದಟ್ಟಣೆಯಿರುತ್ತಿತ್ತು. ಆದರೆ ಈಗ ಹಣ ಹಿಂಪಡೆಯಲು ಜನದಟ್ಟಣೆಯಿದೆ.
ಚಕ್ಕರೆಯಲ್ಲಿ ಸಣ್ಣ ಜಮೀನು ಹೊಂದಿರುವ ರಾಮಣ್ಣ ಎಂಬ ಕೂಲಿ ಕಾರ್ಮಿಕ ಹೇಳುವ ಪ್ರಕಾರ, ಅವರಿಗೆ ಯಾವುದೇ ಸಮಸ್ಯೆಯುಂಟಾಗಬಹುದು ಎಂದು ಭಾವಿಸಿರಲಿಲ್ಲವಂತೆ. ಹಳೆ ನೋಟುಗಳನ್ನು ತೆಗೆದುಕೊಂಡು ಹೊಸ ನೋಟು ಕೊಡುತ್ತಾರೆ ಎಂದು ನಾವು ಭಾವಿಸಿದ್ದೆವು. ಆದರೆ ನೋಟುಗಳ ನಿಷೇಧದ ನಂತರ ಕಾರ್ಮಿಕರಿಗೆ ನೀಡಲು ನಮ್ಮ ಬಳಿ ದುಡ್ಡು ಇಲ್ಲ, ಮತ್ತು ತಮ್ಮಲ್ಲಿ ದುಡ್ಡಿಲ್ಲದೆ ಯಾರೂ ನಮ್ಮನ್ನು ಕೆಲಸಕ್ಕೆ ಬರಲು ಹೇಳುವುದಿಲ್ಲ ಎನ್ನುತ್ತಾರೆ.
ಕೃಷಿ ಸಾಲದ ಸಮಸ್ಯೆ: ತಮಗೆ ಮಂಜೂರಾದ ಕೃಷಿ ಸಾಲ ಇನ್ನೂ ಸಿಗದಿರುವ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾರೆ ಚನ್ನಪಟ್ಟಣ ತಾಲ್ಲೂಕಿನ ಹೊಸಹಳ್ಳಿ ರೈತ ಜಿ.ಎಲ್.ಕೃಷ್ಣ. ಅವರಿದೆ ಐದೂವರೆ ಲಕ್ಷ ಕೃಷಿ ಸಾಲ ಮಂಜೂರಾಗಿತ್ತು. ಆದರೆ ವಾರಕ್ಕೆ ಕೇವಲ 24 ಸಾವಿರ ರೂಪಾಯಿ ಮಾತ್ರ ತೆಗೆದುಕೊಳ್ಳಬಹುದೆಂದು ಬ್ಯಾಂಕ್ ಹೇಳಿತ್ತಂತೆ.
ಚೆಕ್ ಬರೆದುಕೊಡುವಂತೆ ಹೇಳಿದರು. ಆದರೆ ನನ್ನಲ್ಲಿ ಚೆಕ್ ಬುಕ್ ಇಲ್ಲವೆಂದು ಹೇಳಿದೆ. ಇದೀಗ ಚೆಕ್ ಬುಕ್ ಗೆ ಅರ್ಜಿ ಹಾಕಿ ಮೂರು ವಾರಗಳಲ್ಲಿ ಕೊಡುತ್ತೇವೆ ಎಂದು ಬ್ಯಾಂಕ್ ಸಿಬ್ಬಂದಿ ಹೇಳುತ್ತಾರೆ ಎನ್ನುತ್ತಾರೆ ಕೃಷ್ಣ.
ಮತ್ತೊಬ್ಬ ವೆಂಕಟಪ್ಪ ಎಂಬ ರೈತರದ್ದು ಇನ್ನೊಂದು ಸಮಸ್ಯೆ. ಪ್ರತಿ ತಿಂಗಳು ನಾನು ಸುಮಾರು 30,000 ರೂಪಾಯಿ ಮೌಲ್ಯದ ಹಾಲನ್ನು ಸ್ಥಳೀಯ ಹಾಲು ಉತ್ಪಾದಕರ ಸಹಕಾರ ಸೊಸೈಟಿಗೆ ಮಾರಾಟ ಮಾಡುತ್ತೇನೆ. ಇದೀಗ ಬ್ಯಾಂಕಿನಲ್ಲಿ ನಗದು ಹಣ ಇಲ್ಲದಿರುವುದರಿಂದ ಕಳೆದ ತಿಂಗಳು ನನಗೆ ಹಣವೇ ಸಿಕ್ಕಿಲ್ಲ. ನನ್ನ ಠೇವಣಿಗೆ ಹಣ ನಮೂದಾದರೆ 15,000 ರೂಪಾಯಿ ಪಡೆಯಲು ನಾಲ್ಕು ದಿನ ಬ್ಯಾಂಕಿನ ಮುಂದೆ ಹೋಗಿ ನಿಂತುಕೊಳ್ಳಬೇಕು ಎಂದು ಅವಲತ್ತುಕೊಂಡರು.
ಪೌಲಿದೊಡ್ಡಿ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಸರಸ್ವತಿ, ಸ್ವಸಹಾಯ ಸಂಘಗಳಲ್ಲಿ ಇಟ್ಟ ಹಣವನ್ನು ತಮ್ಮ ಖರ್ಚಿಗೆ ಮಹಿಳೆಯರಿಗೆ ತೆಗೆಯಲು ಸಾಧ್ಯವಾಗುತ್ತಿಲ್ಲ. ಪಿಂಚಣಿದಾರರಿಗೆ ಕೂಡ ವೇತನ ಸಿಗುತ್ತಿಲ್ಲ. ಬ್ಯಾಂಕ್ ಸಿಬ್ಬಂದಿಗೆ ಕೂಡ ತೊಂದರೆಯಾಗುತ್ತಿದೆ.
ಇಷ್ಟೆಲ್ಲ ಸಮಸ್ಯೆಗಳ ಮಧ್ಯೆ ಇಲ್ಲಿನ ಗ್ರಾಮಸ್ಥರು ಸಮಸ್ಯೆ ಸರಿಹೋಗಬಹುದೆಂಬ ಆಶಾವಾದದಲ್ಲಿದ್ದಾರೆ.