ರಾಜ್ಯ

ಹೆಚ್ಚುತ್ತಿರುವ ಕೈಗಾರೀಕರಣ: ಕುಸಿಯುತ್ತಿದೆ ಕಾವೇರಿ ನೀರಿನ ಗುಣಮಟ್ಟ

Manjula VN

ಮಡಿಕೇರಿ: ಕರ್ನಾಟಕ ಜನಪ್ರಿಯ ಪ್ರವಾಸಿಗರ ತಾಣವೆಂದೇ ಹೇಳಲಾಗುವ ಕೊಡಗು ಜಿಲ್ಲೆಯಲ್ಲಿ ಹುಟ್ಟುವ ಕಾವೇರಿ ದಿನದಿಂದ ದಿನಕ್ಕೆ ಕಲುಷಿತಗೊಳ್ಳುತ್ತಿದ್ದು, ಕಾವೇರಿ ನೀರಿನ ಗುಣಮಟ್ಟ ಕುಸಿಯುತ್ತಿದೆ ಎಂಬ ಆಘಾತಕಾರಿ ಅಂಶ ಇದೀಗ ಬೆಳಕಿಗೆ ಬಂದಿದೆ.

ಕಾವೇರಿ ನದಿ ಸುತ್ತಲೂ ನಗರೀಕರಣ ಹಾಗೂ ಕೈಗಾರೀಕರಣ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ನೀರಿನ ಪ್ರಮಾಣ ಕುಸಿಯುತ್ತಿದೆ. ಇದರಿಂದ ಗ್ರಾಮೀಣ ಪ್ರದೇಶದಲ್ಲಿರುವ ಜನರಿಗೆ ಸಾಕಷ್ಟು ಸಮಸ್ಯೆಗಳು ಉಂಟಾಗತೊಡಗಿದೆ.

ಭಾಗಮಂಡಲ ಸಮೀಪದ ತಲಕಾವೇರಿಯಲ್ಲಿ ಜನಿಸಿ, ಕುಶಾಲನಗರ, ಕೂಡಿಗೆ, ಹೆಬ್ಬಾಲೆ ಗ್ರಾಮದ ಮೂಲಕ ಹರಿಯುವ ನದಿ ನೀರಿನ ಸರಾಸರಿ ಗುಣಮಟ್ಟವು 'ಬಿ' ಪ್ರಮಾಣದಲ್ಲಿದ್ದು, ಶುದ್ಧೀಕರಣದ ಬಳಿಕವಷ್ಟೇ ನೀರನ್ನು ಕುಡಿಯಬೇಕೆಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಹೇಳಿದ್ದಾರೆ.

ಈ ಹಿಂದೆ ಇದೇ ನೀರಿನ ಗುಣಮಟ್ಟಕ್ಕೆ ಅಧಿಕಾರಿಗಳು 'ಎ' ಪ್ರಮಾಣ ನೀಡಿದ್ದರು. ಯಾವುದೇ ಶುದ್ಧೀಕರಣವಿಲ್ಲದೆಯೇ ನೀರನ್ನು ನೇರವಾಗಿ ಕುಡಿಯಬಹುದೆಂದು ಅಧಿಕಾರಿಗಳು ಹೇಳಿದ್ದರು. ಆದರೆ, ಹೆಚ್ಚುತ್ತಿರುವ ನಗರೀಕರಣ ಹಾಗೂ ಕೈಗಾರೀಕರಣದಿಂದಾಗಿ ನೀರಿನ ಪ್ರಮಾಣ ಇದೀಗ 'ಬಿ' ಪ್ರಮಾಣಕ್ಕೆ ಇಳಿದಿದ್ದು, ಬೇಸಿಗೆಯಲ್ಲಿ 'ಸಿ' ದರ್ಜೆಗೆ ಕುಸಿಯಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಒಂದು ವೇಳೆ ನೀರಿನ ಗುಣಮಟ್ಟ 'ಡಿ' ದರ್ಜೆಗೆ ಇಳಿದಿದ್ದೇ ಆದರೆ, ಈ ನೀರು ಮನುಷ್ಯರ ಆರೋಗ್ಯಕ್ಕೆ ಮಾರಕವಾಗಲಿದೆ. ಆದರೆ, ಜಾನುವಾರುಗಳಿಗೆ ಈ ನೀರನ್ನು ಬಳಕೆ ಮಾಡಬಹುದಾಗಿದೆ. ಇದರಂತೆ ನೀರಿನ ಗುಣಮಟ್ಟ 'ಇ' ದರ್ಜೆಗೆ ಇಳಿದರೆ ಮನುಷ್ಯರು ಹಾಗೂ ಜಾನುವಾರುಗಳಿಗಿಬ್ಬರಿಗೂ ಮಾರಕವಾಗಲಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಹೇಳಿದ್ದಾರೆ.

ಈ ಕುರಿತಂತೆ ಮಾತನಾಡಿರುವ ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಗಣೇಶನ್ ಅವರು, ಮಣ್ಣಿನ ಸವೆತ ಹಾಗೂ ರಾಸಾಯನಿಕಗಳು ನದಿ ನೀರಿಗೆ ಸೇರುತ್ತಿರುವುದರಿಂದ ನೀರಿನ ಗುಣಮಟ್ಟ ಕುಸಿಯುತ್ತಿದೆ. ಸಿದ್ದಾಪುರ ಹಾಗೂ ಕುಡಿಗೆ ಪ್ರದೇಶಗಳಲ್ಲಿ ಮಾಂಸ ಮಾರಾಟಗಾರರು ತ್ಯಾಜ್ಯ ನೀರನ್ನು ನದಿಗೆ ಬಿಡುತ್ತಿದ್ದಾರೆ. ಹೀಗಿದ್ದರೂ ಗ್ರಾಮ ಪಂಚಾಯಿತಿಗಳು ಮಾತ್ರ ಕಣ್ಣುಮುಚ್ಚಿ ಕುಳಿತುಕೊಂಡಿರುತ್ತವೆ. ಜಾನುವಾರುಗಳನ್ನು ತೊಳೆದು ಅದೇ ನೀರನ್ನು ನದಿಗೆ ಬಿಡುವುದು ಹಾಗೂ ಇನ್ನಿತರೆ ತ್ಯಾಜ್ಯ ನೀರನಮ್ನು ನದಿಗೆ ಬಿಟ್ಟು ಮಾಲಿನ್ಯ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಬೇಸಿಗೆ ಕಾಲದಲ್ಲಿ ನೀರಿನ ಗುಣಮಟ್ಟ ಮತ್ತಷ್ಟು ಮಲಿನವಾಗುತ್ತದೆ. ಕಾಫಿ ಬೆಳೆಗಾರರು ಕೂಟ ತ್ಯಾಜ್ಯ ನೀರನ್ನು ನದಿಗೆ ಬಿಡುತ್ತಾರೆ. ಈ ಹಿನ್ನಲೆಯಲ್ಲಿ ಪಿಸಿಬಿ ಅಧಿಕಾರಿಗಳು ಹಲವು ಕಾಫಿ ತಿರುಳು ತೆಗೆಯುವ ಘಟಕಗಳನ್ನು ಬಂದ್ ಮಾಡಿಸಿದ್ದರು. ಇನ್ನು ಕೆಲವರು ತ್ಯಾಜ್ಯ ನೀರನ್ನು ನದಿ ಬಿಡಲು ಸುಲಭವಾಗುತ್ತದೆ ಎಂದು ನದಿ ಬಳಿಯೇ ಘಟಕಗಳನ್ನು ತೆಗೆದಿದ್ದಾರೆಂದು ಅವರು ಹೇಳಿದ್ದಾರೆ.

ಕಾವೇರಿ ನದಿ ಸಂರಕ್ಷಣೆ ಸಂಘದ ಸಂಚಾಲಕ ಎಂ.ಎನ್. ಚಂದ್ರ ಮೋಹನ್ ಮಾತನಾಡಿ, ರಾಜ್ಯ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳದೇ ಇದ್ದಲ್ಲಿ, ಕಾವೇದಿ ನದಿ ಕೂಡ ಮತ್ತೊಂದು ಗಂಗೆಯಂತೆ ಬದಲಾಗಲಿದೆ ಎಂದು ಹೇಳಿದ್ದಾರೆ.

ಕಾವೇರಿ ನದಿಯನ್ನು ಸಂರಕ್ಷಿಸಲು ಕೂಡಲೇ ಸರ್ಕಾರ ಸೂಕ್ತ ಕ್ರಮ ಹಾಗೂ ಕಾನೂನನ್ನು ರೂಪಿಸಬೇಕಿದೆ. ಸಾಕಷ್ಟು ಜನರು ತ್ಯಾಜ್ಯ ನೀರನ್ನು ನೇರವಾಗಿ ನದಿಗೆ ಬಿಡುತ್ತಿದ್ದಾರೆಂದು ಅವರು ಹೇಳಿದ್ದಾರೆ.

SCROLL FOR NEXT