ಮಂಗಳೂರು: ಕುಖ್ಯಾತ ಉಗ್ರಗಾಮಿ ಸಂಘಟನೆ ಇಸ್ಲಾಮಿಕ್ ಸ್ಟೇಟ್ ನ ಸಂಪರ್ಕ ಹೊಂದಿದ್ದಾನೆ ಎಂಬ ಆರೋಪದ ಮೇರೆಗೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಶಂಕಿತನೋರ್ವನನ್ನು ಬಂಧಿಸಿದ್ದು, ವಿಚಾರಣೆ ಬಳಿಕ ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆ ಮಾಡಿದ್ದಾರೆ.
ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೇರಳ ಮೂಲದ ಮುನಾಫ್ ರೆಹಮಾನ್ ಎಂಬಾತನನ್ನು ಎನ್ ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಸುಧೀರ್ಘ ವಿಚಾರಣೆ ಬಳಿಕ ಆತನಿಂದ ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆ ಮಾಡಿದ್ದಾರೆ. ಅಲ್ಲದೆ ಯಾವುದೇ ಕಾರಣಕ್ಕೂ ದೇಶ ಬಿಟ್ಟು ಹೋಗದಂತೆ ಎಚ್ಚರಿಕೆ ನೀಡಿ ಆತನ ಪಾಸ್ ಪೋರ್ಟ್ ಅನ್ನು ವಶಕ್ಕೆ ಪಡೆದಿದ್ದಾರೆ.
ಮುನಾಫ್ ರೆಹಮಾನ್ ಮೂಲತಃ ಕೇರಳದವನಾಗಿದ್ದು, ಮಂಗಳೂರಿನಲ್ಲಿ ಕುಟುಂಬದೊಂದಿಗೆ ನೆಲೆಸಿದ್ದ. ಕಳೆದ ಕೆಲ ದಿನಗಳಿಂದ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯತ್ತ ಆಕರ್ಷಿತನಾಗಿ ಮಾನಸಿಕವಾಗಿ ಐಸಿಸ್ ಸೇರ್ಪಡೆಯಾಗುವ ಸಿದ್ದತೆಯಲ್ಲಿದ್ದ ಎಂದು ಹೇಳಲಾಗುತ್ತಿತ್ತು. ಅಲ್ಲದೇ ಆತ ಕೇರಳದಲ್ಲಿ ಉಗ್ರ ತರಬೇತಿ ಕೂಡ ಪಡೆದಿದ್ದ ಎಂಬ ಆರೋಪಗಳು ಕೇಳಿಬಂದಿದ್ದವು. ಇದೇ ಶಂಕೆಯ ಮೇರೆಗೆ ಎನ್ ಐಎ ಅಧಿಕಾರಿಗಳು ಆತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದರು. ಆದರೆ ವಿಚಾರಣೆ ವೇಳೆ ಆತ ತಾನು ಯಾವುದೇ ಉಗ್ರ ಸಂಘಟನೆಗೂ ಸೇರುವುದಿಲ್ಲ ಮತ್ತು ಉಗ್ರ ತರಬೇತಿಯನ್ನೂ ಪಡೆದಿಲ್ಲ ಎಂಬ ಹೇಳಿಕೆ ನೀಡಿದ್ದರಿಂದ ಆತನನ್ನು ಹಲವು ಷರತ್ತುಳ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಪ್ರಸ್ತುತ ಆತನ ಪಾಸ್ ಪೋರ್ಟ್ ವಶಕ್ಕೆ ಪಡೆದಿರುವ ಅಧಿಕಾರಿಗಳು ಆತನ ಚಲನವಲನದ ಮೇಲೆ ನಿಗಾ ಇಟ್ಟಿದ್ದು, ಯಾವುದೇ ಕಾರಣಕ್ಕೂ ಅನುಮತಿ ಇಲ್ಲದೇ ವಿದೇಶಕ್ಕೆ ಹಾರದಂತೆ ಎಚ್ಚರಿಕೆ ನೀಡಿದ್ದಾರೆ. ಅಂತೆಯೇ ಉಗ್ರ ಸಂಘಟನೆ ಪರ ಪ್ರಚಾರ ಮಾಡಬಾರದು. ಎನ್‌ಐಎ ತನಿಖೆಗೆ ಕರೆದಾಗ ಹಾಜರಾಗಬೇಕು, ವಿದೇಶ ಪ್ರಯಾಣ ಮಾಡಬಾರದು ಎಂದು ಷರತ್ತುಗಳನ್ನೊಳಗೊಂಡ ನೊಟೀಸ್ ನೀಡಿ ಆತನನ್ನು ಬಿಡಗಡೆ ಮಾಡಿದ್ದಾರೆ.