ರಾಜ್ಯ

ಹಲ್ಲೆ ಆರೋಪ: ಡಿ.31ರವರೆಗೆ ಕೆಎಎಸ್ ಅಧಿಕಾರಿ ಭೀಮಾ ನಾಯಕ್ ಸಿಐಡಿ ವಶಕ್ಕೆ

Lingaraj Badiger
ರಾಮನಗರ: ಬೆಂಗಳೂರಿನ ವಿಶೇಷ ಭೂ ಸ್ವಾಧೀನಾಧಿಕಾರಿ ಕಚೇರಿಯ ಕಾರು ಚಾಲಕ ಕೆ.ಸಿ.ರಮೇಶ್ ಗೌಡ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿ, ಸೇವೆಯಿಂದ ಅಮಾನತುಗೊಂಡಿರುವ ಕೆಎಎಸ್ ಅಧಿಕಾರಿ ಭೀಮಾ ನಾಯಕ್ ಅವರನ್ನು ಡಿಸೆಂಬರ್ 31ರವರೆಗೆ ಸಿಐಡಿ ವಶಕ್ಕೆ ನೀಡಲಾಗಿದೆ.
ರಮೇಶ್ ಗೌಡ ಸ್ನೇಹಿತ ಸುರೇಶ್ ಎಂಬುವವರು ಭೀಮಾನಾಯಕ್ ಅವರ ವಿರುದ್ಧ ನೀಡಿದ್ದ ದೂರಿನ ವಿಚಾರಣೆಗೆ ಸಂಬಂಧಿಸಿದಂತೆ ರಾಮನಗರದ ಪ್ರಧಾನ ಸಿವಿಲ್ ಕೋರ್ಟ್ ಇಂದು ಆರೋಪಿಯನ್ನು ಮತ್ತೆ ಸಿಐಡಿ ವಶಕ್ಕೆ ನೀಡಿ ಆದೇಶಿಸಿದೆ.
ಸದ್ಯ ಆತ್ಮಹತ್ಯೆ ಪ್ರಕರಣ ಸಂಬಂಧ ಸಿಐಡಿ ವಶದಲ್ಲಿದ್ದ ಭೀಮಾನಾಯಕ್ ಅವರ ವಿರುದ್ಧ ಸುರೇಶ್ ಅವರು ಕಳೆದ ಡಿಸೆಂಬ್ 12ರಂದು ರಾಮನಗರದ ಐಜೂರು ಪೊಲೀಸ್ ಠಾಣೆ ದೂರು ನೀಡಿದ್ದು, ದೂರಿನಲ್ಲಿ ಭೀಮಾನಾಯಕ್ ಅವರು 50 ಲಕ್ಷ ರುಪಾಯಿ ಕಪ್ಪು ಹಣ ಬಿಳಿ ಮಾಡಲು ಬಂದಿದ್ದ ವೇಳೆ ರಾಮನಗರದ ಎಪಿಎಂಸಿ ಯಾರ್ಡ್ ಬಳಿ ತನ್ನನ್ನು ಅಪಹರಿಸಿ ಹಲ್ಲೆಗೆ ಯತ್ನಿಸಿದ್ದರು ಎಂದು ಆರೋಪಿಸಿದ್ದಾರೆ. ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿಐಡಿಗೆ ಒಪ್ಪಿಸಿತ್ತು.
ಡಿಸೆಂಬರ್ 6ರಂದು ಆತ್ಮಹತ್ಯೆ ಮಾಡಿಕೊಂಡಿದ್ದ ರಮೇಶ್ ಅವರು, ನನ್ನ ಸಾವಿಗೆ ಭೀಮಾನಾಯಕ್ ಹಾಗೂ ಅವರ ಖಾಸಗಿ ಕಾರು ಚಾಲಕ ಮಹಮದ್‌ ಅವರೇ ನನ್ನ ಸಾವಿಗೆ ಕಾರಣ ಎಂದು ಡೆತ್ ನೋಟ್ ಬರೆದಿಟ್ಟಿದ್ದರು. ಈ ಸಂಬಂಧ ಮದ್ದೂರು ಠಾಣೆಯಲ್ಲಿ ದೂರು ದಾಖಲಾದ ನಂತರ ರಾಜ್ಯ ಸರ್ಕಾರ ಪ್ರಕರಣವನ್ನು ಸಿಐಡಿಗೆ ವಹಿಸಿತ್ತು.
ರಮೇಶ್ ಅವರು ತಮ್ಮ 17 ಪುಟಗಳ ಡೆತ್ ನೋಟ್ ನಲ್ಲಿ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಹೆಸರು ಪ್ರಸ್ತಾಪ ಮಾಡಿದ್ದು, ರೆಡ್ಡಿಯ ಸುಮಾರು 100 ಕೋಟಿ ರುಪಾಯಿಯಷ್ಟು ಕಪ್ಪು ಹಣವನ್ನು ಭೀಮಾನಾಯ್ಕ್ ಅವರು ಶೇ.20ರಷ್ಟು ಕಮಿಷನ್ ಪಡೆದು ವೈಟ್  ಮಾಡಿಕೊಟ್ಟಿರುವುದಾಗಿ ಆರೋಪಿಸಿದ್ದಾರೆ.
SCROLL FOR NEXT