ಕಸ ಮತ್ತು ಅವಶೇಷಗಳಿಂದ ಕೆರೆಯ ಒಡ್ಡು ಮೂಲಕ ನೀರು ಸರಾಗ ಹರಿದು ಹೋಗದಿರುವ ಸ್ಥಿತಿಯಲ್ಲಿ ಬೆಂಗಳೂರಿನ ಅಲಸೂರು ಕೆರೆ
ಬೆಂಗಳೂರು: ಇಲ್ಲಿನ ಪ್ರಸಿದ್ಧ ಅಲಸೂರು ಕೆರೆ ಕಳೆದ ಮೇಯಲ್ಲಿ ಭಾರೀ ಸುದ್ದಿಯಲ್ಲಿತ್ತು. ಸಾವಿರಾರು ಮೀನುಗಳು ಮೃತಪಟ್ಟು ತೇಲಾಡುತ್ತಿದ್ದವು. ರಾಜಕೀಯ ನಾಯಕರು, ಪಾಲಿಕೆ ಅಧಿಕಾರಿಗಳು, ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಎಚ್ಚರಿಕೆ ವಹಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಆದರೆ ಇತ್ತೀಚಿನ ಮಳೆ ಅವರ ಪ್ರಯತ್ನಗಳು ಸಾಕಾಗಲಿಲ್ಲ ಎಂದು ದೃಢಪಡಿಸಿದೆ.
ಹತ್ತಿರದ ಒಳಚರಂಡಿಯಿಂದ ನೀರನ್ನು ಫಿಲ್ಟ್ ಮಾಡಿ ಬಲೆಯಲ್ಲಿ ಸೋಸಿ ನಂತರ ಕೊಳಕ್ಕೆ ಬಿಡಬೇಕಾಗಿತ್ತು. ಆದರೆ ಮಳೆ ಬಂದಾಗ ಒಳಚರಂಡಿಗಳು ತುಂಬಿ ತುಳುಕಿ ಹೋಗುತ್ತಿದ್ದು ಬಲೆಗಳು ಮತ್ತು ಕೆರೆಯ ಒಡ್ಡುಗಳ ಸರಿಯಾದ ನಿರ್ವಹಣೆಯಿಲ್ಲದೆ ನೀರು ಉಕ್ಕಿ ಸುತ್ತಮುತ್ತಲ ನಿವಾಸಿಗಳ ಕಂಪೌಂಡ್ ಒಳಗೆ ಬರುತ್ತದೆ.
ನೀರನ್ನು ಫಿಲ್ಟರ್ ಮಾಡುವ ಬಲೆ ಮತ್ತು ಒಡ್ಡುಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುತ್ತಿರಬೇಕು. ಆಗ ಸರಾಗವಾಗಿ ನೀರು ಹೋಗುತ್ತದೆ. ಆದರೆ ಈ ಬಗ್ಗೆ ಯಾರೂ ಗಮನಹರಿಸುತ್ತಿಲ್ಲ. ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿದಾಗ ಕೆರೆಯ ಸುತ್ತಮುತ್ತ ಕಸ ಕಡ್ಡಿ, ಪ್ಲಾಸ್ಟಿಕ್ ಕವರ್ ಗಳು ಬಿದ್ದಿದ್ದವು.
ಅಧಿಕಾರಿಗಳು, ಅಲಸೂರು ಕೆರೆಯ ಸುತ್ತಮುತ್ತ ಸ್ವಚ್ಛವಾಗಿಡುವ ಅನೇಕ ಭರವಸೆಗಳನ್ನು ಕೊಡುತ್ತಾರೆ. ಆದರೆ ಅವುಗಳನ್ನು ಈಡೇರಿಸುವುದಿಲ್ಲ ಎನ್ನುತ್ತಾರೆ ಅಲಸೂರು ಕೆರೆ ನಿವಾಸಿಗಳ ಅಭಿವೃದ್ಧಿ ಸಂಘದ ಅಧ್ಯಕ್ಷ ಪುರುಷೋತ್ತಮ ವೆಂಕಟ್ ರಮಣ.